ಕೇಜ್ರಿವಾಲ್ ಪರ ವಕಾಲತ್ತು ವಹಿಸಬೇಡಿ; ವಕೀಲರಲ್ಲಿ ಕಾಂಗ್ರೆಸ್ ನಾಯಕ ಮಾಕೇನ್ ಮನವಿ!
ಭ್ರಷ್ಟಾಚಾರ ಸೇರಿದಂತೆ ಹಲವು ಗಂಭೀರ ಆರೋಪ ಹೊತ್ತಿರುವ ಕೇಜ್ರಿವಾಲ್ ಹಾಗೂ ಸಹಚರರ ಮೇಲೆ ಯಾವುದೇ ಅನುಕಂಪ ತೋರಿಸಬಾರದು. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಹೇಳಿದ್ದಾರೆ.
ನವದೆಹಲಿ(ಏ.16): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸಿಬಿಐ ವಿಚಾರಣೆ ಬಿಸಿ ತಟ್ಟಿದೆ. ದೆಹಲಿ ಅಬಕಾರಿ ನೀತಿ ಹಗರಣ ತನಿಖೆ ಚುರುಕುಗೊಳಿಸಿರುವ ಸಿಬಿಐ, ಇಂದು ಅರವಿಂದ್ ಕೇಜ್ರಿವಾಲ್ ವಿಚಾರಣೆ ನಡೆಸಿದೆ. ಇತ್ತ ಆಮ್ ಆದ್ಮಿ ಪಾರ್ಟಿ ಭಾರಿ ಪ್ರತಿಭಟನೆ ನಡೆಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್, ಆಪ್ ಹಾಗೂ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ಗಂಭೀರ ಆರೋಪ ಹೊತ್ತಿರುವ ಅರವಿಂದ್ ಕೇಜ್ರಿವಾಲ್ ಮೇಲೆ ಅನುಕಂಪ, ಸಹಾನುಭೂತಿ ತೋರಿಸುವ ಅಗತ್ಯವಿಲ್ಲ. ಈ ಹಗರಣದ ಸೂಕ್ತ ತನಿಖೆಯಾಗಬೇಕು. ಅಬಕಾರಿ ನೀತಿ ಹಗರಣ ಸೇರಿದಂತೆ ಇತರ ಹಗರಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅಜಯ್ ಮಾಕೇನ್ ಆಗ್ರಹಿಸಿದ್ದಾರೆ.
ದೆಹಲಿ ಆಮ್ ಆದ್ಮಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಸಂಪೂರ್ಣ ತನಿಖೆಯಾಗಬೇಕು. ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕು. ಇದು ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ನಾಯಕರಿಗೆ ಅನ್ವಯ. ಕೇಜ್ರಿವಾಲ್ ಅಕ್ರಮದ ಮೂಲಕ ಪಡೆದ ಹಣವನ್ನು ಕಾಂಗ್ರೆಸ್ ವಿರುದ್ಧ ಬಳಸಿದ್ದಾರೆ. ಪಂಜಾಬ್, ಗೋವಾ, ಗುಜರಾತ್, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಮ್ ಆದ್ಮಿ ಪಾರ್ಟಿ ಇದೇ ಭ್ರಷ್ಟಾಚಾರದ ಹಣ ಬಳಿಸಿದೆ ಎಂದು ಅಜಯ್ ಮಾಕೇನ್ ಹೇಳಿದ್ದಾರೆ.
ಸಿಬಿಐ ವಿಚಾರಣೆ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್‌ಗೆ ಬಂಧನ ಭೀತಿ, ತುರ್ತು ಸಭೆ ನಡೆಸಿದ ಆಪ್!
ಭ್ರಷ್ಟಾಚಾರ ವಿರೋಧಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಜೊತೆ ಸೇರಿಕೊಂಡು ಮುನ್ನಲೆಗೆ ಬಂದ ಅರವಿಂದ್ ಕೇಜ್ರಿವಾಲ್, 2013ರಲ್ಲಿ ಆಮ್ ಆದ್ಮಿ ಪಾರ್ಟಿ ಸ್ಥಾಪಿಸಿದರು. ಈ ವೇಳೆ ಅರವಿಂದ್ ಕೇಜ್ರಿವಾಲ್ ಲೋಕಾಪಾಲ ಮಸೂದೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಅರವಿಂದ್ ಕೇಜ್ರಿವಾಲ್, 40 ದಿನದಲ್ಲಿ ಸರ್ಕಾರ ವಿಸರ್ಜಿಸಿದರು.
2015ರಲ್ಲಿ ಮೂಲ ಲೋಕಾಪಾಲ ಮಸೂದೆಯನ್ನು ಬದಲಿಸಿ ದುರ್ಬಲ ಮಸೂದೆಯನ್ನು ಮಂಡಿಸಿದರು. 2014ರಲ್ಲಿ ರಚನೆಯಾದ ಕರಡು ಮಸೂದೆಗೂ ಕೇಜ್ರಿವಾಲ್ ಮಂಡಿಸಿದ ಮಸೂದೆಗೂ ಅಜಗಜಾಂತರ ವ್ಯತ್ಯಾಸವಿದೆ. ಇದೀಗ ಸಿಬಿಐ, ಇಡಿ ಕೇಜ್ರಿವಾಲ್‌ಗೆ ಸಮನ್ಸ್ ನೀಡಿದೆ. ವಿಚಾರಣೆಯನ್ನು ನಡೆಸುತ್ತಿದೆ. ಆದರೆ ಆಪ್ ಸುಳ್ಳು ಹೇಳಿಕೆ ನೀಡುತ್ತಾ, ಪ್ರತಿಭಟನೆ ಮಾಡುತ್ತಿದೆ. ಈ ಮೂಲಕ ಅನುಕಂಪ ಅಲೆ ಎಬ್ಬಿಸಲು ಪ್ರಯತ್ನಿಸುತ್ತಿದೆ. ಕೇಜ್ರಿವಾಲ್ ಮೇಲೆ ಯಾವುದೇ ಅನುಕಂಪ ತೋರುವ ಅಗತ್ಯವಿಲ್ಲ. ಕೇಜ್ರಿವಾಲ್ ಕುತಂತ್ರದಿಂದ ಕಾಂಗ್ರೆಸ್ ಮತಗಳು ವಿಭಜನೆಯಾಗುತ್ತಿದೆ.ಇದರಿಂದ ಬಿಜೆಪಿಗೆ ನೆರವಾಗಲಿದೆ. ಹೀಗಾಗಿ ಕೇಜ್ರಿವಾಲ್ ಪರ ವಕಾಲತ್ತು ವಹಿಸದಂತೆ ಸಮರ್ಥ ವಕೀಲರಲ್ಲಿ ಮನವಿ ಮಾಡುತ್ತೇನೆ ಎಂದು ಅಜಯ್ ಮಾಕೇನ್ ಆಗ್ರಹಿಸಿದ್ದಾರೆ.
ಅಜಯ್ ಮಾಕೇನ್ ತೀವ್ರ ವಾಗ್ದಾಳಿ ನಡೆಸಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇರವಾಗಿ ಕೇಜ್ರಿವಾಲ್‌ಗೆ ಕರೆ ಮಾಡಿ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಹೋರಾಡುವ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಭಯ ನಾಯಕರು ಬಿಜೆಪಿ ವಿರುದ್ಧ ತಮ್ಮ ನಿಲುವನ್ನು ಗಟ್ಟಿಮಾಡಿಕೊಳ್ಳುವ ಕುರಿತು ಚರ್ಚಿಸಿದ್ದಾರೆ. ಅಲ್ಲದೇ ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳೆಲ್ಲ ಒಟ್ಟಾಗಿ ಬಿಜೆಪಿಯನ್ನು ಸೋಲಿಸುವ ಮಾತುಕತೆ ನಡೆಸಿದ್ದಾರೆ.