ಬೆಂಗಳೂರು (ನ.19):  ಪ್ರಸಕ್ತ ಸಾಲಿನ ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ಡಿಸೆಂಬರ್‌ 7ರಿಂದ 15ರವರೆಗೆ ಬೆಂಗಳೂರಿನಲ್ಲೇ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯ ಬೇಕಾಗಿದ್ದ ಚಳಿಗಾಲದ ಅಧಿವೇಶನ ಈ ಬಾರಿಯೂ ಬೆಂಗಳೂರಿನ ವಿಧಾನಸೌಧಕ್ಕೆ ಸ್ಥಳಾಂತರಗೊಂಡಿದೆ. ಸುವರ್ಣ ಸೌಧ ನಿರ್ಮಾಣದ ನಂತರ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆಯೋಜಿಸುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿತ್ತು. 2019ರಲ್ಲಿ ಬೆಳಗಾವಿ ತೀವ್ರವಾಗಿ ಪ್ರವಾಹಕ್ಕೆ ಒಳಗಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲಾಗಿತ್ತು. ಈಗ ಕೊರೋನಾ ಹಿನ್ನೆಲೆಯಲ್ಲಿ ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸಲು ಸರ್ಕಾರ ತೀರ್ಮಾನಿಸಿದೆ. ತನ್ಮೂಲಕ ಸತತ ಎರಡನೇ ವರ್ಷವೂ ಬೆಳಗಾವಿಗೆ ಚಳಿಗಾಲದ ಅಧಿವೇಶನ ಕೈ ತಪ್ಪಿದಂತಾಗಿದೆ.

ಅಧಿವೇಶನದಲ್ಲಿ ಬಯಲಾದ ವಿಪಕ್ಷಗಳ ಬಣ್ಣ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯು 15 ನಿಮಿಷದಲ್ಲೇ ಮುಗಿದಿದ್ದು, ಚಳಿಗಾಲದ ಅಧಿವೇಶನದ ದಿನಾಂಕ ಹಾಗೂ ಸ್ಥಳ ನಿಗದಿ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಡಿಸೆಂಬರ್‌ 7ರಿಂದ 15ರವರೆಗೆ ಬೆಂಗಳೂರಿನಲ್ಲೇ ಚಳಿಗಾಲದ ಅಧಿವೇಶನ ನಡೆಯಲಿದೆ. ಕಾರಣಾಂತರಗಳಿಂದ ಬೆಳಗಾವಿ ಬದಲಿಗೆ ಬೆಂಗಳೂರಿನಲ್ಲೇ ಚಳಿಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಅಧಿವೇಶನ ವಂಚಿತ ಬೆಳಗಾವಿ: 2019ರಲ್ಲಿ ಬೆಳಗಾವಿ ಜಿಲ್ಲೆಯು ತೀವ್ರ ಪ್ರವಾಹದಿಂದ ತತ್ತರಿಸಿದ್ದರಿಂದ 2019ರ ಡಿಸೆಂಬರ್‌ನಲ್ಲಿ ಸುವರ್ಣ ಸೌಧದಲ್ಲಿ ನಡೆಯಬೇಕಿದ್ದ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಕೇಂದ್ರ ಸರ್ಕಾರ ನೆರೆ ಪರಿಹಾರ ಘೋಷಿಸದಿರುವುದರಿಂದ ಬೆಳಗಾವಿ ಜನರ ಆಕ್ರೋಶಕ್ಕೆ ಗುರಿಯಾಗಬಹುದು. ಜೊತೆಗೆ ಪರಿಹಾರ ಕಾರ್ಯದಲ್ಲಿ ನಿರತರಾಗಿರುವ ಆಡಳಿತ ಯಂತ್ರ ಅಧಿವೇಶನದ ಸಿದ್ಧತೆಯಲ್ಲಿ ತೊಡಗಿಸಿಕೊಂಡರೆ ಪರಿಹಾರ ಕಾಮಗಾರಿ ಸ್ಥಗಿತಗೊಳ್ಳುತ್ತದೆ ಎಂಬ ಕಾರಣಕ್ಕಾಗಿ ಬೆಳಗಾವಿಯ ಚಳಿಗಾಲದ ಅಧಿವೇಶನ ರದ್ದುಪಡಿಸಿ ಬೆಂಗಳೂರಿನಲ್ಲಿ ನಡೆಸಲಾಗಿತ್ತು.