*   ಕೆಪಿಸಿಸಿ ಸದಸ್ಯ ಎಸ್‌.ಗುರುಚರಣ್‌ ಲೇವಡಿ*  2014ರಲ್ಲಿ 2 ಕೋಟಿ ಉದ್ಯೋಗ ಭದ್ರತೆ ಭರವಸೆ ನೀಡಿದ್ದ ಪ್ರಧಾನಿ ಮೋದಿ*  ಈಗ 2023ರ ಚುನಾವಣೆ ಹತ್ತಿರ ಬರುತ್ತಿದ್ದಂತೆ 10 ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಹೇಳುತ್ತಿದ್ದಾರೆ 

ಮದ್ದೂರು(ಜೂ.18): ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವ ಮೂಲಕ ಜೆಡಿಎಸ್‌ ಭದ್ರಕೋಟೆಯನ್ನು ನುಚ್ಚುನೂರು ಮಾಡಿದೆ ಎಂದು ಕೆಪಿಸಿಸಿ ಸದಸ್ಯ ಎಸ್‌. ಗುರುಚರಣ್‌ ಲೇವಡಿ ಮಾಡಿದರು.

ತಾಲೂಕಿನ ಸೋಮನಹಳ್ಳಿ ತಮ್ಮ ನಿವಾಸದಲ್ಲಿ ಮಧು ಮಾದೇಗೌಡರ ಗೆಲುವಿನ ಕುರಿತು ಪ್ರತಿಕ್ರಿಯಿಸಿದ ಅವರು, ದಕ್ಷಿಣ ಪದವೀಧರ ಕ್ಷೇತ್ರ ಜೆಡಿಎಸ್‌ ಭದ್ರಕೋಟೆ ಎಂದು ಆ ಪಕ್ಷದ ನಾಯಕರು ಬೀಗುತ್ತಿದ್ದರು. ಚುನಾವಣೆಯಲ್ಲಿ ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ ಮತದಾರರು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಎರಡು ದಶಕಗಳ ನಂತರ ಮಧುಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಜೆಡಿಎಸ್‌ ಭದ್ರಕೋಟೆ ಎಂದು ಬೀಗುತ್ತಿದ್ದ ಆ ಪಕ್ಷದ ನಾಯಕರಿಗೆ ಮತದಾರರು ತಕ್ಕಪಾಠ ಕಲಿಸಿದ್ದಾರೆ ಎಂದರು.

ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಸೇಡಿನ ರಾಜಕೀಯ: ಆರ್‌. ಧ್ರುವನಾರಾಯಣ್‌

2014ರಲ್ಲಿ ಪ್ರಧಾನಿ ನರೇಂದ್ರ ದಿ 2 ಕೋಟಿ ಉದ್ಯೋಗ ಭದ್ರತೆ ಭರವಸೆ ನೀಡಿದ್ದರು. ಈಗ 2023ರ ಚುನಾವಣೆ ಹತ್ತಿರ ಬರುತ್ತಿದ್ದಂತೆ 10 ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಹೇಳುತ್ತಿದ್ದಾರೆ. ಇದು ಕೇವಲ ಚುನಾವಣೆ ಗಿಮ್ಮಿಕ್‌ ಎಂದು ಆರೋಪಿಸಿದರು.

ನ್ಯಾಷಿನಲ್‌ ಹೆರಾಲ್ಡ್‌ ಪತ್ರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿನಾಕಾರಣ ಕಾಂಗ್ರೆಸ್‌ ನಾಯಕರಿಗೆ ಕಿರುಕುಳ ನೀಡಲಾಗುತ್ತಿದೆ. ಇಂತಹ ದ್ವೇಷದ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ವಿರೋಧ ಪಕ್ಷಗಳನ್ನು ದಮನ ಮಾಡಲು ಹೊರಟಿರುವ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.