Asianet Suvarna News Asianet Suvarna News

ಕಳಂಕ ತೊಳೆದುಕೊಳ್ಳಲು ಗಡಿ ವಿವಾದ ಸೃಷ್ಟಿ: ಡಿ.ಕೆ.ಶಿವಕುಮಾರ್‌

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಮೇಲಿನ ಕಳಂಕ ಮರೆ ಮಾಚಿಕೊಳ್ಳಲು ಮಹಾರಾಷ್ಟ್ರ ಗಡಿ ವಿವಾದವನ್ನು ದೊಡ್ಡದು ಮಾಡುತ್ತಿದ್ದಾರೆ. ಬಗೆಹರಿರುವ ವಿವಾದ ದೊಡ್ಡದು ಮಾಡುತ್ತಿರುವುದರ ಹಿಂದೆ ಸಂಚು ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪ ಮಾಡಿದ್ದಾರೆ.

KPCC Pesident DK Shivakumar Talks Over Maharashtra Border Issue gvd
Author
First Published Dec 2, 2022, 2:40 AM IST

ಬೆಂಗಳೂರು (ಡಿ.02): ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಮೇಲಿನ ಕಳಂಕ ಮರೆ ಮಾಚಿಕೊಳ್ಳಲು ಮಹಾರಾಷ್ಟ್ರ ಗಡಿ ವಿವಾದವನ್ನು ದೊಡ್ಡದು ಮಾಡುತ್ತಿದ್ದಾರೆ. ಬಗೆಹರಿರುವ ವಿವಾದ ದೊಡ್ಡದು ಮಾಡುತ್ತಿರುವುದರ ಹಿಂದೆ ಸಂಚು ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲರೂ ಸೇರಿ ರಾಜಕೀಯ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ರಾಜ್ಯದ ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಮಹಾರಾಷ್ಟ್ರದ ಯಾವುದೇ ಪಕ್ಷದವರಾಗಲಿ ಗಡಿ ವಿವಾದದ ಹೆಸರಲ್ಲಿ ಶಾಂತಿ ಕದಡುವುದು, ಇದರಲ್ಲಿ ಭಾಗಿಯಾಗುವುದು ಸರಿಯಲ್ಲ’ ಎಂದು ಹೇಳಿದರು.

ಮಹಾರಾಷ್ಟ್ರದಲ್ಲೂ ಅವರದ್ದೇ ಸರ್ಕಾರವಿದೆ. ಜತೆಗೆ ಗಡಿ ವಿವಾದ ಈಗಾಗಲೇ ಇತ್ಯರ್ಥವಾಗಿರುವ ವಿಚಾರ. ನಮ್ಮ ಗಡಿಯೊಳಗಿನ ಪ್ರದೇಶ ನಮ್ಮದು, ಅವರ ಗಡಿಯೊಳಗಿನ ಪ್ರದೇಶ ಅವರದ್ದು. ಹೀಗಾಗಿ ಇದರಲ್ಲಿ ವಿವಾದ ಮಾಡುವುದು ಅನಗತ್ಯ’ ಎಂದು ಸ್ಪಷ್ಟಪಡಿಸಿದರು. ‘ರಾಜ್ಯದಲ್ಲಿರುವವರು ಯಾರೇ ಆಗಲಿ ಅವರೆಲ್ಲರೂ ನಮ್ಮವರೇ. ರಾಜ್ಯದಲ್ಲಿ ಅನಗತ್ಯವಾಗಿ ಶಾಂತಿಗೆ ಭಂಗ ತರುವ ಕೆಲಸ ಆಗಬಾರದು. ಇದೇ ಕಾರಣಕ್ಕಾಗಿಯೇ ಬೆಳಗಾವಿಯಲ್ಲಿ ನಾವು ಸುವರ್ಣಸೌಧ ಕಟ್ಟಿದ್ದು. ಹೀಗಾಗಿ ಎಲ್ಲರೂ ಶಾಂತಿ ಕಾಪಾಡುವ ಕೆಲಸ ಮಾಡಬೇಕು’ ಎಂದರು.

ಅವಕಾಶ ಈಗ ಬಂದಿದೆ, ಕಳೆದುಕೊಳ್ಳಬೇಡಿ: ಡಿ.ಕೆ.ಶಿವಕುಮಾರ್‌

ಕುಸ್ತಿಗಾಗಿ ರೌಡಿಗಳ ಬಿಜೆಪಿ ಸೇರ್ಪಡೆ: ‘ಬಿಜೆಪಿಯವರಿಗೆ ಕುಸ್ತಿ ಮಾಡಲು ಜನ ಬೇಕಾಗಿದೆ. ಹೀಗಾಗಿ ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ. ಸೇರಿಸಿಕೊಳ್ಳಲಿ ಬಿಡಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ. ಬಿಜೆಪಿಗೆ ಯಾವುದೇ ಸಿದ್ಧಾಂತ ಇಲ್ಲ. ಅವರು ಸಿದ್ಧಾಂತದ ಬಗ್ಗೆ ಮಾತನಾಡುವುದೂ ಇಲ್ಲ. ಕೇವಲ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ. ಬದುಕಿಗೂ, ಭಾವನೆಗೂ ವ್ಯತ್ಯಾಸವಿದೆ. ಜನರ ಹೊಟ್ಟೆತುಂಬಿಸಿ, ಅವರಿಗೆ ಉದ್ಯೋಗ ಕೊಟ್ಟು ಬದುಕು ಕಟ್ಟಿಕೊಳ್ಳುವ ಅವಕಾಶ ನೀಡಬೇಕು. ಇದನ್ನು ಅವರು ಮಾಡುವುದಿಲ್ಲ ಎಂದು ಕಿಡಿ ಕಾರಿದರು.

ಅನ್ಯರ ಬೆಂಬಲದ ಸಮ್ಮಿಶ್ರ ಸರ್ಕಾರವಿದೆ: ಪ್ರಜಾಪ್ರಭುತ್ವದ ಕುರಿತು ಕರ್ನಾಟಕ ರಾಜ್ಯದ ಜನರಿಗೆ ಇರುವ ಗೌರವವನ್ನು ಬಿಜೆಪಿ ಹಾಳು ಮಾಡುತ್ತಿದೆ ಎಂದ ಅವರು, ತಮ್ಮದು ಭ್ರಷ್ಟಆಡಳಿತ ಮತ್ತು ರಾಜ್ಯದಲ್ಲಿ ಸದ್ಯಕ್ಕೆ ಇರುವುದು ಭ್ರಷ್ಟ ಸರಕಾರರ ಎನ್ನುವುದನ್ನು ಬಿಜೆಪಿ ಸಾಬಿತು ಮಾಡಿದೆ. ಅಷ್ಟೇ ಏಕೆ? ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ ಎಂಬ ಭ್ರಮೆ ಬಿಜೆಪಿ ಮುಖಂಡರಲ್ಲಿದೆ. ಆದರೆ, ವಾಸ್ತವದಲ್ಲಿ ಹಾಗಿಲ್ಲ. ಬೇರೆಯವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿರುವ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ ಪರ ರಾಜ್ಯದಲ್ಲಿ ಜನರ ಒಲವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದನ್ನ ಪಕ್ಷ ತನ್ನಪರ ಇನ್ನೂ ಹೆಚ್ಚು ಮಾಡಿಕೊಳ್ಳಲಿದೆ ಎಂದರಲ್ಲದೆ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಯಾರು ಬೇಕಾದರೂ ಕಾಂಗ್ರೆಸ್‌ ಪಕ್ಷಕ್ಕೆ ಬರಬಹುದು ಎಂದು ಮುಕ್ತ ಆಹ್ವಾನ ನೀಡಿದ್ದೇನೆ. ಹಾಗಾಗಿ,ಪಕ್ಷಕ್ಕೆ ಯಾರೇ ಬರುವುದಿದ್ದರೂ ಬೇಷರತ್ತಾಗಿ ಬರಬಹುದು ಎಂದರು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಮತ​ದಾ​ರರ ಪಟ್ಟಿ ಪರಿ​ಶೀ​ಲಿ​ಸಿ: ಡಿಕೆಶಿ ಕರೆ

ಸಿದ್ದು-ಡಿಕೆಶಿ ಮಧ್ಯೆ ಗ್ಯಾಪ್‌ ಇಲ್ಲ: ತಮ್ಮ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಧ್ಯೆ ಯಾವುದೇ ಬಿರುಕಿಲ್ಲ. ಸುಖಾಸುಮ್ಮನೆ ತಮ್ಮಿಬ್ಬರ ಮಧ್ಯೆ ಗ್ಯಾಪ್‌ ಇದೆ ಎಂದು ಮಾಧ್ಯಮದವರೇ ಬಿಂಬಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಮಜಾಯಿಷಿ ನೀಡಿದರು. ನಮ್ಮ ಮಧ್ಯೆ ಬಿರುಕಿದೆ ಎಂದು ಬಿಜೆಪಿಯವರು ಸೃಷ್ಟಿಮಾಡಿ ವದಂತಿ ಹಬ್ಬಿಸುತ್ತಿದ್ದಾರೆ. ಬಿಜೆಪಿಯ ಸದಾನಂದ ಗೌಡ, ಯತ್ನಾಳ್‌ ಹಾಗೂ ವಿಜಯೇಂದ್ರ ಮಧ್ಯೆ ಬಿರುಕಿಲ್ವಾ? ಮೊದಲು ತಮ್ಮಲ್ಲಿರುವ ಬಿರುಕುಗಳನ್ನು ಮುಚ್ಚಿಕೊಳ್ಳಲಿ ಎಂದರು.

Follow Us:
Download App:
  • android
  • ios