ತಲೆಗೆ ಮೀಸಲಾತಿ ತುಪ್ಪ ಸವರಿದ ಬಿಜೆಪಿ ಸರ್ಕಾರ: ಡಿ.ಕೆ.ಶಿವಕುಮಾರ್
ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಹೆಸರಲ್ಲಿ ಸರ್ಕಾರ ಮೂಗಿಗಲ್ಲ, ತಲೆಗೇ ತುಪ್ಪ ಸವರಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಹುಬ್ಬಳ್ಳಿ (ಜ.03): ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಹೆಸರಲ್ಲಿ ಸರ್ಕಾರ ಮೂಗಿಗಲ್ಲ, ತಲೆಗೇ ತುಪ್ಪ ಸವರಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ನೀಡಿದ ಮೀಸಲಾತಿಯಲ್ಲಿ ಸೇರಿಸುವುದಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಇದನ್ನು ಹೇಗೆ ಒಪ್ಪುತ್ತದೆ ? ಎಸ್ಸಿ-ಎಸ್ಟಿಮೀಸಲಾತಿ ಹೆಚ್ಚಳ ಮಾಡಿದರೂ ಮುಂದೆ ಅದು ಜಾರಿಯಾಗಿಲ್ಲ. ಇನ್ನು 90 ದಿನದಲ್ಲಿ ಸರ್ಕಾರವೇ ಇರುವುದಿಲ್ಲ. ಇನ್ನೂ ಮೀಸಲಾತಿ ಹೇಗೆ ಜಾರಿ ಮಾಡುತ್ತಾರೆ? ಎಂದರು.
ಮೊದಲ ಪಟ್ಟಿ ಸಿದ್ಧ: ಕಾಂಗ್ರೆಸ್ಸಿನ ಮೊದಲ ಪಟ್ಟಿ ಬಹುತೇಕ ಸಿದ್ಧಗೊಂಡಿದೆ. ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ಎಂದ ಅವರು,ಟಿಕೆಟ್ ಸಿಗದವರು ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ, ನನ್ನ ಅಧ್ಯಕ್ಷತೆಯಲ್ಲಿ ಒಳ ಒಪ್ಪಂದಕ್ಕೆ ಅವಕಾಶ ನೀಡುವುದಿಲ್ಲ. ಅದೆಲ್ಲವೂ ಮಾಧ್ಯಮಗಳ ಸೃಷ್ಟಿಎಂದರು.
ಏನ್ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ: ಡಿ.ಕೆ.ಶಿವಕುಮಾರ್
ಲಾಡ್‌ಗೆ ಟಾಂಗ್: ನಾನು ಮತ್ತು ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧಿಸದೆ ರೆಸ್ವ್ ಮಾಡುವಂತೆ ಮಾಜಿ ಸಚಿವ ಸಂತೋಷ ಲಾಡ್ ನೀಡಿರುವ ಹೇಳಿಕೆಗೆ, ಅವರು ರಾಷ್ಟ್ರೀಯ ನಾಯಕರಾಗಿ ದ್ದಾರೆ ಅವರ ಸಲಹೆಯನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಟಾಂಗ್ ನೀಡಿದರು.
2023ರಲ್ಲಿ ಬದಲಾವಣೆ ಆಗುತ್ತೆ, ಕಾಂಗ್ರೆಸ್ ಅಧಿಕಾರಕ್ಕೇರುತ್ತೆ: ರಾಜ್ಯದಲ್ಲಿ 2023ರಲ್ಲಿ ಹೊಸ ಬದಲಾವಣೆಯಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ತನ್ನ ಸ್ವಂತ ಕಾಲ ಮೇಲೆ ನಿಂತುಕೊಂಡು ಸರ್ಕಾರ ರಚನೆ ಮಾಡುತ್ತದೆ. ಜನ ಕಾಂಗ್ರೆಸ್ ಪಕ್ಷಕ್ಕೆ ಖಂಡಿತವಾಗಿಯೂ ಆಶೀರ್ವಾದ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರ ಜತೆಗೆ ಮಾತನಾಡಿ, ಬಿಜೆಪಿಯವರು ಕಳೆದ ಚುನಾವಣೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ 550ನ್ನೂ ಜಾರಿ ಮಾಡಿಲ್ಲ. ನಮ್ಮ ಪಕ್ಷ ಕೊಟ್ಟಿದ್ದ 169 ಯೋಜನೆಗಳ ಪೈಕಿ 168 ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.
ಅಧಿಕಾರ ಇದ್ದಾಗ ಬಿಜೆಪಿಯವರು ಕೆಲಸ ಮಾಡಿಲ್ಲ. ಇದೀಗ ಅಧಿಕಾರ ಹೋಗುವ ಸಮಯದಲ್ಲಿ ಯೋಜನೆ ಘೋಷಣೆ ಮಾಡಿದರೆ ಪ್ರಯೋಜನವೇನು? ಉಳಿದಿರುವ 100 ದಿನಗಳಲ್ಲಿ ಯಾವ ಯೋಜನೆ ಜಾರಿ ಆಗುತ್ತದೆ? ಇದು ಕೇವಲ ಕಾಗದದ ಮೇಲೆ ಉಳಿಯುವ ಯೋಜನೆ ಅಷ್ಟೆಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಶಾಲಾ ಮಕ್ಕಳಲ್ಲ: ಮೀಸಲಾತಿ ವಿಚಾರವಾಗಿ ರಾಜ್ಯ ಸರ್ಕಾರ ನಮ್ಮನ್ನು ಶಾಲಾ ಮಕ್ಕಳೆಂದು ಭಾವಿಸಿದಂತಿದೆ. ಮೂರು ತಿಂಗಳ ನಂತರ ಎಷ್ಟುಪರ್ಸೆಂಟೇಜ್ ಮೀಸಲಾತಿ ಅಂತ ನಿರ್ಧರಿಸುತ್ತಾರಂತೆ. ಮೀಸಲಾತಿ ವಿಷಯವಾಗಿ ತಗಾದೆ ತೆಗೆದರೆ ಪಕ್ಷದಿಂದ ಕಿತ್ತು ಹಾಕುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಮೀಸಲಾತಿ ಬಗ್ಗೆ ಅಷ್ಟೆಲ್ಲ ಮಾತನಾಡುತ್ತಿದ್ದವರು ಈಗ ಯಾಕೆ ಮಾತನಾಡುತ್ತಿಲ್ಲ? ಬೆಂಬಲ ನೀಡಬೇಕು ಅಥವಾ ವಿರೋಧಿಸಬೇಕು. ಬಾಯ್ಮುಚ್ಚಿಕೊಂಡಿರೋದು ಏಕೆ ಎಂದು ಯತ್ನಾಳ ಅವರ ನಡೆಯನ್ನು ಪ್ರಶ್ನಿಸಿದರು.
ಬಿಜೆಪಿ ಬಗ್ಗೆ ಮಾತನಾಡುವದಕ್ಕಿಂತ ಡಿಕೆಶಿ ತಮ್ಮ ಪಕ್ಷ ಸರಿಮಾಡಿಕೊಳ್ಳಲಿ: ಸಚಿವ ನಾಗೇಶ್
ಜತೆಗೆ, ಮುಖ್ಯಮಂತ್ರಿ ಖುದ್ದಾಗಿ ಈ ಬಗ್ಗೆ ಏಕೆ ನಿರ್ಧಾರ ಪ್ರಕಟಿಸಿಲ್ಲ? ಇವರು ಕೊಡುವ ಚಾಕೊಲೆಟ್ ಒಪ್ಪಲು ಸಾಧ್ಯವಿಲ್ಲ. ಇವರದು ಬರೀ ಮೋಸ. ಎಲ್ಲ ಸಮಾಜಕ್ಕೂ ಬ್ರಹ್ಮಾಂಡ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ನಾವು ಸಮಬಾಳು, ಸಮಪಾಲು ಎಂಬ ನೀತಿ ಮೇಲೆ ಕೇಳುತ್ತಿದ್ದೇವೆ. ಒಕ್ಕಲಿಗರು ಶೇ.12 ರಷ್ಟು ಮೀಸಲಾತಿ ಕೇಳಿದ್ದು ಅದನ್ನು ಘೋಷಣೆ ಮಾಡಲಿ. ಪಂಚಮಸಾಲಿ ಸಮಾಜ ಆಗ್ರಹಿಸಿರುವ ಬೇಡಿಕೆಯನ್ನೂ ಘೋಷಿಸಲಿ. ಪರಿಶಿಷ್ಟರಿಗೆ ನೀಡಲಾಗಿರುವ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಲಿ ಎಂದು ಹೇಳಿದರು.