ಕೋಲಾರ ಬಿಜೆಪಿಯಲ್ಲೂ ಭಿನ್ನಮತ: ಮಾಲೂರು ಟಿಕೆಟ್ ಯಾರಿಗೆ?
* ಕೋಲಾರ ಬಿಜೆಪಿಯಲ್ಲೂ ಭಿನ್ನಮತ
* ಮಾಲೂರು ಟಿಕೆಟ್ ಯಾರಿಗೆ?
* ಒಂದೇ ಪಕ್ಷದವರಲ್ಲೇ ಪರಸ್ಪರ ಪೈಪೋಟಿ
ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ, (ಜುಲೈ.10) : 2023ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗಲೇ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ಗಾಗಿ ಒಂದೇ ಪಕ್ಷದವರಲ್ಲೇ ಪರಸ್ಪರ ಪೈಪೋಟಿ ಏರ್ಪಟಿದೆ. ಇಬ್ಬರು ಟಿಕೆಟ್ ಆಕಾಂಕ್ಷಿಗಳು ರಾಜ್ಯ ಹಾಗೂ ಕೇಂದ್ರ ನಾಯಕರುಗಳನ್ನು ಕ್ಷೇತ್ರಕ್ಕೆ ಕರೆಸಿ ಅವರ ಸಮ್ಮುಖದಲ್ಲೇ ತಮ್ಮ ಬಲಾಬಲ ಪ್ರದರ್ಶನಕ್ಕೆ ಇಳಿದಿದ್ದಾರೆ. ಈ ಮೂಲಕ ಮಾಲೂರಲ್ಲಿ ರಾಜಕೀಯ ರಂಗೇರಿದೆ..
ಎಲ್ಲೆಲ್ಲೂ ರಾರಾಜಿಸುತ್ತಿರುವ ಕೇಸರಿ ಬಾವುಟಗಳು, ಪಟ್ಟಣದ ರಸ್ತೆಯ ಎರಡೂ ಬದಿಯಲ್ಲಿ ಅಬ್ಬರಿಸುತ್ತಿರುವ ನಾಯಕರುಗಳು ಬೃಹತ್ ಪ್ಲೆಕ್ಸ್ ಹಾಗೂ ಕಟೌಟ್ಗಳು, ಇನ್ನೊಂದೆಡೆ ಎರಡೆರಡು ವೇದಿಕೆಯಲ್ಲಿ ಜಮಾಹಿಸಿದ್ದ ಕೇಂದ್ರ ಹಾಗೂ ರಾಜ್ಯ ನಾಯಕರುಗಳು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ.
ಹೌದು... ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಇನ್ನೂ ಹತ್ತು ತಿಂಗಳು ಬಾಕಿ ಇರುವಾಗಲೇ ರಾಜಕೀಯ ರಂಗೇರಿದೆ. ಅದು ಬೇರೆ ಪಕ್ಷದವರೊಟ್ಟಿಗೆ ಅಲ್ಲ ಸ್ವಪಕ್ಷೀಯರಲ್ಲೇ. ಮಾಲೂರು ಬಿಜೆಪಿ ಮುಖಂಡ ಹೂಡಿ ವಿಜಯ್ ಕುಮಾರ್ ಕಳೆದ ನಾಲ್ಕು ವರ್ಷಗಳಿಂದ ಮಾಲೂರಿನಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಪಕ್ಷ ಸಂಘಟನೆ ಮಾಡುತ್ತಾ ಮಾಲೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಬಿಂಬಿಸಿಕೊಂಡಿದ್ದರು. ಆದರೆ ಇತ್ತಿಚೆಗಷ್ಟೇ ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಹಿನ್ನೆಲೆಯಲ್ಲಿ, ಇವರಿಬ್ಬರಲ್ಲಿ ಟಿಕೆಟ್ ಯಾರಿಗೆ ಅನ್ನೋ ಕಾರಣಕ್ಕೆ ಬಿಜೆಪಿ ಪಕ್ಷದವರಲ್ಲೇ ಟಿಕೆಟ್ ಪೈಟ್ ಶುರುವಾಗಿದೆ.
2023ರ ಕುರುಕ್ಷೇತ್ರದಲ್ಲಿ ಸಿದ್ದು ಅಖಾಡ ಯಾವುದು..? ಏನಿದು ಲೆಕ್ಕರಾಮಯ್ಯನ ಅಸಲಿ ಲೆಕ್ಕಾಚಾರ?
ಜುಲೈ-10 ಭಾನುವಾರ ಮಾಜಿ ಶಾಸಕ ಮಂಜುನಾಥಗೌಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹಾಗೂ ಸಚಿವರಾದ ಆರ್.ಅಶೋಕ್, ಡಾ.ಸುಧಾಕರ್, ಮುನಿರತ್ನ, ಸಂಸದ ಮುನಿಸ್ವಾಮಿ ಎಲ್ಲರ ಸಮ್ಮುಖದಲ್ಲಿ ತಮ್ಮ ಬೆಂಬಲಿಗರ ಸೇರ್ಪಡೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಆದರೆ ಇದಕ್ಕೆ ಟಾಂಗ್ ಕೊಡಲು ಹೂಡಿ ವಿಜಯ್ ಕುಮಾರ್ ಶನಿವಾರವೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಎಂಟಿಬಿ ನಾಗರಾಜ್, ಕೋಟಾ ಶ್ರೀನಿವಾಸಪೂಜಾರಿ ಸೇರಿ ಹಲವರನ್ನು ಕರೆಸಿ ಕೇಂದ್ರ ಸರ್ಕಾರದ ಆಯುಷ್ಮಾನ್ ಕಾರ್ಡ್ ವಿತರಣೆ ಹೆಸರಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಿದ್ದರು.ಈ ವೇಳೆ ಮಾತನಾಡಿದ ಮುಖಂಡ ಹೂಡಿ ವಿಜಯ್ ಕುಮಾರ್ ನಮ್ಮ ಮಾಲೂರು ಕ್ಷೇತ್ರದಲ್ಲಿ ಎರಡು ಮೂರು ಗುಂಪುಗಳಿರುವುದು ನಿಜ, ಅದು ರಾಜ್ಯ ನಾಯಕರ ಗಮನಕ್ಕೂ ಇದೆ ಎಂದರು, ಇನ್ನು ಭಾನುವಾರ ನಡೆದ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ ಎಂದರು.
ಇನ್ನು ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಮಂಜುನಾಥಗೌಡ ಭಾನುವಾರ ತಮ್ಮ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಹೆಸರಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು, ಅದ್ದೂರಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಸುಧಾಕರ್, ಮುನಿರತ್ನ, ಆರ್.ಅಶೋಕ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು, ಈ ವೇಳೆ ಮಾತನಾಡಿದ ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರು ಪರೋಕ್ಷವಾಗಿ ಮಾಲೂರು ಕ್ಷೇತ್ರದಲ್ಲಿ ಮಂಜುನಾಥಗೌಡ ಅಭ್ಯರ್ಥಿ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ಬಲ ತುಂಬಬೇಕು, ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ ಕನಿಷ್ಠ ಇಬ್ಬರು ಶಾಸಕರು ಮುಂದಿನ ಸಚಿವರಾಗುತ್ತಾರೆ ಎಂದರು.
ಇನ್ನು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ಮಾಜಿ ಶಾಸಕ ಮಂಜುನಾಥಗೌಡ ಮಾತನಾಡಿ, ನಾನು ಚುನಾವಣೆಯಲ್ಲಿ ಸ್ವರ್ಧೆ ಮಾಡಬೇಕೆಂದು ಪಕ್ಷಕ್ಕೆ ಬಂದಿರುವುದು, ಪಕ್ಷದಲ್ಲಿ ಇಲ್ಲಿ ಯಾರು ಸಮರ್ಥರು ಇಲ್ಲ ಎಂದು ನನ್ನನ್ನು ಪಕ್ಷಕ್ಕೆ ಕರೆದುಕೊಂಡು ಬಂದಿರುವುದು. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಮತಗಳಿವೆ. ನಾನು ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಮೂಲ ಬಿಜೆಪಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತೇನೆ. ಇನ್ನು ಹೂಡಿ ವಿಜಯ್ ಕುಮಾರ್ ಆಯೋಜನೆ ಮಾಡಿದ್ದ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿರಲಿಲ್ಲ, ಕರೆದಿದ್ದರೆ ಹೋಗುತ್ತಿದ್ದೆ ಎನ್ನುವ ಮೂಲಕ ಇಬ್ಬರ ನಡುವೆ ಇರುವ ಮನಸ್ಥಾಪವನ್ನು ಹೊರಹಾಕಿದರು.
ಒಟ್ಟಾರೆ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ಗಾಗಿ ಇಬ್ಬರು ಟಿಕೆಟ್ ಆಕಾಂಕ್ಷಿಗಳ ನಡುವೆ ಗುದ್ದಾಟ ಶುರುವಾಗಿದ್ದರೆ, ಅದನ್ನು ಶಮನ ಮಾಡಬೇಕಿದ್ದ ರಾಜ್ಯ ಹಾಗೂ ಕೇಂದ್ರ ನಾಯಕರುಗಳು ಬೇರೆ ಬೇರೆಯಾಗಿ ಭಾಗವಹಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ನಡೆದುಕೊಳ್ಳುತ್ತಿರುವುದು ಮಾತ್ರ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದೆ.