ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿನ ಮತದಾರರ ಪಟ್ಟಿಯನ್ನು ಪರಿಶೀಲನೆಗೆ ಒಳಪಡಿಸಬೇಕು. ಜತೆಗೆ ಮತದಾರರ ಪಟ್ಟಿಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದ್ದಾರೆ. 

ಬೆಂಗಳೂರು (ನ.28): ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿನ ಮತದಾರರ ಪಟ್ಟಿಯನ್ನು ಪರಿಶೀಲನೆಗೆ ಒಳಪಡಿಸಬೇಕು. ಜತೆಗೆ ಮತದಾರರ ಪಟ್ಟಿಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದ್ದಾರೆ. ಅಲ್ಲದೆ, ಪಕ್ಷವು ಯಾರಿಗೇ ಟಿಕೆಟ್‌ ನೀಡಿದರೂ ಒಟ್ಟಾಗಿ ದುಡಿಯಬೇಕು. ಯಾವುದೇ ಕಾರಣಕ್ಕೂ ಪಕ್ಷದ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಬಾರದು. ಪಕ್ಷ ಅಧಿಕಾರದಲ್ಲಿದ್ದರೆ ನಿಮಗೆ ಬೇರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂಬುದನ್ನು ನೆನಪಿಡಬೇಕು. 

ಪಕ್ಷ ಅಧಿಕಾರಕ್ಕೆ ಬರುವ ಅವಕಾಶದ ಅಂಚಿನಲ್ಲಿದ್ದು, ಅದನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ನ.25 ರಂದು ನಿಗದಿಯಾಗಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ನಿಧನದಿಂದ ಮುಂದೂಡಿಕೆಯಾಗಿದ್ದ ಆಕಾಂಕ್ಷಿಗಳ ಸಭೆಯನ್ನು ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಝೂಮ್‌ ಆ್ಯಪ್‌ ಮೂಲಕ ನಡೆಸಲಾಯಿತು. ವರ್ಚುಯಲ್‌ ಸಭೆಯಲ್ಲಿ ಭಾಗವಹಿಸಿದ್ದ 950ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮಗೆ ಪಕ್ಷದಿಂದ ಕೊಡಬೇಕಾದ ಮಾರ್ಗದರ್ಶನಗಳನ್ನು ನಿಮ್ಮ ದೂರವಾಣಿ ಸಂಖ್ಯೆಗೆ ಕಳುಹಿಸುತ್ತೇವೆ. 

ಡಬಲ್‌ ಇಂಜಿನ್‌ ಸರ್ಕಾರ ನುಡಿದಂತೆ ನಡೆದಿಲ್ಲ: ಡಿ.ಕೆ.ಶಿವಕುಮಾರ್‌

ಮತದಾರರ ಪಟ್ಟಿಯನ್ನು ಜಿಲ್ಲಾ ಕಾಂಗ್ರೆಸ್‌ಗೆ ನೀಡಲಿದ್ದು, ನೀವುಗಳು ನಿಮ್ಮ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ತೆಗೆದುಕೊಂಡು ಹೋಗಿ ಅವುಗಳನ್ನು ಪರಿಶೀಲಿಸಬೇಕು. ಕೈಬಿಡಲಾದ ಹೆಸರನ್ನು ಮತ್ತೆ ಸೇರಿಸಿಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಆರ್‌.ವಿದೇಶಪಾಂಡೆ, ಕೆ.ಜೆ. ಜಾಜ್‌ರ್‍, ಯು.ಟಿ. ಖಾದರ್‌, ಸಂಸದ ಡಿ.ಕೆ. ಸುರೇಶ್‌, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್‌ ಸೇರಿದಂತೆ ಹಲವರು ಹಾಜರಿದ್ದರು.

ಗಂಡಸ್ತನದ ಬಗ್ಗೆ ಮಾತನಾಡಿದವರಿಗೂ ಚಿಲುಮೆ ನಂಟು: ‘ತಮ್ಮನ್ನು ತಾವೇ ಗಂಡಸು ಎಂದು ಗಂಡಸ್ತನದ ಬಗ್ಗೆ ಮಾತನಾಡುತ್ತಿರುವವರು ಹಾಗೂ ಚಿಲುಮೆ ಸಂಸ್ಥೆಯ ಪ್ರಮುಖ ಕಿಂಗ್‌ಪಿನ್‌ಗಳು ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಹಲವು ವ್ಯಕ್ತಿಗಳ ಖಾತೆಗೆ ಹಣ ಹಾಕಿಸಿ, ಅವುಗಳನ್ನು ನಗದೀಕರಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಿ ಯಾರಾರ‍ಯರಿಗೆ ಹಣ ವರ್ಗಾವಣೆಯಾಗಿದೆ ಎಂಬುದು ಬೆಳಕಿಗೆ ಬರಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಲುಮೆ ಸಂಸ್ಥೆಯ ಕಿಂಗ್‌ಪಿನ್‌ಗಳಿಗೆ ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಹಣ ಹಾಕಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಇನ್ನು ಗಂಡಸ್ತನದ ಬಗ್ಗೆ ಮಾತನಾಡುವವರ ಹಣದ ವ್ಯವಹಾರಗಳ ಕುರಿತೂ ಮಾಧ್ಯಮಗಳಲ್ಲಿ ಕೆಲ ಸುದ್ದಿಗಳು ಬರುತ್ತಿವೆ. ಇವುಗಳ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ತಿರುಚಲು ನಾಗರಿಕ ಸಂಹಿತೆ: ‘ಬಿಜೆಪಿಯವರು ಸಂವಿಧಾನ ತಿರುಚಲು ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡುತ್ತಿದ್ದಾರೆ. ಗೊಂದಲ ಸೃಷ್ಟಿಸುವ ಮೂಲಕ ಜನರ ಭಾವನೆ ಕೆರಳಿಸಿ ಸಂವಿಧಾನದ ಆಶಯಗಳನ್ನು ಹಾಳು ಮಾಡಲು ಮುಂದಾಗಿದ್ದಾರೆ. ಬಿಜೆಪಿಯವರು ಸಂವಿಧಾನದ ಆಶಯಗಳನ್ನು ಬದಲಿಸುವ ಪ್ರಯತ್ನ ಮಾಡದೆ ದೇಶ ಉಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದ್ದಾರೆ. ಸಂವಿಧಾನ ದಿನದ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಸಿಎಂ ಬೊಮ್ಮಾಯಿಗೆ ಧಮ್‌ ಇದ್ದರೆ ತನಿಖೆ ನಡೆಸಲಿ: ಡಿ.ಕೆ.ಶಿವಕುಮಾರ್‌

ಪರೋಕ್ಷವಾಗಿ ಏಕರೂಪ ನಾಗರಿಕ ಸಂಹಿತೆ ಕುರಿತು ಮಾತನಾಡುತ್ತಿರುವ ಬಿಜೆಪಿಯವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವ್ಯಕ್ತಿಗೆ ಆಯಾ ಧರ್ಮದ ಪವಿತ್ರ ಗ್ರಂಥಗಳಿರುತ್ತವೆ. ಆದರೆ, ಪ್ರತಿಯೊಬ್ಬ ಭಾರತೀಯನಿಗೂ ಸಂವಿಧಾನ ಪವಿತ್ರ ಗ್ರಂಥ. ಅಂಬೇಡ್ಕರ್‌ ನೀಡಿದ ಈ ಗ್ರಂಥದ ಹೆಸರಿನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುವ ಪ್ರತಿಜ್ಞೆ ಮಾಡಿ ಅದನ್ನೇ ಬದಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.