ಬೆಂಗಳೂರು[ಜ.28]: ಕಾಂಗ್ರೆಸ್‌ನಲ್ಲಿ ಮಹಾನ್ ನಾಯಕರು ಎಂದುಕೊಂಡಿರುವವರು ದೆಹಲಿಗೆ ಹೋಗಿ ಹೈಕಮಾಂಡ್‌ಗೇ ಷರತ್ತು ಹಾಕಿ ಬರುತ್ತಿದ್ದಾರೆ. ವಾಸ್ತವವಾಗಿ ಪಕ್ಷವನ್ನು ಬೆನ್ನಿಗಿಟ್ಟುಕೊಂಡು ಹೋದರೆ ಮಾತ್ರ ಇವರೆಲ್ಲರೂ ನಾಯಕರು. ಈ ಮಹಾನ್ ನಾಯಕರು ಕಾಂಗ್ರೆಸ್ ಬಿಟ್ಟು ಹೋಗಲಿ ನೋಡೋಣ. ಆಗ ಇವರ ಸಾಮರ್ಥ್ಯ ಬಯಲಾಗುತ್ತದೆ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹಿರಿಯ ನಾಯಕರ ಮೇಲೆ ಹರಿಹಾಯ್ದಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ, ಶಾಸಕಾಂಗ ಪಕ್ಷದ ಸ್ಥಾನಗಳ ಬಗ್ಗೆ ಉಂಟಾಗಿರುವ ಗೊಂದಲಗಳಿಂದ ಕಾಂಗ್ರೆಸ್ ಪಕ್ಷ ನಿಂತ ನೀರಿನಂತಾಗಿಬಿಟ್ಟಿದೆ. ರಾಜ್ಯ ನಾಯಕರನ್ನು ನೋಡಿದರೆ ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎನ್ನುತ್ತಾರೆ. ಮತ್ತೊಂದೆಡೆ ತಾವೇ ಹೋಗಿ ಹೈಕಮಾಂಡ್‌ಗೆ ಇಂಥಹವರೇ ಅಧ್ಯಕ್ಷರಾಗಬೇಕು, ಇಂತಹವರೇ ಕಾರ್ಯಾಧ್ಯಕ್ಷರಾಗಬೇಕು ಎಂದು ಷರತ್ತು ವಿಧಿಸುತ್ತಾರೆ ಎಂದರು. ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಹಿರಿಯ ನಾಯಕರು. ಅವರೇ ನಮ್ಮ ನಾಯಕತ್ವ ವಹಿಸಿಕೊಳ್ಳಬೇಕು ಎಂದರು.

ಸ್ಪೀಕರ್‌ಗೆ ಅನರ್ಹತೆ ಅಧಿಕಾರ ಬೇಡ

ಶಾಸಕರನ್ನು ಅನರ್ಹಗೊಳಿಸುವ ಅಧಿಕಾರವನ್ನು ವಿಧಾನಸಭೆ ಸಭಾಧ್ಯಕ್ಷರಿಗೆ ನೀಡುವುದು ಬೇಡ. ವಿಧಾನಸಭೆ ಸ್ಪೀಕರ್ ಕೂಡ ಒಂದು ಪಕ್ಷದ ಸದಸ್ಯರಾಗಿರುವುದರಿಂದ ಅವರಿಗೆ ಆಯಾ ಪಕ್ಷದ ಬಗ್ಗೆ ಒಲವಿರುತ್ತದೆ. ಹೀಗಾಗಿ ಸೂಕ್ತ ನ್ಯಾಯ ಕಲ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ವಿಧಾನಸಭೆ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದ್ದಾರೆ.