ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್‌ ಬೆಳಗುತ್ತಿದ್ದರೆ, ಬಿಜೆಪಿ ಮುಳುಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಾಖ್ಯಾನಿಸಿದರು. ಪಟ್ಟಣದ ಗುರುಭವದ ಆವರಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

ತುರುವೇಕೆರೆ (ಜ.05): ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್‌ ಬೆಳಗುತ್ತಿದ್ದರೆ, ಬಿಜೆಪಿ ಮುಳುಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಾಖ್ಯಾನಿಸಿದರು. ಪಟ್ಟಣದ ಗುರುಭವದ ಆವರಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್‌ ಒಂದು ಗೂಡಿಸುವ ಕಾರ್ಯ ಮಾಡುತ್ತಿದೆ. ಬಿಜೆಪಿ ಕತ್ತರಿಯ ರೀತಿ ಕೆಲಸ ಮಾಡಿದರೆ, ಕಾಂಗ್ರೆಸ್‌ ಸೂಜಿ ದಾರದ ರೀತಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಸರ್ಕಾರ ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯದಲ್ಲಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಪರ್ಸೆಂಟೇಜ್‌ನ್ನು ಕೊಡಲಾಗದೇ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. 

ಇತ್ತ ರೈತಾಪಿಗಳು ಬೆಳೆದ ಬೆಲೆಗೆ ಸೂಕ್ತ ಬೆಲೆ ದೊರೆಯದೇ ಅವರೂ ಸಹ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಹಾಗಾಗಿ ಇದೊಂದು ಕೊಲೆಗಡುಕ ಸರ್ಕಾರವಾಗಿದೆ ಎಂದು ಡಿ.ಕೆ.ಶಿವಕುಮಾರ್‌ ರಾಜ್ಯ ಸರ್ಕಾರದ ಬಗ್ಗೆ ಕಿಡಿಕಾರಿದರು. ರಾಜ್ಯದ ಜನರು ಬಿಜೆಪಿಯ ದುರಾಡಳಿತದಿಂದ ರೋಸಿ ಹೋಗಿದ್ದಾರೆ. ಎಂದಿಗೆ ಈ ಸರ್ಕಾರವನ್ನು ಕೊನೆಗಾಣಿಸುವೆವೋ ಎಂದು ಕಾತರದಿಂದ ಕಾಯುತ್ತಿದ್ದಾರೆ. ಕೇಂದ್ರದ ಮೋದಿಯವರ ಸರ್ಕಾರ ಅಚ್ಚೇ ದಿನ್‌ ಎಂದು ಹೇಳಿದ್ದರೂ ಇದುವರೆಗೂ ಯಾವುದೇ ಅಚ್ಚೇ ದಿನ್‌ ಬರಲಿಲ್ಲ. ಬರೀ ನೋವಿನ ದಿನಗಳೇ ತುಂಬಿ ತುಳುಕುತ್ತಿವೆ. ಬೆಳಕು ಹರಿಯುತ್ತಿದ್ದಂತೆ ಯಾವ್ಯಾವ ವಸ್ತುವಿನ ಬೆಲೆ ಹೆಚ್ಚು ಆಗುತ್ತಪ್ಪಾ ಎಂಬ ಚಿಂತೆ. ಪೆಟ್ರೋಲ್‌, ಡೀಸೆಲ್‌, ಅಕ್ಕಿ, ಗೋಧಿ, ಗ್ಯಾಸ್‌, ಅಡುಗೆ ಎಣ್ಣೆ ಸೇರಿದಂತೆ ವಿವಿಧ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಿದೆ. 

ತಲೆಗೆ ಮೀಸಲಾತಿ ತುಪ್ಪ ಸವರಿದ ಬಿಜೆಪಿ ಸರ್ಕಾರ: ಡಿ.ಕೆ.ಶಿವಕುಮಾರ್

ಬಡವರಿಗೆ ಈ ಸರ್ಕಾರದಲ್ಲಿ ಉಳಿಗಾಲವಿಲ್ಲ. ಇದು ಶ್ರೀಮಂತರ ಪರವಾಗಿರುವ ಸರ್ಕಾರ. ಮುಂಬರುವ ಚುನಾವಣೆಯಲ್ಲಿ ನಮಗೆ ಶಕ್ತಿ ಕೊಡಿ. ನಾವು ನಿಮಗೆ ಶಕ್ತಿ ತುಂಬುವೆವು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳು ಜನರಿಗೆ ಸಾಕು ಸಾಕಾಗಿವೆ ಎಂದರು. ರಾಜ್ಯದಲ್ಲಿ ಈಗ ಕಾಂಗ್ರೆಸ್‌ ಪಕ್ಷ ಜನರ ಆಶಾಕಿರಣವಾಗಿದೆ. ಯಾವುದೇ ಷರತ್ತುಗಳು ಇಲ್ಲದೇ ಹಲವಾರು ಮಾಜಿ, ಹಾಲಿ ಶಾಸಕರು ಮತ್ತು ವಿಧಾನ ಪರಿಷತ್‌ನ ಸದಸ್ಯರು ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಇದರ ಅರ್ಥ ಕಾಂಗ್ರೆಸ್‌ ಸದೃಢವಾಗಿದೆ ಅಂತ. ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಟಿಕೆಟ್‌ಗೆ ಬೇಡಿಕೆ ಇದೆ. ಯಾರಿಗೇ ಪಕ್ಷ ಟಿಕೆಟ್‌ ಕೊಟ್ಟರೂ ಸಹ ಕಾಂಗ್ರೆಸ್‌ ಗೆಲ್ಲಿಸಲು ರಾಜ್ಯದ ಜನರು ತಯಾರಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಕಾಂಗ್ರೆಸ್‌ಗೆ ದತ್ತ ಅರ್ಜಿ: ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ಗೆ ಬರುತ್ತಿರುವ ಮತ್ತು ಬಂದಿರುವ ಹಲವಾರು ಮುಖಂಡರ ಹೆಸರನ್ನು ಹೇಳಿದ ಡಿ.ಕೆ.ಶಿವಕುಮಾರ್‌ ಜೆಡಿಎಸ್‌ನ ದತ್ತರವರೂ ಸಹ ಕಾಂಗ್ರೆಸ್‌ ಸೇರಲು ಅರ್ಜಿ ಹಾಕಿಕೊಂಡಿದ್ದಾರೆ. ಅವರನ್ನೂ ಸಹ ಶೀಘ್ರದಲ್ಲೇ ಭೇಟಿ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿದರು. ಹೊಸಬರು ಹಳಬರು ಎಂಬ ಭೇದಭಾವವಿಲ್ಲದೇ ಎಲ್ಲರೂ ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸಬೇಕೆಂದು ಡಿ.ಕೆ.ಶಿವಕುಮಾರ್‌ ಮನವಿ ಮಾಡಿಕೊಂಡರು. ಬಿಜೆಪಿ ಸರ್ಕಾರದ ಸಾಧನೆಯ ಸಾಕ್ಷೀ ಕಲ್ಲು ಯಾವುದೂ ಇಲ್ಲ. ಸಾಕ್ಷಿ ಬಿಟ್ಟಿರುವುದು ಎಂದರೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ ಸಂದರ್ಭದಲ್ಲಿ ಹಾಕಿದ ಕಣ್ಣೀರು. ಬಿಜೆಪಿಯವರು ಉತ್ತಮ ಆಡಳಿತ ನೀಡಿದ್ದರೆ, ಅವರೇಕೆ ರಾಜೀನಾಮೆ ನೀಡಬೇಕಿತ್ತು, ಕಣ್ಣೀರು ಹಾಕಬೇಕಿತ್ತು ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು.

136ರಲ್ಲಿ ಗೆಲುವು: ಕಾಂಗ್ರೆಸ್‌ ಪಕ್ಷ ಮಾಡಿಸಿರುವ ಸರ್ವೆಯಲ್ಲಿ ಕಾಂಗ್ರೆಸ್‌ ಪಕ್ಷ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಬಿಜೆಪಿ 60 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವರದಿ ಹೇಳಿದೆ. ಹಾಗಾಗಿ ರಾಜ್ಯದ ಜನರು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವರು ಎಂಬ ದೃಢ ವಿಶ್ವಾಸ ತಮಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರೇ ಟೈಮ್‌ ವೇಸ್ಟ್‌ ಮಾಡಿಕೊಳ್ಳಬೇಡಿ. ಇದು ನಿಮ್ಮ ಮನೆ. ಬನ್ನಿ ಕಾಂಗ್ರೆಸ್‌ ಪಕ್ಷ ಸೇರಿಕೊಳ್ಳಿ. ನಮಗೆ ಹೊಸಬರು ಹಳಬರು ಎಂಬ ಭೇದಭಾವವಿಲ್ಲ. ಎಲ್ಲರನ್ನೂ ಗೌರವವಾಗಿ ನೋಡಿಕೊಳ್ಳುವೆವು. ಬನ್ನಿ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಏರುವುದು ಸೂರ್ಯ ಇರುವುದಷ್ಠೇ ಸತ್ಯ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಏನ್‌ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ: ಡಿ.ಕೆ.ಶಿವಕುಮಾರ್‌

ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯರಾದ ನಾಗರಾಜ್‌ ಯಾದವ್‌, ಭೈರತಿ ಸುರೇಶ್‌, ರಾಜೇಂದ್ರ ರಾಜಣ್ಣ, ಮಾಜಿ ಶಾಸಕರಾದ ಷಡಕ್ಷರಿ, ಜಯಚಂದ್ರ, ಕೆ.ಎನ್‌.ರಾಜಣ್ಣ, ಬೆಮಲ್‌ ಕಾಂತರಾಜ್‌, ತಾಲೂಕಿನ ಮುಖಂಡರಾದ ಚೌದ್ರಿ ರಂಗಪ್ಪ, ಸುಬ್ರಮಣೀ ಶ್ರೀಕಂಠೇಗೌಡ, ಗೀತಾರಾಜಣ್ಣ, ಎನ್‌.ಆರ್‌.ಜಯರಾಮ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ಗೌಡ, ಬಿ.ಎಸ್‌.ವಸಂತಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಪ್ರಸನ್ನ ಕುಮಾರ್‌, ಎಚ್‌.ಕೆ.ನಾಗೇಶ್‌, ಮುರುಳೀಧರ ಹಾಲಪ್ಪ ಸೇರಿದಂತೆ ಹಲವಾರು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.