ಗೌಡ, ಕೃಷ್ಣರನ್ನು ಆಹ್ವಾನಿಸಿಲ್ಲ:ಡಿ.ಕೆ.ಶಿವಕುಮಾರ್ ಗರಂ
ಕೆಂಪೇಗೌಡರು, ಕೆಂಗಲ್ ಹನುಮಂತಯ್ಯ, ಎಸ್.ಎಂ. ಕೃಷ್ಣ, ಎಚ್.ಡಿ. ದೇವೇಗೌಡರು ರಾಜ್ಯದ ಗುರುತು ಹೆಚ್ಚಿಸಿದವರು. ಅಂತಹ ಕೃಷ್ಣ, ದೇವೇಗೌಡರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ.
ಬೆಂಗಳೂರು (ನ.13): ಕೆಂಪೇಗೌಡರು, ಕೆಂಗಲ್ ಹನುಮಂತಯ್ಯ, ಎಸ್.ಎಂ. ಕೃಷ್ಣ, ಎಚ್.ಡಿ. ದೇವೇಗೌಡರು ರಾಜ್ಯದ ಗುರುತು ಹೆಚ್ಚಿಸಿದವರು. ಅಂತಹ ಕೃಷ್ಣ, ದೇವೇಗೌಡರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಬಿಜೆಪಿಯವರು ಚುನಾವಣೆ ಪ್ರಚಾರ, ಮತ ಬ್ಯಾಂಕ್ ರಾಜಕಾರಣ ಹಾಗೂ ಕಮಿಷನ್ ಆಸೆಗಾಗಿ ಮಾತ್ರವೇ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಬಳಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಬಿಜೆಪಿಯವರಿಗೆ ಕೇವಲ ಚುನಾವಣೆ ಪ್ರಚಾರ ಹಾಗೂ ಮತ ಬ್ಯಾಂಕ್ ಪಾಲಿಟಿಕ್ಸ್ ಮಾತ್ರವೇ ಬೇಕು. ಅದಕ್ಕಾಗಿ ಶಿಷ್ಟಾಚಾರ ಉಲ್ಲಂಘಿಸಿ ಈ ರೀತಿ ನಡೆದುಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಿದ್ದೇ ನಾವು. ವಿಮಾನ ನಿಲ್ದಾಣದ ನಿರ್ಮಾಣ ಸಮಯದಲ್ಲಿ ನಾನು ನಗರಾಭಿವೃದ್ಧಿ ಮತ್ತು ಜಿಲ್ಲಾ ಸಚಿವನಾಗಿದ್ದೆ. ಖಾಸಗಿ, ಸರ್ಕಾರಿ ಜಾಗ ಸೇರಿ 4,500 ಎಕರೆ ಜಮೀನು ಒದಗಿಸಿದ್ದೆವು. ಪ್ರತಿಮೆ ಶಂಕುಸ್ಥಾಪನೆಗೆ ಯಡಿಯೂರಪ್ಪ ನನಗೆ ಆಹ್ವಾನ ನೀಡಿದ್ದರು. ಆದರೆ, ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರಲಿಲ್ಲ ಎಂದು ಹೇಳಿದರು.
ಪ್ರತಿಮೆಗೆ ಸರ್ಕಾರದ ಹಣ ಬೇಡ ಎಂದು ಮೊದಲೇ ಹೇಳಿದ್ದೆ: ಡಿಕೆಶಿ
ಕಮಿಷನ್ ಹಣಕ್ಕಾಗಿ ಸರ್ಕಾರಿ ಹಣ ಹಾಕಿದ್ದೀರಾ?: ನನಗೆ ಆಹ್ವಾನ ನೀಡಬೇಕು ಎಂದು ನಾನು ಹೇಳಲ್ಲ, ಅದರ ಬಯಕೆಯೂ ನನಗಿಲ್ಲ. ಆದರೆ ಕೃಷ್ಣ, ದೇವೇಗೌಡರಿಗೆ ಆಹ್ವಾನ ನೀಡದಿರುವುದು ಸರಿಯಲ್ಲ. ಇನ್ನು ಪ್ರತಿಮೆಗೆ ಸರ್ಕಾರದಿಂದ ಹಣ ವೆಚ್ಚ ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿಗಳಿಗೆ ಹೇಳಿದ್ದರೆ ಅವರೇ ಏರ್‌ಪೋರ್ಚ್ ಹಣದಲ್ಲೇ ಪ್ರತಿಮೆ ನಿರ್ಮಾಣ ಮಾಡಿಸುತ್ತಿದ್ದರು. ನೀವು ಕಮಿಷನ್ ಪಡೆಯಲು ಸರ್ಕಾರಿ ಹಣ ಹಾಕಿದ್ದೀರಾ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಡಬಲ್ ಎಂಜಿನ್ ಅಲ್ಲ, ಟ್ರಬಲ್ ಎಂಜಿನ್: ಪ್ರಧಾನಿಗಳಿಗೆ ಹಲವು ಪ್ರಶ್ನೆ ಕೇಳಿ ಉತ್ತರ ನಿರೀಕ್ಷಿಸಿದ್ದೆವು. ಆದರೆ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸದೇ ಕೇವಲ ಪ್ರಮುಖ ನಾಯಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋಗಿದ್ದಾರೆ. ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಟ್ರಬಲ್ ಎಂಜಿನ್ ಸರ್ಕಾರ ಎಂದು ಟೀಕಿಸಿದರು.
ಸರ್ಕಾರಕ್ಕೇ ಶಿಷ್ಟಾಚಾರವಿಲ್ಲ: ಶಿಷ್ಟಾಚಾರ ಪಾಲನೆ ಬಗ್ಗೆ ಮಾತನಾಡಿದ ಅವರು, ಈ ಸರ್ಕಾರಕ್ಕೇ ಶಿಷ್ಟಾಚಾರವಿಲ್ಲ. ಈ ಸರ್ಕಾರ ಬರುವ ಮುನ್ನ ಅವರು ಕೊಟ್ಟಭರವಸೆಯಲ್ಲಿ ಶೇ. 90ರಷ್ಟುಭರವಸೆ ಈಡೇರಿಸಿಲ್ಲ. ಮೋದಿ ಅವರು ನಮ್ಮ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದಿದ್ದರು. ಈಗ ಅವರ ಸರ್ಕಾರದ ಬಗ್ಗೆ ಗುತ್ತಿಗೆದಾರರು 40% ಕಮಿಷನ್ ಸರ್ಕಾರ ಎಂದು ಪತ್ರ ಬರೆದಿದ್ದಾರೆ. ಇದಕ್ಕೆ ಅವರು ಉತ್ತರ ನೀಡುತ್ತಿಲ್ಲ ಎಂದರು.
ಸತೀಶ್ ಜಾರಕಿಹೊಳಿ ಬಗ್ಗೆ ಬಿಜೆಪಿ ರಾಜಕೀಯ: ಡಿ.ಕೆ.ಶಿವಕುಮಾರ್
ಎಲ್ಲಾ ಟೆಂಡರ್ ಪುನರ್‌ಪರಿಶೀಲನೆ: ಪ್ರಧಾನಮಂತ್ರಿ ಹೋದ ಸ್ಥಳದಲ್ಲಿ ಬಿಟ್ಟರೆ ಬೇರೆಡೆ ಗುಂಡಿಯನ್ನೂ ಮುಚ್ಚಿಲ್ಲ. ಇವರು ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳುತ್ತಾರೆ. ಅದು ಕೇವಲ ಕಾಗದದ ಮೇಲೆ ಮಾತ್ರ ಉಳಿಯಲಿದೆ. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ, ಈ ಸರ್ಕಾರ ಕರೆದಿರುವ ಎಲ್ಲ ಟೆಂಡರ್ ಅನ್ನು ನಾವು ಪುನರ್ ಪರಿಶೀಲನೆ ಮಾಡಲಿದ್ದೇವೆ, ಎಲ್ಲ ಒಪ್ಪಂದಗಳನ್ನು ಮರು ಪರಿಶೀಲಿಸುತ್ತೇವೆ ಎಂದು ಹೇಳಿದರು.