ನರೇಂದ್ರ ಮೋದಿ ಜಗತ್ತಿಗೆ ಬೆಂಕಿಯಂತೆ ಹಬ್ಬಿರುವ ಕೊಲ್ಲಿ ಯುದ್ದವನ್ನು ನಿಲ್ಲಿಸುವಂತೆ ಹೇಳುವ ಗಟ್ಟಿತನ ತೋರಬೇಕಿದೆ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ತೀರ್ಥಹಳ್ಳಿ (ಮಾ.23): ವಿಶ್ವಗುರು ಎಂದು ಹೇಳಿಕೊಳ್ಳುವ ಪ್ರದಾನಮಂತ್ರಿ ನರೇಂದ್ರ ಮೋದಿ ಜಗತ್ತಿಗೆ ಬೆಂಕಿಯಂತೆ ಹಬ್ಬಿರುವ ಕೊಲ್ಲಿ ಯುದ್ದವನ್ನು ನಿಲ್ಲಿಸುವಂತೆ ಹೇಳುವ ಗಟ್ಟಿತನ ತೋರಬೇಕಿದೆ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

Add Asianetnews Kannada as a Preferred SourcegooglePreferred

ಗ್ಯಾಸ್ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ತೀರ್ಥಹಳ್ಳಿ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ತಾಲೂಕು ಕಚೇರಿ ಎದುರು ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ದೇಶದಲ್ಲಿ ದಾಸ್ತಾನಿರುವ ತೈಲದ ಬೆಲೆಯನ್ನು ಏರಿಕೆ ಮಾಡಿರುವ ಪರಿಣಾಮವಾಗಿ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಸಂಕಷ್ಟಕ್ಕೀಡಾಗಿದೆ. ಪ್ರಜೆಗಳ ಹಿತವನ್ನು ಕಾಪಾಡಲು ಅಸಮರ್ಥರಾಗಿರುವ ಪ್ರದಾನಮಂತ್ರಿ ಕಚೇರಿ ವ್ಯರ್ಥ. ಕೊಲ್ಲಿ ಯುದ್ದ ನಿಲ್ಲದೆ ದೇಶದಲ್ಲಿ ಇದೇ ಸ್ಥಿತಿ ಮುಂದುವರಿದರೆ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

ಕೊಲ್ಲಿಯಲ್ಲಿ ನಡೆದಿರುವ ಯುದ್ದ ಜಗತ್ತಿಗೇ ಕಂಟಕಪ್ರಾಯವಾಗಿದೆ. ಗ್ಯಾಸ್ ಬೆಲೆ ಏರಿಕೆಯಿಂದಾಗಿ ದೇಶದಲ್ಲಿ 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಹೋಟೆಲ್ ಕ್ಯಾಂಟಿನ್ ಗಳು ಮುಚ್ಚಿದ್ದು ದುಡಿದು ತಿನ್ನುವ ವರ್ಗಗಳ ಕುಟುಂಬ ಬೀದಿಗೆ ಬರುವಂತಾಗಿದೆ. ಈ ಯುದ್ದದ ಪರಿಣಾಮವಾಗಿ ಇಡೀ ಪ್ರಪಂಚಕ್ಕೆ ಬೆಂಕಿ ಹಚ್ಚಿದಂತಾಗಿದೆ. ವಿರೋದ ಪಕ್ಷದ ಮುಖಂಡರ ಅಬಿಪ್ರಾಯಕ್ಕೆ ಮನ್ನಣೆಯನ್ನೇ ನೀಡುತ್ತಿಲ್ಲಾ. ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತರ ವಿರುದ್ದ ಹಿಂದೂ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಐಷಾರಾಮಿ ಜೀವನ ನಡೆಸುತ್ತಿರುವ ಪ್ರದಾನಿಯವರ ಷೋಕಿಗಾಗಿ ದಿನದ ವೈಯಕ್ತಿಕ ವೆಚ್ಚ 10 ಲಕ್ಷ್ಷಕ್ಕೂ ಅಧಿಕ ಹಣ ವೆಚ್ಚವಾಗುತ್ತಿದೆ ಎಂದೂ ದೂರಿದರು.

1.15 ಸಾವಿರ ಕೋಟಿ ರು. ಅನುದಾನ ಸೇರಿದಂತೆ ಕಳೆದ 8 ವರ್ಷಗಳಿಂದ ಕೇಂದ್ರದಿಂದ ರಾಜ್ಯದ ಜಿಎಸ್‍ಟಿ ಹಣ ಬಂದಿಲ್ಲಾ. ಇಂತಹಾ ಸ್ಥಿತಿಯಲ್ಲಿ ಸಿದ್ದರಾಮಯ್ಯನವರನ್ನು ಹೊರತು ಪಡಿಸಿ ಬೇರೆ ಮುಖ್ಯಮಂತ್ರಿಗಳಿಂದ ಅಧಿಕಾರ ನಡೆಸಲು ಅಸಾಧ್ಯ ಎಂದರಲ್ಲದೇ ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ರಾಜ್ಯ ಸರ್ಕಾರದ ಮನವಿಗೂ ಸ್ಪಂದಿಸದೇ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿರುವ ಕೇಂದ್ರ ಸರ್ಕಾರದ ಜನವಿರೋದಿ ನೀತಿಯ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ತುಟ್ಟಿ ಬಿಚ್ಚದಿರುವುದು ಖಂಡನೀಯ ಎಂದರು.

ದಿವಾಳಿತನ ಪ್ರದರ್ಶನ

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ಮಾತನಾಡಿ, ಬಿಜೆಪಿ ನೇತೃತ್ವದ ಆಡಳಿತದಲ್ಲಿ ಬಡತನ ತಾಂಡವವಾಡುತ್ತಿದ್ದು ಮಧ್ಯಪ್ರಾಚ್ಯದ ಯುದ್ದದ ನೆಪದಲ್ಲಿ ಗ್ಯಾಸ್ ಬೆಲೆಯನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರ ತನ್ನ ದಿವಾಳಿತನವನ್ನು ಪ್ರದರ್ಶನ ಮಾಡಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ 55 ಲಕ್ಷ ಕೋಟಿ ರು. ಸಾಲ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತದಲ್ಲಿ ನಾಲ್ಕು ಪಟ್ಟು ಏರಿಕೆಯಾಗಿದ್ದು ಜನರನ್ನು ಸಾಲದ ಶೂಲಕ್ಕೆ ತಳ್ಳಿದೆ ಎಂದರು.

ಜನವಿರೋದಿ ಕೇಂದ್ರ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ತೀರ್ಥಹಳ್ಳಿ ಕಾಂಗ್ರೆಸ್ ಮಹಿಳಾ ಘಟಕದಿಂದ ಮನವಿ ಸಲ್ಲಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಮೈಥಿಲಿ ಸತೀಶ್, ಪಕ್ಷದ ಮುಖಂಡರುಗಳಾದ ಕೆಸ್ತೂರು ಮಂಜುನಾಥ್,ಮುಡುಬಾ ರಾಘವೇಂದ್ರ, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್,ಆದರ್ಶ ಹುಂಚದಕಟ್ಟೆ, ಪೂರ್ಣೇಶ್ ಕೆಳಕೆರೆ,ಅಶ್ವಲ್ ಗೌಡ, ಅಮರನಾಥ ಶೆಟ್ಟಿ, ನಾಗರಾಜ ಪೂಜಾರಿ,ಅನ್ನಪೂರ್ಣ ಮೋಹನ್, ಹಸಿರುಮನೆ ಮಹಾಬಲೇಶ್,ಬಾಳೇಹಳ್ಳಿ ಪ್ರಭಾಕರ್ ಮುಂತಾದವರು ಇದ್ದರು.