'ಪಕ್ಷದಲ್ಲಿ ನನ್ನ ಕಡೆಗಣಿಸಲಾಗ್ತಿದೆ' : ಶೆಟ್ಟರ್ ಆಯ್ತು, ಈಗ ಸಂಗಣ್ಣ ಕರಡಿನಾ?
ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿವಾದ ಭಾರಿ ತಿರುವು ಪಡೆದುಕೊಳ್ಳುತ್ತಿದ್ದು, ಇತ್ಯರ್ಥವಾಗುವ ಲಕ್ಷಣ ಗೋಚರವಾಗುತ್ತಿಲ್ಲ. ಇದುವರೆಗೂ ಟಿಕೆಟ್ ಯಾರಿಗೆ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಫಲವಾದಂತೆ ಕಾಣುತ್ತಿದೆ. ಇದು ಈಗ ಮತ್ತೊಂದು ಹೈಡ್ರಾಮಾಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಕೊಪ್ಪಳ (ಏ.15) : ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿವಾದ ಭಾರಿ ತಿರುವು ಪಡೆದುಕೊಳ್ಳುತ್ತಿದ್ದು, ಇತ್ಯರ್ಥವಾಗುವ ಲಕ್ಷಣ ಗೋಚರವಾಗುತ್ತಿಲ್ಲ. ಇದುವರೆಗೂ ಟಿಕೆಟ್ ಯಾರಿಗೆ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಫಲವಾದಂತೆ ಕಾಣುತ್ತಿದೆ. ಇದು ಈಗ ಮತ್ತೊಂದು ಹೈಡ್ರಾಮಾಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಅಚ್ಚರಿಯ ಬೆಳವಣಿಗೆಯಲ್ಲಿ ಪಕ್ಷ ಟಿಕೆಟ್ ಘೋಷಣೆ ಮಾಡುವ ಮುನ್ನವೇ ಸಂಸದ ಸಂಗಣ್ಣ ಕರಡಿ ಹಾಗೂ ಆಕಾಂಕ್ಷಿ ಸಿ.ವಿ.ಚಂದ್ರಶೇಖರ ಏ.16 ರಂದು ಪ್ರತ್ಯೇಕ ಸಭೆ ಕರೆದಿದ್ದಾರೆ.
ಸಂಸದ ಸಂಗಣ್ಣ ಕರಡಿ(Sanganna karadi) ಅವರು ಬೆಳಗ್ಗೆ 11ಗಂಟೆಗೆ ಅವರ ಪ್ರಮೋದ ಕಲ್ಯಾಣ ಮಂಟಪದ ಬಳಿ ಇರುವ ತಮ್ಮ ಗೃಹ ಕಚೇರಿಯಲ್ಲಿ ಸಭೆ ಕರೆದಿದ್ದಾರೆ. ಈ ಕುರಿತು ಸಂದೇಶವನ್ನು ಹಿತೈಷಿಗಳು ಹಾಗೂ ಮುಖಂಡರಿಗೆ ರವಾನೆ ಮಾಡಿ, ಆಗಮಿಸುವಂತೆ ವಿನಂತಿ ಮಾಡಿದ್ದಾರೆ.
Ticket fight: ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್ ಟೆನ್ಶನ್: ಬೆಂಗಳೂರಲ್ಲಿ ಬೀಡುಬಿಟ್ಟಆಕಾಂಕ್ಷಿಗಳು
ಈ ನಡುವೆ ಇನ್ನೋರ್ವ ಆಕಾಂಕ್ಷಿ ಸಿ.ವಿ.ಚಂದ್ರಶೇಖರ(CV Chandrashekhar) ಏ.16ರಂದೇ ಬೆಳಗ್ಗೆ 10ಕ್ಕೆ ತಮ್ಮ ನಿವಾಸದಲ್ಲಿ ಪಕ್ಷದ ಹಿರಿಯರು, ಮುಖಂಡರು,ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಭೆ ಕರೆದಿದ್ದಾರೆ.
ಈ ಬೆಳವಣಿಗೆ ಈಗ ಬಿಜೆಪಿ ನಾಯಕರಲ್ಲಿಯೇ ತಳಮಳ ಉಂಟು ಮಾಡಿದೆ. ಪಕ್ಷ ಇದುವರೆಗೂ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ. ಆದರೂ ಪ್ರತ್ಯೇಕ ಸಭೆ ಕರೆಯುವ ಔಚಿತ್ಯವಾದರೂ ಏನಿತ್ತು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಈ ಎರಡು ಆಹ್ವಾನಗಳು ಅವರ ವೈಯಕ್ತಿಕವಾಗಿಯೇ ನೀಡಿದ್ದಾರೆ, ಹೊರತು ಪಕ್ಷದ ವತಿಯಿಂದ ಆಹ್ವಾನ ನೀಡಿಲ್ಲ.
ಪಕ್ಷ ನನ್ನನ್ನು ಕಡೆಗಣಿಸುತ್ತಿದೆ: ಸಂಗಣ್ಣ
ಟಿಕೆಟ್ ನೀಡುವ ಕುರಿತು ಸ್ಪಷ್ಟವಾಗಿ ಹೇಳುತ್ತಿಲ್ಲ. ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಹೈಕಮಾಂಡ್ ನನ್ನ ಪರವಾಗಿಯೇ ಶಿಫಾರಸ್ಸು ಮಾಡಿದ್ದರೂ ಕೇಂದ್ರ ಹೈಕಮಾಂಡ್‌ನಿಂದ ಯಾವುದೇ ನಿಖರ ಮಾಹಿತಿ ಬರುತ್ತಿಲ್ಲ. ನನ್ನೊಂದಿಗೆ ಯಾವುದರ ಕುರಿತೂ ಚರ್ಚೆ ಮಾಡುತ್ತಿಲ್ಲ. ಆದರೆ, ಹೊರಗೆ ಇನ್ನಿಲ್ಲದ ವದಂತಿಗಳು ಹರಡುತ್ತಿವೆ. ಇದರಿಂದ ನನ್ನನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಭಾವನೆ ಬರುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಸಂಸದರಿಗೆ ಟಿಕೆಟ್ ಇಲ್ಲ ಎನ್ನುತ್ತಾರೆ. ಪಂಚಮಸಾಲಿ ಸಮಾಜಕ್ಕೆ ಟಿಕೆಟ್ ಎನ್ನುತ್ತಾರೆ. ಆದರೆ ಇದ್ಯಾವುದನ್ನು ನನ್ನನ್ನು ಕೇಳುತ್ತಿಲ್ಲ. ಇದರಿಂದ ನೋವಾಗಿದೆ. ಅನೇಕರು ನನಗೆ ಕರೆ ಮಾಡಿ, ನನ್ನ ಹೆಸರು ಹೇಳಿ ಎಂದು ನನ್ನ ಕೇಳುತ್ತಿದ್ದಾರೆ. ಆದರೆ, ಪಕ್ಷ ಮಾತ್ರ ನನ್ನನ್ನು ಏನು ಕೇಳುತ್ತಲೇ ಇಲ್ಲ. ಹೀಗಾಗಿ, ಪಕ್ಷದ ಮುಖಂಡರ, ಅಭಿಮಾನಿಗಳ, ಹಿತೈಸಿಗಳ ಸಭೆ ಕರೆದಿದ್ದು, ಅವರ ಅಭಿಪ್ರಾಯ ಪಡೆದು, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಅವರು ನೀಡುವ ಸಲಹೆ ಆಧರಿಸಿ, ನಂತರ ಮುಖಂಡರು ಪ್ರತ್ಯೇಕವಾಗಿ ಸಭೆ ಮಾಡಿ, ತೀರ್ಮಾನ ಮಾಡುತ್ತೇನೆ. ಈಗಲೇ ನಾನು ಏನೂ ಹೇಳುವುದಿಲ್ಲ ಎಂದಿದ್ದಾರೆ.
ಟಿಕೆಟ್ ವಿಳಂಬದಿಂದ ಧೈರ್ಯಗೆಡದಿರಿ:ಸಿವಿಸಿ
ಪಕ್ಷ ಕಾರಣಾಂತರಗಳಿಂದ ಟಿಕೆಟ್ ನೀಡುವ ಕುರಿತು ತೀರ್ಮಾನ ಮಾಡಲು ಆಗಿಲ್ಲ. ಹೀಗಾಗಿ, ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬೇಡಿ,ಪಕ್ಷಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಇರೋಣ ಎಂದು ಧೈರ್ಯ ತುಂಬುವ ದಿಸೆಯಲ್ಲಿ ಪಕ್ಷದ ಕಾರ್ಯಕರ್ತರ, ಮುಖಂಡರ, ಹಿರಿಯ ಸಭೆ ಕರೆದಿದ್ದೇನೆ ಎಂದು ಆಕಾಂಕ್ಷಿ ಸಿ.ವಿ.ಚಂದ್ರಶೇಖರ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ: ಕೊಪ್ಪಳ ಬಿಜೆಪಿ ಟಿಕೆಟ್‌ಗೆ ಸಿವಿಸಿ- ಕರಡಿ ಮೆಗಾ ಫೈಟ್!
ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಪಕ್ಷ ಸಭೆ ಅಧಿಕೃತವಾಗಿ ಕರೆದಿಲ್ಲವಾದರೂ ನಾನೇ ಪಕ್ಷದ ಕಾರ್ಯಕರ್ತರ, ಮುಖಂಡರ, ಹಿತೈಷಿಗಳ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚುನಾವಣೆ ಎದುರಿಸುವ ಕುರಿತು ಚರ್ಚೆ ಮಾಡಲಾಗುವುದು. ಬಿಜೆಪಿ ಅಭ್ಯರ್ಥಿಯನ್ನು ಪ್ರಸಕ್ತ ಚುನಾವಣೆಯಲ್ಲಿ ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ ಎಂದಿದ್ದಾರೆ.