ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಆಪ್ ಕಣ್ಣು, 21ಕ್ಕೆ ಬೆಂಗಳೂರಿಗೆ ಕೇಜ್ರೀವಾಲ್!
* ಕಳೆದ 7 ವರ್ಷಗಳಿಂದ ದೆಹಲಿಯಲ್ಲಿ ಉತ್ತಮ ಆಡಳಿತವನ್ನ ಅರವಿಂದ್ ಕೇಜ್ರಿವಾಲ್
* ಇದೇ 21 ರಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ
* ನ್ಯಾಶನಲ್ ಕಾಲೇಜು ಆಟದ ಮೈದಾನದಲ್ಲಿ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ
ಬೆಂಗಳೂರು(ಏ.18): ದೆಹಲಿಯಲ್ಲಿ ಕಳೆದ 7 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಅರವಿಂದ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್ ಗೆಲುವಿನ ಬಳಿಕ ಮತ್ತಷ್ಟು ಬಲಶಾಲಿಯಾಗಿದೆ. ಇದೀಗ ತನ್ನ ಪಕ್ಷವನ್ನು ಇತರ ರಾಜ್ಯಗಳಿಗೂ ವಿಸ್ತರಿಸಲು ನಿರ್ಧರಿಸಿರುವ ಆಪ್ ಗುಜರಾತ್ ಹಾಗೂ ಕರ್ನಾಟಕ ಗೆಲ್ಲುವ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಚುನಾವಣೆಗೆ ಒಂದು ವರ್ಷಕ್ಕೂ ಮೊದಲೇ ಸಿದ್ಧತೆ ಆರಂಭಿಸಿದೆ. ಆಪ್ ಸಿದ್ಧತೆಗೆ ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೇರ್ಪಡೆ ಮತ್ತಷ್ಟು ಬಲ ತುಂಬಿದೆ.
ಇನ್ನು ಆಮ್ ಆದ್ಮಿ ಪಾರ್ಟಿ ಇಂದು, ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದೆ. ಪಕ್ಷದ ಮುಖಂಡರಾದ ಭಾಸ್ಕರ್ ರಾವ್, ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸೇರಿದಂತೆ ಹಲವು ನಾಯಕರು ಇದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹೊಸ ಜನಪರ ರಾಜಕೀಯ ಶುರುಮಾಡಲು ಕರೆ ಕೊಟ್ಟ ಪಕ್ಷದ ಅಧ್ಯಕ್ಷ ಪೃಥ್ವಿ ರೆಡ್ಡಿ ಇದೇ 21 ರಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕಳೆದ 7 ವರ್ಷಗಳಿಂದ ದೆಹಲಿಯಲ್ಲಿ ಉತ್ತಮ ಆಡಳಿತವನ್ನ ಅರವಿಂದ್ ಕೇಜ್ರಿವಾಲ್ ಕೊಟ್ಟಿದ್ದಾರೆ. ಇಡೀ ದೇಶದ ಜನ ಪಂಜಾಬ್ ಹಾಗೂ ದೆಹಲಿಯತ್ತ ನೋಡುತ್ತಿದ್ದಾರೆ. ಇದೀಗ ನಮ್ಮ ರಾಜ್ಯ ಕೂಡ ಅದನ್ನೇ ನೋಡುತ್ತಿದ್ದೇವೆ ಎಂದಿದ್ದಾರೆ.
21 ರಂದು ರಾಜ್ಯಕ್ಕೆ ಆಗಮಿಸಲಿರುವ ಕೇಜ್ರೀವಾಲ್ ನ್ಯಾಶನಲ್ ಕಾಲೇಜು ಆಟದ ಮೈದಾನದಲ್ಲಿ ರೈತ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರೈತರ ಸಮಸ್ಯೆಗಳ ಕುರಿತು ಅರವಿಂದ್ ಕೇಜ್ರಿವಾಲ್ ಮಾತನಾಡಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ್ ಅವರು ಕರೆದಿದ್ದಾರೆ. ಹೀಗಿರುವಾಗ ಇಡೀ ರಾಜ್ಯದ ಜನರು ಈ ಕಾರ್ಯಕ್ರಮಕ್ಕೆ ಬನ್ನಿ, ಇಷ್ಟು ದಿನ ನಡೆದ ರಾಜಕೀಯಕ್ಕೆ ಕೊನೆ ಹಾಡಿ. ಹೊಸ ಜನಪರ ರಾಜಕೀಯ ಶುರುಮಾಡೋಣ ಬನ್ನಿ ಎಂದು ಕತರೆ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಮುಖಂಡ ಭಾಸ್ಕರ್ ರಾವ್ ನಾನು ಕಳೆದ ಐದಾರು ದಿನಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಯಾವುದೇ ಹಗರಣದ ವಾಸನೇ ಬಾರದ ರೀತಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ನಡೆಸಿದ್ದಾರೆ. ಹೀಗಾಗಿ ಸಮಾವೇಶದಲ್ಲಿ ಎಲ್ಲರು ಭಾಗವಹಿಸಿ. ಈ ಸಂದರ್ಭದಲ್ಲಿ 82 ಸಾರ್ವಜನಿಕರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದಿದ್ದಾರೆ.
ಒಂದೊಂದು ಪೊಸ್ಟಿಂಗ್ ಕೊಂಟ್ಯಾಂತರ ರೂಪಾಯಿ ಕೇಳ್ತಾರೆ
ಎಲ್ಲಾ ಕಡೆ ಭ್ರಷ್ಟಾಚಾರವಿದೆ ಕೇವಲ ಭ್ರಷ್ಟಾಚಾರಕ್ಕೆ ಅಧಿಕಾರಗಳನ್ನ ಬ್ಲೇಮ್ ಮಾಡಿದ್ರೆ ಆಗೋದಿಲ್ಲ. ಒಂದೊಂದು ಪೊಸ್ಟಿಂಗ್ ಗೆ ಕೋಟ್ಯಾಂತರ ರೂಪಾಯಿ ಕೇಳ್ತಾರೆ, ನಾನು ಕಣ್ಣಾರೆ ನೋಡಿದ್ದೇನೆ ..ನಾನು ಪೊಲೀಸ್ ಕಮಿಷನರ್ ಆದ್ರೂ ಒಂದೇ ಒಂದು ಇನ್ಸೆಪೆಕ್ಟರ್ ಪೊಸ್ಟ್ ಹಾಕಿಸಿಕೊಳ್ಳಲು ಆಗಲಿಲ್ಲ..ಜನರ ಪರವಾಗಿ ನಾವು ಮಾತನಾಡಿದರೆ ರಾಜಕೀಯ ನಾಯಕರಿಗೆ ಕೋಪ ಬರುತ್ತದೆ. ರಾಜಕಾರಣಿಗಳು ನಮ್ಮ ನಿಮ್ಮ ಹಣದಿಂದ ಐಶಾರಾಮಿ ಕಾರು ಖರೀದಿ, ಅಪಾರ್ಟ್ಮೆಂಟ್ ಖರೀದಿ ಮಾಡುತ್ತಾರೆ ಎಂದು ಕಿಡಿಕಾರಿದರು.
ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಬೇರೆ ಮಾಡಿದ್ದಾರೆ. ಪ್ರಧಾನ ಮಂತ್ರಿಗಳ ತನಕ ಪತ್ರ ಬರೆದಿದ್ದಾರೆ. ಎಲ್ಲಾ ನಮ್ಮ ದುಡ್ಡಿನಿಂದ ಲ್ಯಾಂಡ್ ರೋವ್ ತರಹ ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ. ಮುಗ್ದ ಜನರಿಗೆ ದುಡ್ಡು ಕೊಟ್ಟು ಓಟ್ ಪಡೆದುಕೊಳ್ಳುತ್ತಿದ್ದಾರೆ. ಸ್ವಚ್ಛ ಆಡಳಿತ ಎರಡು ರಾಷ್ಟ್ರೀಯ ಪಕ್ಷಗಳಿಂದ ಕೊಡಲು ಆಗಿಲ್ಲ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಪ್ರಾಮಾಣಿಕತೆ ಕೊರತೆ ಇದೆ. ಹಣ ಕೊಟ್ಟು ರಾಜಕೀಯ ಪಕ್ಷಗಳು ಓಟು ಪಡೆದುಕೊಳ್ಳುತ್ತಿವೆ. ಬೆಂಗಳೂರು ನಗರದಲ್ಲಿ ಅಪರಾಧಿಗಳ ಜೊತೆ ರಾಜಕಾರಣಿಗಳು ಶಾಮೀಲಾಗುತ್ತಿದೆ ಎಂದು ಐಎಂಎ ಹಗರಣ, ರಾಘವೇಂದ್ರ ಬ್ಯಾಂಕ್ ಹಗರಣಗಳ ಉದಾಹರಣೆ ನೀಡಿದರು.
ಮುಂದಿನ ದಿನಗಳಲ್ಲಿ ನನ್ನ ಮೇಲೆ ಕೇಸ್, ರೇಡ್ ಗಳು ನಡೆದರೂ ಅದನ್ನು ಎದುರಿಸಲು ನಾನು ತಯಾರಾಗಿದ್ದೇನೆ. ಕನ್ನಡಿಗರ ಪರವಾಗಿ ಹೋರಾಟ ಮಾಡುಲು ಸಿದ್ದನಾಗಿದ್ದೇನೆ.. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಂದಿದ್ದೇನೆ, ಬಡವರ ಪರವಾಗಿ ಕೆಲಸ ಮಾಡಲು ಬಂದಿದ್ದೇನೆ. ರಾಜಕೀಯ ಹುದ್ದೆ ಆಕಾಂಕ್ಷೆಯಿಂದ ಬೇರೆ ಪಕ್ಷಕ್ಕೆ ಹೋಗಿಲ್ಲ. ನನಗೆ ಎಂಎಲ್ ಎ, ಸಂಸದ ಮಾಡಿ ಅಂತ ದೊಡ್ಡ ಪಕ್ಷಕ್ಕೆ ಹೋಗಲಿಲ್ಲ. ಬದಲಾಗಿ ಅಣ್ಣಾ ಹಜಾರೆ ಹೋರಾಟ, ಕೇಜ್ರೀವಾಲ್ ಆಡಳಿತ ನೋಡಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.