ಇಲ್ಲೇ ನಮ್ಮ ಮನೆ ಹತ್ರ ಬಂದು ಮಲಕ್ಕೊಳಕ್ಕೆ ಹೇಳಿ: ಪ್ರತಾಪ್ ಸಿಂಹ ಆರೋಪಕ್ಕೆ ಡಿಕೆಶಿ ವ್ಯಂಗ್ಯ
ಸಚಿವ ಸಂಪುಟ ರಚನೆ ವಿಚಾರವಾಗಿ ದೆಹಲಿಗೆ ತೆರಳಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ವಾಪಸ್ಸಾಗಿದ್ದು, ದೆಹಲಿಯಿಂದ ಬಂದಿದ್ದೀನೆ, ವಾಪಸ್ಸು ಹೋಗಬೇಕು ನಮ್ಮ ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮ ಇದೆ.
ಬೆಂಗಳೂರು (ಮೇ.26): ಸಚಿವ ಸಂಪುಟ ರಚನೆ ವಿಚಾರವಾಗಿ ದೆಹಲಿಗೆ ತೆರಳಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ವಾಪಸ್ಸಾಗಿದ್ದು, ದೆಹಲಿಯಿಂದ ಬಂದಿದ್ದೀನೆ, ವಾಪಸ್ಸು ಹೋಗಬೇಕು ನಮ್ಮ ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮ ಇದೆ. ಅದನ್ನ ಮುಗಿಸಿಕೊಂಡು ನಾಳೆ ಹೋಗ್ತೇನೆ. ಕ್ಯಾಬಿನೆಟ್ ರಚನೆ ಚರ್ಚೆಗಾಗಿಯೇ ದೆಹಲಿಗೆ ಹೋಗಿದ್ದು. ನಾಳೆ ಒಂದು ದಿನ ಅಷ್ಟೇ, ಎಲ್ಲವನ್ನೂ ತಿಳಿಸುತ್ತೇವೆ ಎಂದರು.
ಸರ್ಕಾರದ ಗ್ಯಾರಂಟಿ ವಿರುದ್ಧ ಪ್ರತಾಪ್ ಸಿಂಹ ಕಿಡಿ ವಿಚಾರವಾಗಿ ಮಾತನಾಡಿದ ಡಿಕೆಶಿ ಜೂನ್ ನಂತರ ಪ್ರತಿಭಟನೆ ಮಾಡೋದಾಗಿ ಪ್ರತಾಪ್ ಸಿಂಹ ಹೇಳಿದ್ದ ಎಂದರು. ಜೊತೆಗೆ ಇಲ್ಲೇ ನಮ್ಮ ಮನೆ ಹತ್ರ ಬಂದು ಮಲಕ್ಕೊಳಕ್ಕೆ ಹೇಳಿ ಎಂದು ವ್ಯಂಗ್ಯ ಮಾಡಿದರಲ್ಲದೇ ಜೂನ್ ಯಾಕೆ ನಾಳೆಯಿಂದಲೇ ಬಂದು ಮಲಕ್ಕೊಳಕ್ಕೆ ಹೇಳಿ ಎಂದರು.
ಕಾಂಗ್ರೆಸ್ ಗ್ಯಾರಂಟಿ ಫೈಟ್: ಸರ್ಕಾರ-ಪ್ರತಿಪಕ್ಷಗಳ ನಡುವೆ ಕದನ ಆರಂಭ
ಡಿಕೆಶಿ ಗೈರಿನಲ್ಲಿ ಕಚೇರಿಗೆ ಪೂಜೆ: ಉಪಮುಖ್ಯಮಂತ್ರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಸಂಪುಟ ರಚನೆ ಕಸರತ್ತಿನಲ್ಲಿ ತೊಡಗಿದರೆ, ಇತ್ತ ವಿಧಾನಸೌಧದಲ್ಲಿನ ಅವರ ಕಚೇರಿಗೆ ಸಿಬ್ಬಂದಿ ವರ್ಗ ಪೂಜೆ ನೆರವೇರಿಸಿದ್ದಾರೆ. ಗುರುವಾರ ಬೆಳಗ್ಗೆ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 335, 336, 337 ಹಾಗೂ 337(ಅ)ನಲ್ಲಿ ಪೂಜೆ ಮಾಡಲಾಯಿತು. ಕೊಠಡಿಯನ್ನು ಹೂವಿನಿಂದ ವಿಶೇಷ ಅಲಂಕೃತಗೊಳಿಸಲಾಗಿತ್ತು.
ಪೂಜೆ ವೇಳೆ ಡಿ.ಕೆ.ಶಿವಕುಮಾರ್ ಪುತ್ರ ಆಕಾಶ್ ಉಪಸ್ಥಿತರಿದ್ದರು. ಕಚೇರಿಯ ಸಿಬ್ಬಂದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರ ಉಪಸ್ಥಿತಿಯಲ್ಲಿ ಧಾರ್ಮಿಕ ಪೂಜಾಕಾರ್ಯಗಳು ನಡೆದವು. ಈ ವೇಳೆ ಈಡುಗಾಯಿ ಮತ್ತು ಕುಂಬಳಕಾಯಿ ಒಡೆಯಲಾಯಿತು. ಪೂಜೆ ವೇಳೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಹ ಭಾಗಿಯಾಗಿದ್ದರು. ಕಚೇರಿಯಲ್ಲಿ ಮಹಾಲಕ್ಷ್ಮೇ, ಲಕ್ಷ್ಮೇ ವೆಂಕಟೇಶ್ವರ ದೇವರ ಫೋಟೋಗಳ ಜತೆಗೆ ಗಂಗಾಧರ ಅಜ್ಜಯ್ಯ ಫೋಟೋ ಇಡಲಾಗಿದೆ.
ಕೇಸರೀಕರಣಕ್ಕೆ ಬೊಮ್ಮಾಯಿ ಬೆಂಬಲ ನೀಡಿದ್ದರು: ‘ಹಿಂದಿನ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಪೊಲೀಸ್ ಇಲಾಖೆಯ ಕೇಸರೀಕರಣ ಹಾಗೂ ನೈತಿಕ ಪೊಲೀಸ್‌ಗಿರಿಗೆ ಬೆಂಬಲ ನೀಡಿದ್ದರು. ನಮ್ಮ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಪೊಲೀಸರನ್ನು ಹೊರತುಪಡಿಸಿ ಬೇರೆ ಯಾರೊಬ್ಬರಿಗೂ ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದವರಾಗಲಿ, ಬೇರೆ ಪಕ್ಷದವರಾಗಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಪೊಲೀಸರಿಂದ ಮಾತ್ರ ಕಾನೂನು ಚಲಾವಣೆ ಆಗಬೇಕು. ಈ ನಿಯಮವನ್ನು ಎಲ್ಲರೂ ಪಾಲಿಸಬೇಕು. ಯಾರಾದರೂ ನೈತಿಕ ಪೊಲೀಸ್‌ಗಿರಿಗೆ ಮುಂದಾದರೆ ಕ್ರಮ ಖಚಿತ ಎಂದರು.
ಸಿಎಂ ಆದ ಬಳಿಕ ಮೊದಲ ಬಾರಿಗೆ ಇಂದು ಸೋನಿಯಾ ಭೇಟಿಯಾಗಲಿರುವ ಸಿದ್ದರಾಮಯ್ಯ
ಹಿಂದೆ ರಾಜ್ಯದ ಮೂರ್ನಾಲ್ಕು ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಸಮವಸ್ತ್ರ ಕಳಚಿ ರಾಜಕೀಯ ಸಂಘಟನೆಗಳ ರೀತಿಯಲ್ಲಿ ವಸ್ತ್ರ ಧರಿಸಿದ್ದರು. ಇದು ಸಂವಿಧಾನ ಪಾಲನೆ ಅಲ್ಲ. ಕರ್ನಾಟಕ ಪೊಲೀಸ್ ಇಲಾಖೆಗೆ ಇರುವ ಘನತೆ ಕಾಪಾಡಿಕೊಳ್ಳಬೇಕು. ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಪ್ರಿಯಾಂಕ್ ಖರ್ಗೆ ರಾಜ್ಯದ ಅತ್ಯಂತ ದೊಡ್ಡ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದಾಗ ಅವರಿಗೆ ಸಮನ್ಸ್ ನೀಡಲಾಗಿತ್ತು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದವರಿಗೆ ಸಮನ್ಸ್ ನೀಡಿ ಕಾಟ ನೀಡಿದ್ದ ಪೊಲೀಸರು ಇನ್ನಾದರೂ ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದೇನೆ ಎಂದರು.