ದೆಹಲಿಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ವೈದ್ಯರೇ ಭಾಗಿಯಾಗಿರುವುದು ಆತಂಕಕಾರಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಿವಮೊಗ್ಗ (ನ.13): ದೆಹಲಿಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ವೈದ್ಯರೇ ಭಾಗಿಯಾಗಿರುವುದು ಆತಂಕಕಾರಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ವ್ಯವಸ್ಥಿತ ಪಿತೂರಿಯಿಂದ ಬಾಂಬ್ ಸ್ಫೋಟಿಸಲಾಗಿದೆ. ಇದಕ್ಕೆ ಕಾರಣವಾದ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಲಾಗಿದೆ ಎಂದರು. ದೆಹಲಿ ಸ್ಫೋಟದಲ್ಲಿ ಒಂದು ಸಮುದಾಯಕ್ಕೆ ಸೇರಿದ ವೈದ್ಯರು ಭಾಗಿಯಾಗಿರುವುದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಸ್ವಲ್ಪ ಯಾಮಾರಿದ್ದರೆ, ಮೈಮರೆತ್ತಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂದು ಜಗತ್ತಿಗೆ ತಿಳಿದಿದೆ.

ದೊಡ್ಡ ಅನಾಹುತ ತಡೆಯುವಲ್ಲಿ ಸಫಲರಾಗಿದ್ದೇವೆ. ಈ ಘಟನೆಯಲ್ಲಿ ಪಾಲ್ಗೊಂಡವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಸಾಧನೆಯ ಫಲಿತಾಂಶ ಎಂದು ಹೇಳಿದರು. ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಪುರುಷರು, ಮಹಿಳೆಯರು ವೈದ್ಯರು ಎಂಬುದು ಆತಂಕಕಾರಿ. ಸಾಕಷ್ಟು ಅನುಭವಿ ವೈದ್ಯರೇ ಈ ಪಿತೂರಿನಲ್ಲಿ ಪಾಲ್ಗೊಂಡಿರುವುದನ್ನು ನಾನು ಖಂಡಿಸುತ್ತೇನೆ. ಮುಂದಿನ ತನಿಖೆ ಬಳಿಕ ಇನ್ನೂ ಹೆಚ್ಚು ಸಂಗತಿಗಳು ಹೊರಬೀಳಲಿದೆ ಎಂದರು.

ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಿದೆ

ಬಿಹಾರ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ನಿರೀಕ್ಷೆ ಮೀರಿ ಬಿಹಾರ ಚುನಾವಣೆಯಲ್ಲಿ ಬೆಂಬಲ ವ್ಯಕ್ತವಾಗಿದೆ. ಮೋದಿ ಹಾಗೂ ಅಮಿತ್ ಶಾ ಪರಿಶ್ರಮದಿಂದ ಚುನಾವಣೆಯಲ್ಲಿ ಈಗಾಗಲೇ ಗೆದ್ದಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತಾಗಿದೆ. ಎಲ್ಲಾ ಸಮೀಕ್ಷೆಗಳು ನಮ್ಮ ಪರವಾಗಿಯೇ ಬಂದಿವೆ. ಅದನ್ನು ಬಿಟ್ಟು ಬೇರೆ ಏನು ಹೇಳಲಿ. ಬಿಹಾರದ ಚುನಾವಣೆಯ ಫಲಿತಾಂಶದ ಬಳಿಕ ಎಲ್ಲ ತಿಳಿದು ಬರುತ್ತದೆ ಎಂದರು.

ನವೆಂಬರ್ ಕ್ರಾಂತಿಯ ಬಗ್ಗೆ ನಾನು ಹಗುರವಾಗಿ ಮಾತನಾಡುವುದಿಲ್ಲ. ಆದರೆ, ಕಾದು ನೋಡೋಣ. ಬಿಜೆಪಿಯಲ್ಲಿ ಯಾವುದೇ ಕ್ರಾಂತಿಯಾಗಲ್ಲ ವಿಜಯೇಂದ್ರರವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಕಾರ್ಯಕರ್ತರೂ ಅವರೇ ಮುಂದುವರಿಯಬೇಕೆಂದು ಆಶಿಸಿದ್ದಾರೆ. ವಿಜಯೇಂದ್ರ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.