ಬೆಂಗಳೂರು(ಆ.24):  ಸದ್ಯದ ಪರಿಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷ ಗಾದಿಗೆ ರಾಹುಲ್ ಗಾಂಧಿ ಸೂಕ್ತ ವ್ಯಕ್ತಿಯಾಗಿದ್ದಾರೆ. ಎಐಸಿಸಿಯನ್ನು ಮುನ್ನೆಡೆಸಿರುವ ಅನುಭವ ರಾಹುಲ್ ಗಾಂಧಿಯವರಿಗಿದೆ. ರಾಹುಲ್ ಗಾಂಧಿ ಹೊಣೆಗಾರಿಕೆ ವಹಿಸಬೇಕಾದ ಅನಿವಾರ್ಯತೆ ಪಕ್ಷಕ್ಕಿದೆ ಎಂದು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾದ ಸಂದೇಶ ರವಾನೆ ಮಾಡಿದ್ದಾರೆ. 

ಸೋನಿಯಾ ಗಾಂಧಿ ಅವರಿಗೆರ ಪತ್ರದ ಮೂಲಕ ಅಭಿಪ್ರಾಯ ತಿಳಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಹುಲ್ ಗಾಂಧಿ ಅವರನ್ನು ಹೊರತುಪಡಿಸಿದ ನಾಯಕತ್ವ ಪಕ್ಷಕ್ಕೆ ಸೂಕ್ತ ಅಲ್ಲ. ಈಗಿರುವ ರಾಜಕೀಯ ವ್ಯವಸ್ಥೆಯಲ್ಲಿ ರಾಹುಲ್ ಗಾಂಧಿಯವರೇ ಸೂಕ್ತವಾದ ವ್ಯಕ್ತಿಯಾಗಿದ್ದಾರೆ. ರಾಜಕೀಯ ಏರಿಳಿತಗಳು ಎಲ್ಲಾ ಪಕ್ಷದಲ್ಲೂ ಸಹಜ ಪ್ರಕ್ರಿಯೆಯಾಗಿದೆ. ಪಕ್ಷವನ್ನು ಸಧೃಡವಾಗಿ ಕಟ್ಟಲು ರಾಹುಲ್ ಗಾಂಧಿಯವರಿಗೆ ನಾಯಕತ್ವ ನೀಡಬೇಕು ಎಂದು ಸೋನಿಯಾ ಗಾಂಧಿ ಅವರಿಗೆ ಪತ್ರದ ಮೂಲಕ ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. 

ಕಾಂಗ್ರೆಸ್‌ನಲ್ಲಿ ಶುರುವಾಗುತ್ತಿದೆ ಬದಲಾವಣೆಯ ಪರ್ವ: 23 ಮಂದಿ ಹಿರಿಯ ನಾಯಕರಿಗೆ ಗೇಟ್ ಪಾಸ್?

ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಪತ್ರ ಭಾರೀ ಮಹತ್ವ ಪಡೆದುಕೊಂಡಿದೆ. ರಾಹುಲ್‌ ಗಾಂಧಿ ಅವರಿಗೆ ಮತ್ತೆ ಎಐಸಿಸಿ ಅಧ್ಯಕ್ಷ ಸ್ಥಾನ ಸಿಗುತ್ತಾ ಎಂಬುಬದನ್ನು ಕಾದುನೋಡಬೇಕಿದೆ. 

ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಟ್ವೀಟ್‌ ಮಾಡಿ ಅಮ್ಮ ಅಭಿಪ್ರಾಯವನನ್ನ ಹಂಚಿಕೊಂಡಿದ್ದಾರೆ.  ಕಾಂಗ್ರೆಸ್ ‌ಪಕ್ಷದ ಅತ್ಯಂತ ಕಷ್ಟದ ಸನ್ನಿವೇಶದಲ್ಲಿ ಸೋನಿಯಾ ಗಾಂಧಿ ಅವರಲ್ಲಿ ಮನವಿ ಮಾಡಿಕೊಂಡೆವು. ಅವರು ತಮ್ಮ ವಯಕ್ತಿಕ ಬದುಕನ್ನು ಬದಿಗಿಟ್ಟು ಪಕ್ಷದ ಜವಾಬ್ದಾರಿ ವಹಿಸಿಕೊಂಡು ಸುಮಾರು‌ 20 ವರ್ಷಗಳ‌ ಕಾಲ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಎರಡು ಬಾರಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷವನ್ನು ಒಗ್ಗಟ್ಟಾಗಿಡಲು ಗಾಂಧಿ ಕುಟುಂಬದಿಂದ ಮಾತ್ರ ಸಾಧ್ಯ. ಪಕ್ಷ ಒಗ್ಗಟ್ಟಾಗಿದ್ದಾಗ ಮಾತ್ರ ದೇಶವನ್ನು ಒಗ್ಗಟ್ಟಿನಿಂದಿಡಲು ಸಾಧ್ಯ. ಪಕ್ಷದ ನೇತೃತ್ವಕ್ಕೆ ಸಂಬಂಧಿಸಿದಂತೆ‌ ಪಕ್ಷದ ವೇದಿಕೆಗಳಲ್ಲೇ ಚರ್ಚೆಯಾಗಬೇಕೆ ಹೊರತು ಬಹಿರಂಗ ಚರ್ಚೆ ಸರಿಯಲ್ಲ. ಇದು ಪಕ್ಷದ ಆಂತರಿಕ ವಿಚಾರವಾಗಿದೆ ಎಂದು ತಿಳಿಸಿದ್ದಾರೆ. 

ಕರ್ನಾಟಕ ರಾಜ್ಯ ಕಾಂಗ್ರೆಸ್ ಸೋನಿಯಾ ಗಾಂಧಿ ಅವರ ನೇತೃತ್ವ ಹಾಗೂ ಗಾಂಧಿ ಕುಟುಂಬದ ಹಿಂದೆ ನಿಂತಿದೆ. ಸೋನಿಯಾ ಗಾಂಧಿ ಅವರು ಕಷ್ಟದ ಪರಿಸ್ಥಿತಿಯಲ್ಲಿ ಪಕ್ಷದ ಚುಕ್ಕಾಣಿ ಹಿಡಿದು ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಯಾವುದೇ ರೀತಿಯ ಚರ್ಚೆಗಳು ಪಕ್ಷದ ವೇದಿಕೆಯಲ್ಲಿ ನಡೆಯಬೇಕೇ ಹೊರತು ಮಾಧ್ಯಮಗಳ ಮುಂದೆ ಅಲ್ಲ ಎಂದು ಹೇಳಿದ್ದಾರೆ.

ಗಾಂಧಿ ಕುಟುಂಬದ ಹಿರಿಯರು ದೇಶಕ್ಕಾಗಿ ಅಪಾರವಾದ ತ್ಯಾಗ, ಬಲಿದಾನ ಮಾಡಿದ್ದಾರೆ. ತಮ್ಮ ಸರ್ವಸ್ವವನ್ನು ದೇಶಕ್ಕಾಗಿ ಅರ್ಪಣೆ ಮಾಡಿದ್ದಾರೆ, ಅಲ್ಲದೆ ದೀರ್ಘವಾದ ಸೆರೆವಾಸವನ್ನು ಅನುಭವಿಸಿದ್ದಾರೆ. ಭಾರತವನ್ನು  ಬಲಿಷ್ಠ ರಾಷ್ಟ್ರವನ್ನಾಗಿ ಕಟ್ಟುವಲ್ಲಿಯೂ ಸಹ ಗಾಂಧಿ ಕುಟುಂಬದ ಕೊಡುಗೆ ಅಪಾರವಾಗಿದೆ. ಗಾಂಧಿ ಕುಟುಂಬದಿಂದಲೆ ನಾಯಕತ್ವ ಮುಂದುವರೆದರೆ ಒಳ್ಳೆಯದು. AICC ಹೊಣೆಗಾರಿಕೆಯನ್ನು ಗಾಂಧಿ ಕುಟುಂಬವರೆ ವಹಿಸಿಕೊಳ್ಳುವುದು ಸೂಕ್ತ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್ ಅವರು ತಿಳಿಸಿದ್ದಾರೆ.