ಸಹಕಾರ ಸಚಿವ ಕೆ.ಎನ್. ರಾಜಣ್ಣ ರಾಜ್ಯದಲ್ಲಿ ಸೆಪ್ಟೆಂಬರ್‌ನಲ್ಲಿ ರಾಜಕೀಯ ಬದಲಾವಣೆ ಸುಳಿವು ನೀಡಿದ್ದಾರೆ. ಬಹು ಪವರ್ ಸೆಂಟರ್‌ಗಳಿಂದ ಸಿಎಂ ಸಿದ್ದರಾಮಯ್ಯನವರಿಗೆ ಜಂಜಾಟ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಾಸಕರ ಅಸಮಾಧಾನದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಜೂ.26): ರಾಜ್ಯದಲ್ಲಿ ಎರಡ್ಮೂರು ಪವರ್ ಸೆಂಟರ್‌ಗಳು ಇರುವುದರಿಂದ ಸಿಎಂ ಸಿದ್ದರಾಮಯ್ಯಗೆ ಜಂಜಾಟ ಹೆಚ್ಚಾಗಿದೆ. ಸೆಪ್ಟೆಂಬರ್ ಕಳೀಲಿ ನೋಡುವಂತ್ರಿ, ರಾಜಕೀದಲ್ಲೇ ಬದಲಾವಣೆ ಆಗಲಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಈಗ ಬದಲಾವಣೆ ಗಾಳಿ ತಣ್ಣಗೆ ಬೀಸುತ್ತಿದೆ. ಸೆಪ್ಟಂಬರ್ ಕಳೀಲಿ ನೋಡುವಂತ್ರಿ, ರಾಜಕಾರಣದಲ್ಲಿ ಭಾರೀ ಬದಲಾವಣೆ ಆಗಲಿದೆ. ಇನ್ನು ರಾಜ್ಯದಲ್ಲಿ 2013ರಲ್ಲಿ ಇದ್ದ ಹಾಗೆ ಸಿಎಂ ಸಿದ್ದರಾಮಯ್ಯ ಈ ಬಾರಿ ಇಲ್ಲ, ಅನ್ನೋ ಶಾಸಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಏನ್ ಮಾಡೋದು ಪವರ್ ಸೆಂಟರ್ ಗಳು ಜಾಸ್ತಿ ಆಗಿವೆ. ಒಂದು, ಎರಡು, ಮೂರು ಲೆಕ್ಕಕ್ಕೆ ಇಲ್ಲದಷ್ಟು ಆಗಿವೆ. 2023ರಿಂದ 2018ರವರೆಗೆ ಒಂದೇ ಪವರ್ ಸೆಂಟರ್ ಇತ್ತು. ಅವರಿಗೆ ಯಾವುದೇ ಒತ್ತಡ ಇರಲಿಲ್ಲ. ಪವರ್ ಸೆಂಟರ್ ಜಾಸ್ತಿಯಾದ ಹಾಗೆ ಜಂಜಾಟ ಹೆಚ್ಚಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಚಿವರ ಮೇಲೆ ಶಾಸಕರ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿ, ಯಾವ ಸಚಿವರು ಅನ್ನೊದನ್ನ ನಿರ್ದಿಷ್ಟವಾಗಿ ಹೇಳಲಿ. ನನ್ನ ಹೆಸರು ಹೇಳಿದ್ರಾ.? ನನ್ನ ಮೇಲೆ ಹೇಳಿದತರೆ ನಾನು ತಿದ್ದಿಕೊಳ್ಳಬಹುದು. ಮನುಷ್ಯನಲ್ಲಿ ಕೆಲವು ಲೋಪಗಳು ಇದ್ದೆ ಇರ್ತಾವೆ. ಅವುಗಳನ್ನ ತಿಳಿಸಿದರೆ ತಿದ್ದಿಕೊಳ್ಳೊದಕ್ಕೆ ಅವಕಾಶ ಇರುತ್ತದೆ. ಇಲ್ಲದಿದ್ದರೆ ಎಲ್ಲಾ ಶಾಸಕರು, ಸಚಿವರು ಎಲ್ಲವು ಸರಿ ಇದೆ ಅಂತ ಸುಮ್ಮನೆ ಇರುತ್ತಾರೆ ಎಂದರು.
ಬಿ ಆರ್ ಪಾಟೀಲ್ ಆಡಿಯೊ ವೈರಲ್ ವಿಚಾರದ ಬಗ್ಗೆ ಮಾತನಾಡಿ, ಜಮೀರ್ ಪಿಎಸ್ ಸರ್ಫರಾಜ್ ಖಾನ್ ಜೊತೆ ಬಿ.ಆರ್. ಪಾಟೀಲ್ ಮಾತನಾಡಿರುವ ನಿಮ್ಮ ಮಾದ್ಯಮಗಳಲ್ಲಿ ಪ್ರಸಾರ ಆಗಿದೆ. ಅವರಿಗೆ ಆಗಿರುವ ಅನುಭವ ಬೆಳವಣಿಗೆ ಬಗ್ಗೆ ಮಾತಾಡಿದ್ದಾರೆ. ಅವರು ಹೇಳಿರೋದ್ರಲ್ಲಿ ಸತ್ಯ ಇಲ್ಲಾ ಅಂತ ನಾನು ಹೇಳೊಕೆ ಹೋಗುವುದಿಲ್ಲ. ಅವರ ಅನುಭವದ ಆಧಾರದ ಮೇಲೆ ಅವರ ಮನಸ್ಸಿನ ಭಾವನೆಗಳನ್ನ ವ್ಯಕ್ತಪಡಿಸಿರುತ್ತಾರೆ. ಅದಕ್ಕೆ ನನ್ನ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಹೇಳಿದರು.
ಸರ್ಕಾರದ ವಿರುದ್ದ ಬಿಜೆಪಿ ಜೆಡಿಎಸ್ ಹೋರಾಟ ವಿಚಾರದ ಬಗ್ಗೆ ಮಾತನಾಡಿ, ಮೊದಲು ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನು ನೋಡಿಕೊಳ್ಳಲಿ. ಬೆಳೆಗ್ಗೆ ಎದ್ದರೆ ಅವರ ಜಗಳ ನೋಡ್ತಿದ್ದೇವೆ. ಮೊದಲು ಅವರದ್ದು ಸರಿಪಡಿಸಿಕೊಳ್ಳಲಿ. ನಮ್ಮ ಬಗ್ಗೆ ಮಾತಾಡೋದಕ್ಕೆ ಅವರಿಗೆ ಯಾವ ನೈತಿಕತೆ ಇದೆ.? ಇಲ್ಲಿ ನಮ್ಮಲ್ಲಿ ನೊಣ ಬಿದ್ದಿರಬಹುದು. ನೊಣದ ಬಗ್ಗೆ ಮಾತಾಡ್ತಾರೊ ಹೊರತು ಹೆಗ್ಗಣದ ಬಗ್ಗೆ ಮಾತಾಡೊಲ್ಲಾ ಎಂದು ಹೇಳಿ ಬಿಜೆಪಿಗೆ ತಿರುಗೇಟು ನೀಡಿದರು.
ಸಿಎಂ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡ್ತಿದ್ದಾರೆ. ಅಂದರೆ ದುಡ್ಡು ಇಲ್ಲದೆ ಇದ್ದರೆ ಚಾಲನೆ ಕೊಡೊಕೆ ಆಗುತ್ತಾ? ಎಲ್ಲರೂ ಸುಮ್ಮನೆ ಹೇಳ್ತಿದ್ದಾರೆ, ಇದ್ದರೂ ಇರಬಹುದು. ಅವರ ಬೇಡಿಕೆಗೆ ತಕ್ಕಂತೆ ಅನುದಾನ ಸಿಕ್ಕಿಲ್ಲ, ಎಂಬ ಶಾಸಕರಿಗೆ ಅಸಮಧಾನ ಇರಬಹುದು. ಗ್ಯಾರಂಟಿ ಯೋಜನೆಗಳನ್ನ ಕೊಟ್ಟಿರುವುದರಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆಯಿದೆ. ಆರ್ಥಿಕ ಲಭ್ಯತೆಗೆ ಅನುಗುಣವಾಗಿ ಯಾವುದೇ ತಾರತಮ್ಯ ಇಲ್ಲ. ಆಡಳಿತ ಪಕ್ಷ, ವಿರೋಧ ಪಕ್ಷ ಅಂತಾ ಯಾವುದೇ ತಾರತಮ್ಯ ಇಲ್ಲ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಹಣಕಾಸನ್ನು ಒದಗಿಸುತ್ತಿದ್ದೇವೆ. ಒಬ್ಬರಿಗೆ ಹೆಚ್ಚಿಗೆ ನಿರೀಕ್ಷೆ ಇರಬಹುದು, ಅದಕ್ಕೆ ತಕ್ಕಂತೆ ಆಗದೆ ಅಭಿವೃದ್ಧಿ ಇರಬಹುದು. ಆದರೆ, ಏನೂ ಅಭಿವೃದ್ಧಿ ಆಗುತ್ತಿಲ್ಲ, ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
