ಬೆಂಗಳೂರು, (ಜ.01): ಸಿಎಂ ಯಡಿಯೂರಪ್ಪನವರಿಗೆ ಅವರ ಸ್ಥಾನ ಕೈತಪ್ಪುವ ಭಯ ಕಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಇಂದು (ಗುರುವಾರ) ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್,​ ಜನವರಿ 15ರ ನಂತರ ಹೊಸ ನಾಯಕರು ಬರ್ತಾರೆ ಎಂದು ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಇನ್ನೂ ಎರಡೂವರೆ ವರ್ಷ ನಾನೇ ಸಿಎಂ ಅಂತಾ ಯಡಿಯೂರಪ್ಪ ಹೇಳಿದ್ದು ಬೇರೆ ಅರ್ಥ ಕೊಡುವಂತಿದೆ ಎಂದರು. 

ನಾಯಕತ್ವದ ಬದಲಾವಣೆಗೆ ಸಿಎಂ ಮಹತ್ವದ ಪ್ರತಿಕ್ರಿಯೆ..!

ಸದ್ಯ ಅವರೇ ಸಿಎಂ ಆಗಿದ್ದಾರೆ, ಅವರು ಸಿಎಂ ಅಲ್ಲ ಅಂತಾ ಯಾರು ಹೇಳಿಲ್ವಲ್ಲ. ಹೀಗಿರುವಾಗ ಮತ್ತೆ ಮತ್ತೆ ಎರಡುವರೆ ವರ್ಷ ನಾನೇ ಸಿಎಂ ಎಂದು ಹೇಳಿಕೊಳ್ಳುವುದು ಏಕೆ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ನೀವು ಯಾವಾಗ ಇಳೀತೀರಿ ಎಂದು ನಾವು ಕೇಳಿಲ್ಲ. ಅವರೇ ಇನ್ನೂ ಎರಡು ವರ್ಷ ನಾನೇ ಸಿಎಂ ಅಂತ ಹೇಳಿದ್ದಾರೆ. ಆ ಮೂಲಕ ಅವರೇ ಸೆಲ್ಫ್​​ ಸರ್ಟಿಫಿಕೇಟ್​ ಪಡೆದುಕೊಂಡಿದ್ದಾರೆ. ಬಿಜೆಪಿ ಶಾಸಕರು ಸಹ ಮಾತನಾಡುತ್ತಿದ್ದಾರೆ. ಇದನ್ನು ನೋಡಿದ್ರೆ ಬಿಜೆಪಿಯಲ್ಲಿ ಏನೋ ನಡೆಯುತ್ತಿದೆ ಅನ್ನೋದು ಗೊತ್ತಾಗ್ತಿದೆ. ಯಡಿಯೂರಪ್ಪ ಸಿಎಂ ಕುರ್ಚಿ ಚರ್ಚೆಗೆ ಇಂಬು ನೀಡುತ್ತಿದೆ ಎಂದು ಹೇಳಿದರು.

ಪಂಚಾಯತ್​ ಚುನಾವಣಾ ಫಲಿತಾಂಶ ನನಗೆ ಖುಷಿ ತಂದಿದೆ. ನಮ್ಮ ಬೆಂಬಲಿತ ಸದಸ್ಯರನ್ನ ಸೆಳೆಯುವ ಕೆಲಸವಾಗುತ್ತಿದೆ,  ಇವರ ದುಡ್ಡಿನ ನಡುವೆ ನಮ್ಮ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ. ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ಈ ವರ್ಷ ಸಂಘಟನೆಯ ವರ್ಷ. ಹೋರಾಟದ ವರ್ಷ ಎಂದು ತಿಳಿಸಿದರು.