ಮೃಗಾಲಯ ಮತ್ತು ಆನೆ ಶಿಬಿರಗಳಲ್ಲಿ ವನ್ಯಜೀವಿ ವೈದ್ಯರ ಕೊರತೆ ನೀಗಿಸಲು, ಪ್ರತ್ಯೇಕ ಕೇಡರ್ ಸೃಷ್ಟಿಸಿ 15 ವನ್ಯಜೀವಿ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರು (ನ.19): ಮೃಗಾಲಯ ಮತ್ತು ಆನೆ ಶಿಬಿರಗಳಲ್ಲಿ ವನ್ಯಜೀವಿ ವೈದ್ಯರ ಕೊರತೆ ನೀಗಿಸಲು, ಪ್ರತ್ಯೇಕ ಕೇಡರ್ ಸೃಷ್ಟಿಸಿ 15 ವನ್ಯಜೀವಿ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಬೆಳಗಾವಿ ಕಿರು ಮೃಗಾಲಯದಲ್ಲಿ 31 ಕೃಷ್ಣ ಮೃಗಗಳ ಅಸಹಜ ಸಾವಿನ ಹಿನ್ನೆಲೆಯಲ್ಲಿ ಒಂಬತ್ತು ಮೃಗಾಲಯಗಳ ಮುಖ್ಯಸ್ಥರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಖಂಡ್ರೆ, ಮೃಗಾಲಯ ಮತ್ತು ಆನೆ ಶಿಬಿರಗಳಲ್ಲಿ ವನ್ಯಜೀವಿ ವೈದ್ಯರ ಕೊರತೆ ಇರುವ ಬಗ್ಗೆ ಸಿಎಂಗೆ ತಿಳಿಸಲಾಗಿದೆ.
ಅವರು ವನ್ಯಜೀವಿ ವೈದ್ಯರ ನೇಮಕಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಅದರಂತೆ ಪ್ರತ್ಯೇಕ ಕೇಡರ್ ಸೃಷ್ಟಿಸಿ 15 ವನ್ಯಜೀವಿ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು ಎಂದರು. ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿಗೆ ಗಳಲೆ ರೋಗ ಅಥವಾ ಬ್ಯಾಕ್ಟೀರಿಯಾ ಸೋಂಕು ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದರು. ಸಭೆಯಲ್ಲಿ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ ಇದ್ದರು.
ಬ್ಯಾಕ್ಟೀರಿಯಲ್ ವೈರಸ್ಸಿಂದ ಕೃಷ್ಣಮೃಗಗಳ ಸಾವು
ಬೆಳಗಾವಿ ಮೃಗಾಲಯದಲ್ಲಿ ಬ್ಯಾಕ್ಟೀರಿಯಲ್ ವೈರಸ್ ಸೋಂಕಿನಿಂದ ಕೃಷ್ಣಮೃಗಗಳ ಸಾವಾಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ಬೀದರ್‌ನಲ್ಲಿ ಮಾತನಾಡಿದ ಅವರು, ಇತರ ಮೃಗಾಲಯಗಳಿಗೆ ಈ ರೋಗ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಮ್ಮ ಅಧಿಕಾರಿಗಳು ಮತ್ತು ಪಶುವೈದ್ಯರು ಪ್ರಾಣಿಗಳಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಈಗಾಗಲೇ ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಿದ್ದೇನೆ. ಬನ್ನೇರುಘಟ್ಟ ಉದ್ಯಾನವನದಿಂದ ತಜ್ಞರನ್ನು ಅಲ್ಲಿಗೆ ಕಳಿಸಿದ್ದೇವೆ.
ಅವರು ಅಲ್ಲೇ ಮೊಕ್ಕಾಂ ಹೂಡಿದ್ದಾರೆ. ಇದರ ಬಗ್ಗೆ ಯಾರು ತಜ್ಞರಿದ್ದಾರೆ ಅವರ ಜೊತೆಗೂ ನಿರಂತರ ಸಂಪರ್ಕ ಮಾಡುತ್ತಿದ್ದೇನೆ. ಅಗತ್ಯ ಇರುವ ಎಲ್ಲಾ ರೀತಿಯ ಚಿಕಿತ್ಸೆ ಕೊಟ್ಟು ಕೃಷ್ಣಮೃಗಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆದೇಶ ಕೊಟ್ಟಿದ್ದೇವೆ ಎಂದರು. ಇದು ಒಂದು ಸಾಂಕ್ರಾಮಿಕ ರೋಗ ಇದ್ದಂತೆ. ಇಂತಹ ಸಾಂಕ್ರಾಮಿಕ ರೋಗ ಕಾಲ, ಕಾಲಕ್ಕೆ ಬರುತ್ತದೆ. ಇನ್ನೂ ಹೆಚ್ಚಿನ ಜಾಗೃತಿಯಿಂದ ಇರುವ ಅವಶ್ಯಕತೆ ಇದೆ. ಇಲಾಖೆಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ಕೊಡಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.


