ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಸೇಡಿನ ರಾಜಕೀಯ: ಆರ್. ಧ್ರುವನಾರಾಯಣ್
ಕೇಂದ್ರದ ಬಿಜೆಪಿ ಸರ್ಕಾರ ಕಾಂಗ್ರೆಸ್ ನಾಯಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಆರೋಪಿಸಿದರು.
ಮೈಸೂರು (ಜೂ.17): ಕೇಂದ್ರದ ಬಿಜೆಪಿ ಸರ್ಕಾರ ಕಾಂಗ್ರೆಸ್ ನಾಯಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಆರೋಪಿಸಿದರು. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೆ ಪೊಲೀಸರು ಗೂಂಡಾಗಳಂತೆ ವರ್ತಿಸಿದ್ದಾರೆ. ಇದೇನು ಪೊಲೀಸ್ ರಾಜ್ಯವೋ ಗೂಂಡಾಗಳ ರಾಜ್ಯವೋ ಗೊತ್ತಾಗುತ್ತಿಲ್ಲ. ಪೊಲೀಸರ ದೌರ್ಜನ್ಯದಿಂದ ಪ್ರತಿಭಟನಾ ನಿರತ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರ ಕಾಲಿಗೆ ಪೆಟ್ಟಾಗಿದೆ. ಸಂಸದರನ್ನು ಎಳೆದಾಡಿದ್ದಾರೆ. ದ್ವೇಷದ ರಾಜಕಾರಣಕ್ಕೆ ಭವಿಷ್ಯವಿಲ್ಲ ಎಂಬುದನ್ನು ಬಿಜೆಪಿ ನಾಯಕರು ಅರಿಯಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೆಹರೂ ಕುಟುಂಬದವರು ದೇಶಕ್ಕಾಗಿ ತಮ್ಮ ಆಸ್ತಿಪಾಸ್ತಿ ಮಾರಿದ್ದರು. ನೆಹರು 9 ವರ್ಷ ಜೈಲಿನಲ್ಲಿದ್ದರು. ಮೂವರು ಪ್ರಧಾನಿಗಳಾಗಿದ್ದರೂ ಸಾವಿರಾರು ಕೋಟಿ ಒಡೆಯರಲ್ಲ. ರಾಹುಲ್ ಗಾಂಧಿ ಅವರನ್ನು ಸತತ ಮೂರು ದಿನಗಳು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿರುವುದು ಖಂಡನೀಯ. ಅವರು ಕ್ರಿಮಿನಲ್ ಅಲ್ಲ, ಯಾರದೋ ಆಸ್ತಿಪಾಸ್ತಿ ಕಬಳಿಸಿಲ್ಲ. ಆದರೂ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಖಂಡನೀಯ ಎಂದು ಅವರು ತಿಳಿಸಿದರು. ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಟೀಕಿಸುತ್ತಿದ್ದ ಬಿಜೆಪಿ ನಾಯಕರಿಗೆ ಸಿಂಹಸ್ವಪ್ನವಾಗಿ ಕಾಣುತ್ತಿದ್ದಾರೆ. ಹೆಚ್ಚುತ್ತಿರುವ ಜನಪ್ರಿಯತೆ ಸಹಿಸಲಾಗುತ್ತಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾತ್ರೆ ಮಾಡುವುದಾಗಿ ಘೋಷಿಸಿದ ಬಳಿಕ ಬಿಜೆಪಿಯವರ ದ್ವೇಷ ಮತ್ತಷ್ಟುಹೆಚ್ಚಾಗಿದೆ ಎಂದದರು.
ಮೋದಿ ಕರ್ನಾಟಕ ಪ್ರವಾಸ, ಪ್ರಧಾನಿ ಕಾರ್ಯಾಲಯದಿಂದ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಬಿಜೆಪಿಗೆ ತಕ್ಕ ಪಾಠ: ದಕ್ಷಿಣ ಪದವೀಧರರ ಕ್ಷೇತ್ರದ ಪ್ರಜ್ಞಾವಂತ ಪದವೀಧರರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಉದ್ಯೋಗ ನೀಡದೇ ನಿರಾಸೆಗೊಳಿಸಿದ, ಪಕೋಡ ಮಾರುವಂತೆ ಹೇಳಿದ ಪ್ರಧಾನಿ ನರೇಂದ್ರ ಮೋದಿಗೆ ಪಾಠ ಕಲಿಸಿದ್ದಾರೆ. ವಿಶ್ವ ಯೋಗ ದಿನ ಆಚರಿಸಲು ಮೈಸೂರಿಗೆ ಆಗಮಿಸುವ ಮೋದಿಗೆ ಗೆಲುವಿನ ಉಡುಗೊರೆ ನೀಡುವುದಾಗಿ ಕರೆ ನೀಡಿದ್ದರು. ಪದವೀಧರರು ಸೋಲಿನ ಉಡುಗೊರೆ ನೀಡಿದ್ದಾರೆ. ಈ ಫಲಿತಾಂಶವೂ 2023ರ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.
ಸಂಘಟಿತ ಹೋರಾಟದಿಂದ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಮಧು ಜಿ.ಮಾದೇಗೌಡ ಗೆಲುವು ಸಾಧಿಸಿದ್ದಾರೆ. 8 ತಿಂಗಳ ಮುಂಚಿತವಾಗಿ ಅಭ್ಯರ್ಥಿ ಆಯ್ಕೆ ಮಾಡಿದ್ದು, ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಕೀಲಾರ ಜಯರಾಂ ಅವರು ಮಧು ಪರವಾಗಿ ಪ್ರಚಾರ ಮಾಡಿದ್ದು ಗೆಲುವಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಪ್ರತಾಪಸಿಂಹ ಅಪ್ರಬುದ್ಧ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಲು ಸಂಸದ ಪ್ರತಾಪಸಿಂಹಗೆ ನೈತಿಕತೆ ಇಲ್ಲ. ಅವರೊಬ್ಬ ಅಪ್ರಬುದ್ಧ ರಾಜಕಾರಣಿ. ಒಳ್ಳೇಯ ಕೆಲಸ ಮಾಡಲಿ ಸ್ವಾಗತಿಸುತ್ತೇವೆ. ಉದ್ಧಟತನದ ಮಾತು ಘನತೆಗೆ ಗೌರವ ತರುವುದಿಲ್ಲ. ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ ವೇದಿಕೆಗಾಗಿ ಕಚ್ಚಾಡುತ್ತಿರುವುದು ಮೈಸೂರಿಗೆ ಅಗೌರವ. ರಾಜವಂಶಸ್ಥರನ್ನು ಆಹ್ವಾನಿಸದಿರುವುದು ಶೋಭೆ ತರುವುದಿಲ್ಲ. ಮೊದಲು ನಿಮ್ಮ ಆಂತರಿಕ ಕಚ್ಚಾಟ ಸರಿಪಡಿಸಿಕೊಳ್ಳುವಂತೆ ತಿರುಗೇಟು ನೀಡಿದರು.
ಶೂರರಂತೆ ವೀರರಂತೆ ಮಾತಾಡುವ ಪ್ರತಾಪಸಿಂಹ ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿಎಂ ಆಗಲು 2500 ಕೋಟಿ, ಸಚಿವರಾಗಲು 100 ಕೋಟಿ ಕೇಳಿದ್ದಾಗಿ ಆರೋಪಿಸಿದ್ದರು. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಪಠ್ಯ ಪುಸ್ತಕದಲ್ಲಿ ಸಮಾಜ ಸುಧಾಕರಿಗೆ ಅಗೌರವ ತರುವ ಕೆಲಸವನ್ನು ಇತಿಹಾಸದಲ್ಲಿ ಯಾರೂ ಮಾಡಿರಲಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆ, ಮೀತಿ ಮೀರಿದೆ. ಆಂತರಿಕ ಕಚ್ಚಾಟದಿಂದ ಬಿಜೆಪಿಯೊಳಗೆ ಗೊಂದಲ ಸರಿಪಡಿಸಿಕೊಳ್ಳಬೇಕು ಎಂದರು. ನೂಪುರ್ ಶರ್ಮಾ, ನವೀನ್ ಜಿಂದಾಲ್ ಪ್ರವಾದಿಯನ್ನು ನಿಂದಿಸಿದ್ದರಿಂದ ಅನೇಕ ಮುಸ್ಲಿಂ ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ. ಪ್ರವಾದಿಯನ್ನು ನಿಂದಿಸಿದವರು ದೇಶದ್ರೋಹಿಗಳು, ಅವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನಮ್ಮ ಪಕ್ಷದ ಅಭ್ಯರ್ಥಿ ಸೋತಿದ್ದು ಸಂತಸವಾಗಿದೆ, ಜೆಡಿಎಸ್ MLC ಅಚ್ಚರಿ ಹೇಳಿ
ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ಗೆ ಕಾಮನ್‌ಸೆನ್ಸ್ ಇಲ್ಲ.ಯಾವ ಕಾಲೇಜಿನಲ್ಲಿ ಡಾಕ್ಟರೇಟ್ ಪಡೆದರು? ಕಾಂಗ್ರೆಸ್ ಪ್ರತಿಭಟನೆ ಮಾಡುವುದರಿಂದ ಕೊರೋನಾ ಬರುವುದಾದರೆ, 16 ಸಾವಿರ ಜನರನ್ನು ಸೇರಿಸಿಕೊಂಡು ಯೋಗ ಮಾಡಿದರೆ ಕೊರೋನಾ ಬರುವುದಿಲ್ಲವೇ? ದ್ವಂದ್ವ ನೀತಿಗಳನ್ನು ಬಿಡಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಎಂ. ಶಿವಣ್ಣ, ಜಿ.ವಿ.ಸೀತಾರಾಂ ಮುಂತಾದವರು ಇದ್ದರು.