ಬೆಂಗಳೂರು, (ಜೂನ್.01): ಕೊರೋನಾ ಸಂಕಷ್ಟದ ಮಧ್ಯೆ ಕರ್ನಾಟಕ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

ಇಂದು (ಮಂಗಳವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಇತ್ತ ರಾಜ್ಯದಲ್ಲಿ ಕೋವಿಡಗ ಸಂಕಷ್ಟವಿದ್ದರೆ ಅತ್ತ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ವರಿಷ್ಠರ ಭೇಟಿಗೆ ದೆಹಲಿಯಲ್ಲಿ ಹೋಗುತ್ತಿದ್ದಾರೆ. ಬಿಜೆಪಿಯಲ್ಲಿ ಪವರ್ ಬೆಗ್ಗರ್ಸ್ ಹೆಚ್ಚಾಗಿದ್ದಾರೆ ಎಂದು  ಕಿಡಿಕಾರಿದರು.

'ಯಡಿಯೂರಪ್ಪ ಸ್ಥಾನಕ್ಕೆ ಕಂಟಕ : ವಿಜಯೇಂದ್ರ ವ್ಯವಸ್ಥಿತ ತಂತ್ರ'

ಸಚಿವ ಸಿ.ಪಿ.ಯೋಗೇಶ್ವರ್, ಬಿ.ವೈ.ವಿಜಯೇಂದ್ರ ದೆಹಲಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಯಡಿಯೂರಪ್ಪನವರು ಯಾರು ಯಾರನ್ನೋ ಎಲ್ಲೆಲ್ಲಿಂದಲೋ ಕರೆತಂದರು. ಈಗ ಅವರೇ ಎಲ್ಲವನ್ನೂ ಅನುಭವಿಸುತ್ತಿದ್ದಾರೆ. ಅವರು ಮಾಡಿದ್ದನ್ನು ಅವರು ಅನುಭವಿಸುತ್ತಿದ್ದಾರೆ ಎಂದರು.

ಉತ್ತರ ಕರ್ನಾಟಕ ಭಾಗದ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಅವರನ್ನು ಕಾಪಾಡುವುದು ಹೇಗೆಂದು ಗೊತ್ತಿಲ್ಲ. ರೈತರು ಬೆಳೆದ ತರಕಾರಿ, ಹಣ್ಣು, ಹೂವುಗಳನ್ನು ಮಾರಾಟ ಮಾಡಲಾಗದೇ ಕಂಗಾಲಾಗಿದ್ದಾರೆ. ರೈತರ ಬೆಳೆಗಳನ್ನು ಸರ್ಕಾರವೇ ಖರೀದಿ ಮಾಡಲಿ ಎಂದು ಆಗ್ರಹಿಸಿದರು..

 ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರು ಸಾಕಷ್ಟು ಜನರಿದ್ದಾರೆ. ಅವರೆಲ್ಲರೂ ಪರಿಹಾರಕ್ಕೆ ಅರ್ಜಿ ಹಾಕಲು ಆಗುತ್ತಾ? ಅರ್ಜಿ ಹಾಕಲು ಗೊತ್ತಿದ್ದರೆ ಅವರು ವಿಧಾನಸೌಧಕ್ಕೆ ಬರುತ್ತಿದ್ದರು. ಗೊತ್ತಿಲ್ಲದ ಕಾರಣಕ್ಕೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಾರೆ. ಸರ್ಕಾರದ ಆರ್ಥಿಕ ಪ್ಯಾಕೇಜ್ ಸಮರ್ಪಕವಾಗಿಲ್ಲ ಎಂದು ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.