Asianet Suvarna News Asianet Suvarna News

Ticket fight: ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್‌ ಟೆನ್ಶನ್‌: ಬೆಂಗಳೂರಲ್ಲಿ ಬೀಡುಬಿಟ್ಟಆಕಾಂಕ್ಷಿಗಳು

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಟೆನ್ಶನ್‌ ದಿನೇ ದಿನೆ ಹೆಚ್ಚುತ್ತಿದೆ. ಯಾರಿಗೆ ಸಿಗುತ್ತದೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದರಲ್ಲೂ ಹಾಲಿ ಸಂಸದ ಸಂಗಣ್ಣ ಕರಡಿ ರಾಷ್ಟ್ರ ರಾಜಕಾರಣಕ್ಕೆ ಗುಡ್‌ ಬೈ ಹೇಳಿ ರಾಜ್ಯರಾಜಕಾರಣಕ್ಕೆ ಬರಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ, ಟಿಕೆಟ್‌ ಫೈಟ್‌ ಮತ್ತಷ್ಟುಕಗ್ಗಂಟಾಗುತ್ತಿದೆ.

Karnataka election BJP ticket tension in Koppal constituency assembly rav
Author
First Published Apr 6, 2023, 9:18 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ (ಏ.6) : ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಟೆನ್ಶನ್‌ ದಿನೇ ದಿನೆ ಹೆಚ್ಚುತ್ತಿದೆ. ಯಾರಿಗೆ ಸಿಗುತ್ತದೆ ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದರಲ್ಲೂ ಹಾಲಿ ಸಂಸದ ಸಂಗಣ್ಣ ಕರಡಿ ರಾಷ್ಟ್ರ ರಾಜಕಾರಣಕ್ಕೆ ಗುಡ್‌ ಬೈ ಹೇಳಿ ರಾಜ್ಯರಾಜಕಾರಣಕ್ಕೆ ಬರಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ, ಟಿಕೆಟ್‌ ಫೈಟ್‌ ಮತ್ತಷ್ಟುಕಗ್ಗಂಟಾಗುತ್ತಿದೆ.

ಹಾಗಂತ ಸಂಸದ ಕರಡಿ ಇದುವರೆಗೂ ಎಲ್ಲಿಯೂ ಕೊಪ್ಪಳ ವಿಧಾನಸಬಾ ಕ್ಷೇತ್ರ(Koppal assembly constituency)ದ ಟಿಕೆಟ್‌ ಆಕಾಂಕ್ಷಿ ಎಂದು ಹೇಳಿಲ್ಲ. ಆದರೆ, ಪಕ್ಷ ಸೂಚಿಸಿದರೇ ಖಂಡಿತವಾಗಿಯೂ ಸ್ಪರ್ಧೆ ಮಾಡುತ್ತೇನೆ. ನಾನೇ ಸ್ಪರ್ಧೆ ಮಾಡಬೇಕು ಎಂದು ಕೊಪ್ಪಳ ಕ್ಷೇತ್ರದ ಮತದಾರರ ಅಪೇಕ್ಷೆಯಾಗಿದೆ ಎಂದಷ್ಟೇ ಹೇಳುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿರುವ ಅವರು ರಾಜ್ಯರಾಜಕಾರಣಕ್ಕೆ ಬರುವ ದಿಸೆಯಲ್ಲಿ ನಡೆಸಿರುವ ಪ್ರಯತ್ನ ಗುಟ್ಟಾಗಿ ಉಳಿದಿಲ್ಲ. ಅದರಲ್ಲೂ ಕಳೆದೆರಡು ದಿನಗಳಿಂದ ರಾಜ್ಯ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಕೇವಲ ತಾವಷ್ಟೇ ಅಲ್ಲ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ತಮ್ಮ ಆತ್ಮೀಯರೊಂದಿಗೆ ಭೇಟಿಯಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ವಿಧಾನಸಭಾ ಚುನಾವಣೆ: ಕೊಪ್ಪಳ ಬಿಜೆಪಿ ಟಿಕೆಟ್‌ಗೆ ಸಿವಿಸಿ- ಕರಡಿ ಮೆಗಾ ಫೈಟ್‌!

ಕರಡಿ ಅವರು ತಮಗೆ ಟಿಕೆಟ್‌ ಕೋರುತ್ತಿದ್ದಾರೆ. ಹಾಗೊಂದು ವೇಳೆ ಕೊಡದಿದ್ದರೆ ಪುತ್ರ ಗವಿಸಿದ್ದಪ್ಪ ಕರಡಿ ಅವರಿಗಾದರೂ ಟಿಕೆಟ್‌ ಪಡೆಯುವ ಯತ್ನ ಮಾಡುತ್ತಿದ್ದಾರೆ ಎಂದು ಅವರ ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಕೋರ್‌ ಕಮಿಟಿ ಸಭೆಯಲ್ಲಿಯೂ ಈ ಕುರಿತು ಗಂಭೀರವಾಗಿ ಚರ್ಚೆಯಾಗಿದ್ದರೂ ನಾಲ್ವರ ಹೆಸರು ಮುಂಚೂಣಿಯಲ್ಲಿವೆ. ಕಳೆದ ಬಾರಿ ಟಿಕೆಟ್‌ ಕೈ ತಪ್ಪಿದ ಸಿ.ವಿ.ಚಂದ್ರಶೇಖರ, ಸಂಸದ ಸಂಗಣ್ಣ ಕರಡಿ, ಗವಿಸಿದ್ದಪ್ಪ ಕರಡಿ ಹಾಗೂ ರಾಜಶೇಖರ ಆಡೂರು ಹೆಸರು ಚರ್ಚೆಯಾಗಿವೆ ಎಂದು ಹೇಳಲಾಗುತ್ತಿದೆ.

ಸ್ಪರ್ಧೆ ಬಹುತೇಕ ಪಿಕ್ಸ್‌ :

ಸಂಗಣ್ಣ ಕರಡಿ(Sanganna karadi) ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ಪರ್ಧೆ ಮಾಡುವುದು ಪಿಕ್ಸ್‌ ಎನ್ನಲಾಗುತ್ತಿದೆ. ಬಿಜೆಪಿ ಹೈಕಮಾಂಡ್‌ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲವಾದ್ದರಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಈಗಲೂ ಹೈಕಮಾಂಡ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೂ ಅವರ ಆಪ್ತರು ಮಾತ್ರ ಬಿಜೆಪಿ ಟಿಕೆಟ್‌ ಕೈ ತಪ್ಪಿದರೂ ಅವರು ಅಖಾಡಕ್ಕೆ ಇಳಿಯುವುದು ಪಕ್ಕಾ ಎನ್ನುತ್ತಿದ್ದಾರೆ. ಪಕ್ಷೇತರ ಅಥವಾ ಜೆಡಿಎಸ್‌ ಪಕ್ಷದಿಂದ ಅಖಾಡಕ್ಕೆ ಇಳಿಯುತ್ತಾರೆ ಎಂದು ಅವರ ಆಪ್ತರು ಕ್ಷೇತ್ರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ,ಈಗ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮೂವರ ಹೆಸರು:

ರಾಜ್ಯ ಹೈಕಮಾಂಡ್‌ನಿಂದ ಕೇಂದ್ರ ಹೈಕಮಾಂಡ್‌ಗೆ ಮೂರು ಹೆಸರನ್ನು ಕಡ್ಡಾಯವಾಗಿ ಕಳುಹಿಸಬೇಕಾಗಿದೆ. ಇದರಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸಿ.ವಿ.ಚಂದ್ರಶೇಖರ ಹಾಗೂ ರಾಜಶೇಖರ ಆಡೂರು ಹೆಸರಂತೂ ಪಕ್ಕಾ ಆಗಿವೆ. ಇನ್ನು ಸಂಸದ ಸಂಗಣ್ಣ ಕರಡಿ ಹಾಗೂ ಸಂಸದರ ಪುತ್ರ ಗವಿಸಿದ್ದಪ್ಪ ಕರಡಿ ಎರಡು ಹೆಸರಿನಲ್ಲಿ ಯಾವುದಾದರೂ ಒಂದು ಹೆಸರು ಮಾತ್ರ ಕೇಂದ್ರ ಹೈಕಮಾಂಡ್‌ಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹಾಲಪ್ಪ ಆಚಾರ್‌ಗೆ ಮತ್ತೊಮ್ಮೆ ಟಿಕೆಟ್: ಅಶೀರ್ವಾದ ಮಾಡುವಂತೆ ಮತದಾರರಿಗೆ ಮನವಿ ಮಾಡಿದ ಕಾರಜೋಳ

ಪಕ್ಷದ ಯಾವುದೇ ಸೂಚನೆ ಬಂದಿಲ್ಲ. ಯಾವುದೇ ಕ್ಷೇತ್ರದ ಟಿಕೆಟ್‌ ಸಹ ಫೈನಲ್‌ ಆಗಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ಮೂರು ಹೆಸರುಗಳನ್ನು ಕಳುಹಿಸಿ ಕೊಡಲು ತೀರ್ಮಾನವಾಗಿದೆ. ಕೇಂದ್ರ ಹೈಕಮಾಂಡ್‌ ಅಂತಿಮ ಯಾದಿ ನೀಡುತ್ತದೆ. ಈಗಲೇ ಏನು ಹೇಳಲು ಆಗುವುದಿಲ್ಲ.

ಸಂಗಣ್ಣ ಕರಡಿ, ಸಂಸದರು ಕೊಪ್ಪಳ

ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ. ಪಕ್ಷದ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ನನಗೆ ಟಿಕೆಟ್‌ ಸಿಗುವ ವಿಶ್ವಾಸವೂ ಇದೆ. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ನನಗೆ ಸಿಕ್ಕ ಟಿಕೆಟ್‌ ತಪ್ಪಿದಾಗಲೂ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದೇನೆ. ಈ ಬಾರಿ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎನ್ನುವುದು ನನ್ನ ನಂಬಿಕೆ ಮತ್ತು ದೇವರ ಆರ್ಶಿವಾದ. ನಾನು ಟಿಕೆಟ್‌ಗಾಗಿ ಲಾಭಿ ಮಾಡಿಲ್ಲ. ಮಾಡುವುದೂ ಇಲ್ಲ. ಪಕ್ಷದ ಸಿದ್ಧಾಂತದಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ.

ಸಿ.ವಿ. ಚಂದ್ರಶೇಖರ ಆಕಾಂಕ್ಷಿ

Follow Us:
Download App:
  • android
  • ios