ಪ್ರಧಾನಿ ಮೋದಿ ಬರೀ ಸುಳ್ಳು ಹೇಳ್ತಾರೆ: ಎಂ.ಬಿ.ಪಾಟೀಲ
ಕಪ್ಪು ಹಣ ವಾಪಸ್ ತರಲಿಲ್ಲ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಟೀಕೆ
ವಿಜಯಪುರ(ಏ.29): ಅಚ್ಛೇ ದಿನ್ ಹೆಸರಲ್ಲಿ ದೇಶ ಮತ್ತು ರಾಜ್ಯದ ಪರಿಸ್ಥಿತಿ ಹಾಳಾಗಿದೆ. ಪ್ರಧಾನಿ ಮೋದಿ ಬರೀ ಸುಳ್ಳು ಹೇಳುತ್ತಾರೆ. ಕಪ್ಪು ಹಣ ವಾಪಸ್ ತರಲಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರೋಪಿಸಿದರು.
ನಾಗಠಾಣ ಕ್ಷೇತ್ರದ ಕನ್ನೂರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಧೋಂಡಿಬಾ ಕಟಕದೊಂಡ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಮೋದಿ ಅವರು ನೋಟ್ ಬ್ಯಾನ್ ಮಾಡಿ ಈ ಮುಂಚೆ ಇದ್ದ ಉದ್ಯೋಗಗಳನ್ನೂ ಖಡಿತಗೊಳಿಸಿದರು. ಪೆಟ್ರೋಲ್, ಡಿಸೇಲ್ ಬೆಲೆ ಏರಿಸಿ, ದಿನಬಳಕೆ ವಸ್ತುಗಳು ಕೃಷಿ ಸಲಕರಣೆ ಬೆಲೆ ತುಟ್ಟಿಯಾಗುವಂತೆ ಮಾಡಿದರು ಎಂದು ಹರಿಹಾಯ್ದರು.
ಬಿಜೆಪಿ ಸರ್ಕಾರದ ಎರಡೂ ಎಂಜಿನ್ ಫೇಲ್: ಎಂ.ಬಿ.ಪಾಟೀಲ ವಾಗ್ದಾಳಿ
ನಾವು ನುಡಿದಂತೆ ನಡೆದಿದ್ದೇವೆ. ನಾವು 150 ಭರವಸೆ ನೀಡಿ, 160ನ್ನು ಈಡೇರಿಸಿದ್ದೇವೆ. ಬಿಜೆಪಿ 600 ಭರವಸೆಗಳನ್ನು ಕೊಟ್ಟು ಕೇವಲ 48 ಈಡೇರಿಸಿದ್ದಾರೆ. ಒಂದೇ ಒಂದು ಮನೆ ಕಟ್ಟಿಲ್ಲ. ನಾವು 18 ಲಕ್ಷ ಮನೆಗಳನ್ನು ಕಟ್ಟಿದ್ದೇವೆ. ಅವರು ಲಕ್ಷ ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಡಬಲ್ ಎಂಜಿನ್ ಸರ್ಕಾರದಲ್ಲಿ ನೀರಾವರಿಗೆ ಏನೂ ಮಾಡಲಿಲ್ಲ. ನಾವು ಜಿಲ್ಲೆಗೆ . 14 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಹಗಲುರಾತ್ರಿ ದುಡಿದು ಮುಳವಾಡ, ತಿಡಗುಂದಿ ಅಕ್ವಾಡೆಕ್ಟ್ ಸೇರಿ ಆಗದ ಕೆಲಸ ಆಗಿವೆ. ಎರಡೇ ವರ್ಷದಲ್ಲಿ 14 ಕಿ.ಮೀ.ಉದ್ದದ ಅಕ್ವಾಡೆಕ್ಟ್ ಪೂರ್ಣ ಮಾಡಿ ಏಶಿಯಾದಲ್ಲೇ ದೊಡ್ಡದು ಎಂಬ ಕೀರ್ತಿ ಪಡೆದವು. ಮುಂದೆಯೂ ಪ್ರತಿ ಊರಿಗೂ ನೀರು ಕೊಡುತ್ತೇವೆ ಎಂದು ಹೇಳಿದರು.
ಜಿಲ್ಲೆಯನ್ನು ಸಂಪೂರ್ಣ ನೀರಾವರಿ ಮಾಡುತ್ತೇವೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದಂತೆ ಬೊಗಸೆ ನೀರು ಕೊಟ್ಟಿದ್ದೇವೆ.
ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದರೆ ಯಾವುದೇ ಪ್ರಯೋಜನವಿಲ್ಲ. ಯೋಚಿಸಿ ಮತ ಹಾಕಬೇಕು. ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಅವರಿಗೆ 25 ಸಾವಿರ ಲೀಡ್ ಕೊಟ್ಟು ಗೆಲುವು ತನ್ನಿ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಡಿರುವ ನೀರಾವರಿ ಯೋಜನೆಗಳನ್ನು ನೆನಪಿಸಿಕೊಂಡು ಬೆಂಬಲ ನೀಡಬೇಕು ಎಂದು ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಸ್.ಲೋಣಿ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ಜನಮಾನಸದಿಂದ ದೂರವಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಯಾರಿಗೂ ಪರಿಚಯವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಈ ಭಾಗದಲ್ಲಿ ಅತಿ ಹೆಚ್ಚು ಜನಪ್ರಿಯರಾಗಿದ್ದು, ಶೇ.100ರಷ್ಟುಗೆಲ್ಲಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿ.ಎಲ್.ನಾಯಕ, ತುಕಾರಾಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಹಜಾನ್ ಮುಲ್ಲಾ, ಆರ್.ಡಿ.ಹಕ್ಕೆ, ಕಾಳಪ್ಪ ಬೆಳ್ಳುಂಡಗಿ, ಶಿವಾನಂದ ಡೊಳ್ಳಿ, ಇಸಾಕ್ ಜಮಾದಾರ್, ಹಣಮಂತ ಪಾಟೀಲ, ರಮೇಶ ಪಾಟೀಲ, ಶಬ್ಬೀರ್ ನಾದಾಫ್, ದಯಾನಂದ್ ಪಾಟೀಲ, ಸೋಮನಗೌಡ ಪಾಟೀಲ, ಅಬ್ದುಲ್ ನದಾಫ್ ಮುಂತಾದವರು ಉಪಸ್ಥಿತರಿದ್ದರು.
Narendra Modi: ನಾಳೆ ಗುಮ್ಮಟನಗರಕ್ಕೆ ಪ್ರಧಾನಿ ಮೋದಿ, ಎಲ್ಲೆಡೆ ಭಾರೀ ಭದ್ರತೆ!
ಈ ಹಿಂದೆ ಕಾಂಗ್ರೆಸ್ ಸರ್ವೇ ಜನೋ ಸುಖಿನೋ ಭವಂತಿ ಎಂಬ ತತ್ವದಡಿ ಸರ್ವ ಜನರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದೆ. ಈಗಿನ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಚುನಾವಣೆ ವೇಳೆ ಕೇವಲ ಗುಡಿ, ಗುಂಡಾರಗಳಿಗೆ ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ. ದುಡ್ಡು ಹಂಚುವವರಿಗೆ ಮರುಳಾಗದೇ ಕಾಂಗ್ರೆಸ್‌ಗೆ ಮತ ಹಾಕಬೇಕು ಅಂತ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ ಹೇಳಿದ್ದಾರೆ.
ಮತ ಹಾಕುವಾಗ ಜಾತಿ ನೋಡಬಾರದು. ಅಭಿವೃದ್ಧಿ ಮಾಡುವ ಅಭ್ಯರ್ಥಿಯನ್ನು ನೋಡಿ ವೋಟ್ ಹಾಕಬೇಕು. ಬಿಜೆಪಿ ಭ್ರಷ್ಟಾಚಾರದಲ್ಲಿ ಮತ್ತು ಜೆಡಿಎಸ್ ಜಾತಿ ರಾಜಕಾರಣದಲ್ಲಿ ನಿರತವಾಗಿವೆ. ಜನಪ್ರತಿನಿಧಿಗಳು ಕೇವಲ ಶುಭ ಮತ್ತು ಅಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಸಾಲದು. ಅಭಿವೃದ್ಧಿ ಕೆಲಸಗಳನ್ನೂ ಮಾಡಬೇಕು. ಆದರೆ, ನಾಗಠಾಣ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಅಂತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ತಿಳಿಸಿದ್ದಾರೆ.