ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ: ಡಿ.ಕೆ.ಶಿವಕುಮಾರ್
ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೇ ಇಲ್ಲ. ಜನರಿಗೆ ತೊಂದರೆ ಕೊಡುವ, ಭಾವನೆ ಕೆರಳಿಸುವ, ಭ್ರಷ್ಟಾಚಾರ ಹಾಗೂ ಪರ್ಸಂಟೇಜ್ ಬಿಟ್ಟರೆ ಆ ಪಕ್ಷದಲ್ಲಿ ಬೇರೇನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮೂಡಿಗೆರೆ (ನ.30): ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೇ ಇಲ್ಲ. ಜನರಿಗೆ ತೊಂದರೆ ಕೊಡುವ, ಭಾವನೆ ಕೆರಳಿಸುವ, ಭ್ರಷ್ಟಾಚಾರ ಹಾಗೂ ಪರ್ಸಂಟೇಜ್ ಬಿಟ್ಟರೆ ಆ ಪಕ್ಷದಲ್ಲಿ ಬೇರೇನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಅವರು ಪಟ್ಟಣದ ಅಡ್ಯಂತಾಯ ರಂಗಮಂದಿಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಸರಕಾರ 3 ಬಾರಿ ನಡೆಸಿದ ಆಡಳಿತದಲ್ಲಿ ಜನರ ಬದುಕು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.
ಈಗ ಅಧಿಕಾರ ಮುಗಿಯುತ್ತಾ ಬಂದಿದೆ. ಇಲ್ಲಿಯವರೆಗೆ ಅಧಿಕಾರವಿದ್ದಾಗಲೇ ಜನರ ಬದುಕು ಹಸನು ಮಾಡಲು ಸಾಧ್ಯವಾಗಿಲ್ಲ. ಇನ್ನು ಅಧಿಕಾರ ಕಳೆದುಕೊಳ್ಳುವ ಸಮಯದಲ್ಲಿ ಸಾಧ್ಯವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಜಾತಿ ಮೇಲಿಲ್ಲ, ನೀತಿ ಮೇಲಿದೆ. ಇಂದಿರಾಗಾಂಧಿ, ರಾಜೀವ್‌ಗಾಂಧಿ, ನೆಹರು, ಲಾಲ್ ಬಹದ್ದೂರು ಶಾಸ್ತ್ರಿ ಪ್ರಧಾನಿಯಾಗಿದ್ದಾಗ ಬಡವರಿಗೆ ನಿವೇಶನ, ಜಮೀನು, ಬಗರ್ ಹುಕಂ ಸಾಗುವಳಿ ಸಕ್ರಮ, ಸಾಲ ಮನ್ನ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ಮಾಡಿದ್ಧಾರೆ. ಅದರ ಪ್ರಯೋಜನ ದೇಶದ ಜನರು ಪಡೆದಿದ್ದಾರೆ. ಅಂತಹ ಒಂದೇ ಒಂದು ಕಾರ್ಯಕ್ರಮ ಬಿಜೆಪಿ ಮಾಡಲಿಲ್ಲ.
ಅವಕಾಶ ಈಗ ಬಂದಿದೆ, ಕಳೆದುಕೊಳ್ಳಬೇಡಿ: ಡಿ.ಕೆ.ಶಿವಕುಮಾರ್
ಕೇವಲ ಭಾವನೆಗಳನ್ನು ಕೆರಳಿಸಿ ಕೋಮು ಗಲಭೆ ನಡೆಸುವಲ್ಲೇ ಕಾಲ ಕಳೆದಿದ್ದಾರೆ. ಇದು ಜನರ ಅಭಿವೃದ್ಧಿಯಲ್ಲ. ಹಾಗಾಗಿ ಜನರ ಬದುಕು ಹಸನಾಗಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ನನ್ನ ಪರವಾಗಿ ನಿಲ್ಲುವ ಯಾವುದೇ ಅಭ್ಯರ್ಥಿ ನಿಲ್ಲಿಸಿದರೂ ಅವರನ್ನು ಗೆಲ್ಲಿಸಿಕೊಡುವ ಕರ್ತವ್ಯ ನಿಮ್ಮದು ಎಂದು ಹೇಳಿದರು. ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ, 1952ರಿಂದ ಇಲ್ಲಿಯವರೆಗೆ ಕಾಂಗ್ರೆಸ್ ಆಡಳಿತ ನಡೆಸಿದ ಎಲ್ಲ ಮುಖ್ಯಮಂತ್ರಿಗಳು ಅನೇಕ ಜನಪರ ಯೋಜನೆ ಜಾರಿ ಮಾಡುವ ಮೂಲಕ ರೈತರು ಸೇರಿದಂತೆ ಜನ ಸಾಮಾನ್ಯರ ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.
ಆದರೆ ಬಿಜೆಪಿಯವರು ಕೇವಲ ಭಾವನೆ ಸಂಬಂಧಿಸಿದ ವಿಚಾರ ಬಿಟ್ಟರೆ, ಬದುಕು ಕಟ್ಟಿಕೊಡುವ ಒಂದೇ ಒಂದು ಕೆಲಸ ಮಾಡಿಲ್ಲ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಜನ ಸಾಮಾನ್ಯರ, ರೈತರ ಬದುಕು ಹೀನಾಯವಾಗಿದೆ. ಸರ್ಫೇಸಿ ಕಾಯ್ದೆಯಲ್ಲಿ ಪ್ರಭಾವಿ ಬೆಳೆಗಾರರೇ ನಲುಗಿ ಹೋಗುವಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ. ಇನ್ನು ಸಾಮಾನ್ಯ ರೈತರ ಗತಿ ಏನು ಎಂದು ಪ್ರಶ್ನಿಸಿದರು. ಅಕಾಂಕ್ಷಿಗಳು ಕೇವಲ ಪ್ಲೆಕ್ಸ್ ಹಾಕಿಕೊಂಡರೆ ಅದಕ್ಕೆ ಕೇವಲ ಒಂದು ದಿನ ಮಾತ್ರ ಆಯಸ್ಸು. ಆದರೆ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದವರು ಮಾತ್ರ ದೀರ್ಘ ಕಾಲ ಆಯಸ್ಸು ಹೊಂದಲು ಸಾಧ್ಯ. ಸ್ವಾರ್ಥ, ಪ್ರತಿಷ್ಠೆಯನ್ನು ಬಿಟ್ಟು, ಎಲ್ಲರೂ ಒಗ್ಗೂಡಿಕೊಂಡು ಜಿಲ್ಲೆಯ 5 ಕ್ಷೇತ್ರವನ್ನು ಗೆಲ್ಲಿಸುವ ಕೆಲಸ ಮಾಡಲು ಪ್ರತಿಯೊಬ್ಬ ಕಾರ್ಯಕರ್ತರು ಮುಂದಾಗಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಮತದಾರರ ಪಟ್ಟಿ ಪರಿಶೀಲಿಸಿ: ಡಿಕೆಶಿ ಕರೆ
ಕಾರ್ಯಕ್ರಮಕ್ಕೂ ಮುನ್ನ ಮೂಡಿಗೆರೆ ಬಿಜಿಎಸ್ ಶಾಲೆಯಿಂದ ಮೆರವಣಿಗೆ ಮೂಲಕ ಪಟ್ಟಣದ ಅಡ್ಯಂತಾಯ ರಂಗಮಂದಿರಕ್ಕೆ ಬರಲಾಯಿತು. ಮೆರವಣಿಗೆ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್, ನಯನಾ ಮೋಟಮ್ಮ ಸೇರಿದಂತೆ ವಿವಿಧ ಆಕಾಂಕ್ಷಿಗಳಿಗೆ ಕಾರ್ಯಕರ್ತರು ಜೈಕಾರ ಘೋಷಣೆ ಹಾಕಿದರು. ಮಾಜಿ ಸಚಿವರಾದ ಮೋಟಮ್ಮ, ಬಿ. ಶಿವರಾಂ, ಕೆಪಿಸಿಸಿ ಕಾರ್ಯಾಧ್ಯಕ್ಷ ದೃವನಾರಾಯಣ್, ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ತಾಲೂಕು ಅಧ್ಯಕ್ಷ ಎಚ್.ಜಿ. ಸುರೇಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಯನಾ ಮೋಟಮ್ಮ, ರೋಜಿಜಾನ್, ಶಾಸಕ ಟಿ.ಡಿ. ರಾಜೇಗೌಡ, ಸಚಿನ್ ಮೀಗಾ, ಎಂ.ಎಲ್. ಮೂರ್ತಿ, ಡಾ. ವಿಜಯ್ ಕುಮಾರ್ ಉಪಸ್ಥಿತರಿದ್ದರು.