ಭದ್ರಾವತಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ಹೋದಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣ ಸಂಬಂಧ ಮೂವರು ಆರೋಪಿಗಳ ಬಂಧಿಸಲಾಗಿದೆ. ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ರವಿ (38) ,ಹಾಸನ ಜಿಲ್ಲೆಯ ಅರಕಲಗೋಡಿನ ವರುಣ್ (34), ಸುರೇಂದ್ರ ಗೌಡ ಕ್ಯಾಂಪ್ ನ ಅಜಯ್ (28) ಎಂಬುವರ ಬಂಧನವಾಗಿದೆ.
Karnataka Politics Live: ಮಹಿಳಾ ಅಧಿಕಾರಿ ಜ್ಯೋತಿ ಮೇಲೆ ಹಲ್ಲೆ ಪ್ರಕರಣ, ಮೂವರು ಆರೋಪಿಗಳ ಬಂಧನ

ಬೆಂಗಳೂರು: ಭಿನ್ನರ ಗುಂಪಿನ ನಾಯಕ ಎಂದೇ ಬಿಂಬಿತವಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷ ದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಜತೆಗೆ 3 ದಿನಗಳೊಳಗಾಗಿ ಲಿಖಿತ ವಿವರಣೆ ನೀಡುವಂತೆ ಗಡುವನ್ನೂ ವಿಧಿಸಿದೆ. ಇತ್ತ ನೋಟಿಸ್ಗೂ ಮೊದಲೇ ಶಾಸಕ ಯತ್ನಾಳ್, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದರು. ಇದೇ ವೇಳೆ ಯಾವುದೇ ಸಂಧಾನಕ್ಕೆ ಒಪ್ಪಿಕೊಳ್ಳಲ್ಲಎಂಬ ಮಾತನ್ನು ಹೇಳಿದ್ದರು. ಇಂದು ಶೋಕಾಸ್ ನೋಟಿಸ್ಗೆ ಯತ್ನಾಳ್ ಪ್ರತಿಕ್ರಿಯೆ ನೀಡುವ ಸಾಧ್ಯತೆಗಳಿವೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬಣದ ನಾಯಕರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದು ಕುಳಿತಿದೆ. ಇನ್ನು ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಮತ್ತು ಸಚಿವ ಬೈರತಿ ಸುರೇಶ್ ಜಾರಿ ನಿರ್ದೇಶನಾಲಯ(ಇ.ಡಿ.) ನೀಡಿದ ನೋಟಿಸ್ ಗೆ ಸಂಬಂಧಿಸಿದಂತೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿ ಮುಂದಿನ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. ಬೆಂಗಳೂರ ಹೂಡಿಕೆ ಸಮಾವೇಶ, ಭದ್ರವಾತಿ ಮಹಿಳಾ ಅದಿಕಾರಿ ಮೇಲಿನ ಹಲ್ಲೆ ಪ್ರಕರಣ ಸೇರಿದಂತೆ ಇಂದಿನ ಇಡೀ ದಿನದ ನಡೆದ ಪ್ರಮುಖ ಬೆಳವಣಿಗಗಳ ಸಂಕ್ಷಿಪ್ತ ವಿವರ ಇಲ್ಲಿದೆ.
ಮಹಿಳಾ ಅಧಿಕಾರಿ ಜ್ಯೋತಿ ಮೇಲೆ ಹಲ್ಲೆ ಪ್ರಕರಣ, ಮೂವರು ಆರೋಪಿಗಳ ಬಂಧನ
ಅಮಿತ್ ಶಾ ಭೇಟಿಯಾದ ಬಿಜೆಪಿ ಸಂಸದ ಗೋವಿಂದ್ ಕಾರಜೋಳ
ದೆಹಲಿ ಸಂಸತ್ ಭವನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಬಿಜೆಪಿ ಸಂಸದ ಗೋವಿಂದ್ ಕಾರಜೋಳ ಭೇಟಿಯಾಗಿದ್ದಾರೆ. ಈ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಮನವಿಗೆ ಅಮಿತ್ ಶಾ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕಾರಜೋಳ ಹೇಳಿದ್ದಾರೆ.
ಕರ್ನಾಟಕದಲ್ಲಿ 40,000 ಕೋಟಿ ರೂ ಹೂಡಿಕೆ ನಿರ್ಧಾರ ಘೋಷಿಸಿದ ಆನಂದ್ ಮಹೀಂದ್ರ
ಬೆಂಗಳೂರಿನಲ್ಲಿ ನಡೆಯುತ್ತಿರುವ ಹೂಡಿಕೆದಾರರ ಶೃಂಗಸಭೆಯಲ್ಲಿ ಆನಂದ್ ಮಹೀಂದ್ರ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಬರೋಬ್ಬರಿ 40,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಳ ಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಮೆಟ್ರೋ ರೈಲು ನಿಗಮವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮ ಪಾಲುದಾರಿಕೆ ಹೊಂದಿದೆ.ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೆಟ್ರೋ ರೈಲು ಕಾಯಿದೆ ಸೆಕ್ಷನ್ 37 ಪ್ರಕಾರ ದರ ನಿಗದಿ ಸಮಿತಿ ನೀಡಿದ ವರದಿಯನ್ನು ಅನುಷ್ಟಾನ ಮಾಡಬೇಕಾಗುತ್ತದೆ. ಹಾಗಾಗಿ ಈ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪಿಎಫ್ಐ ಬ್ಯಾನ್ ಆದರೂ ಬೇರೆ ಹೆಸರಿನಲ್ಲಿ ಸಕ್ರೀಯ, ಡಿಸಿಪಿ ಕಾರ್ ಮೇಲಿನ ದಾಳಿಗೆ ಬೊಮ್ಮಾಯಿ ಪ್ರತಿಕ್ರಿಯೆ
ಕರ್ನಾಟಕ, ಕೇರಳ ತಮಿಳುನಾಡಿನಲ್ಲಿ ಒಂದು ವರ್ಗ ಸಂಘಟನೆ ವ್ಯವಸ್ಥೆಯನ್ನು ಚಾಲೆಂಜ್ ಮಾಡುತ್ತಿದೆ. ಪಿಎಫ್‌ಐ ಬ್ಯಾನ್ ಆಗಿದೆ ಆದರೂ ಬೇರೆ ಬೇರೆ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.ಈ ರೀತಿಯ ಕೆಲ ಸಂಘಟನೆಗಳ ಮೇಲಿನ ಪ್ರಕರಣಗಳನ್ನು, ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಇದರ ಪರಿಣಾಮ ಈ ರೀತಿ ಘಟನೆಗಳು ನಡೆಯುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಹೈಕಮಾಂಡ್ ಭೇಟಿಯಾದ ಸತೀಶ್ ಜಾರಕಿಹೊಳಿ, ವೇಣುಗೋಪಾಲ್ ಜೊತೆ ಏನು ಚರ್ಚೆ?

72 ಗಂಟೆಯಲ್ಲಿ ಉತ್ತರ ಕೊಡಿ: ಯತ್ನಾಳ್‌ಗೆ ಹೈಕಮಾಂಡ್ ಸಂದೇಶ

ಸತೀಶ್ ಜಾರಕಿಹೊಳಿ ಬಳಿಕ ಕೆಎನ್ ರಾಜಣ್ಣ ದೆಹಲಿ ದಂಡಯಾತ್ರೆ
ಪಕ್ಷದ ವರಿಷ್ಠರ ಜೊತೆ ದಲಿತ ಸಮಾವೇಶ ಮತ್ತು ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತನಾಡಬೇಕು. ಹಾಗಾಗಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಮತ್ತು ರಣ್‌ದೀಪ್ ಸುರ್ಜೆವಾಲಾ ಅವರನ್ನು ಭೇಟಿಯಾಗುವೆ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ಹೈಕಮಾಂಡ್ ನಾಯಕರನ್ನು ಭೇಟಿಯಾದ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಲಿಂಗಾಯತ ನಾಯಕರ ಸಭೆ
ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕುಮಾರ್ ಬಂಗಾರಪ್ಪ ಅವರು ಹೈದರಾಬಾದ್‌ಗೆ ಹೊರಟ ಬಳಿಕ ಸೋಮಣ್ಣ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ ನಡೆಯಿತು. ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ್, ಬಿ.ಪಿ.ಹರೀಶ್, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶ್ರೀಮಂತ ಪಾಟೀಲ್, ಮುಖಂಡ ಎನ್.ಆರ್.ಸಂತೋಷ್ ಸಭೆಯಲ್ಲಿ ಭಾಗಿಯಾಗಿದ್ದರು. ಪಕ್ಷದಲ್ಲಿ ಆಗುತ್ತಿರುವ ಬೆಳವಣಿಗೆಗಳು, ಹೈಕಮಾಂಡ್ ನಿಲುವು ಸೇರಿ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ.
ಮೇ. 24ಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಘೋಷಣೆ: ನಿಖಿಲ್ ಕುಮಾರಸ್ವಾಮಿ ಸಾರಥ್ಯ?
ಎಚ್. ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸ್ಥಾನ ವಹಿಸಿಕೊಂಡು ರಾಷ್ಟ್ರ ರಾಜಕಾರಣಕ್ಕೆ ತೆರಳಿದ ಬಳಿಕ ರಾಜ್ಯದಲ್ಲಿ ಪಕ್ಷವನ್ನು ಮುನ್ನೆಡಸಲು ಸಾರಥಿಯ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಮೂಲಕ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿರುವ ಜೆಡಿಎಸ್ ಮೇ 24ರಂದು ನಿಖಿಲ್ ಅವರ ಹೆಸರು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ವಿಜಯೇಂದ್ರಗೆ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ಪತ್ರ
ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಬಿ.ಸಂದೀಪ್ ಆಯ್ಕೆಗೆ ಪಕ್ಷದ ವರಿಷ್ಠರು ತಡೆ ನೀಡಿದ್ದಾರೆ. ಈ ಸಂಬಂಧ ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಪತ್ರ ಬರೆದಿದ್ದಾರೆ.
ನೋಟಿಸ್ ಬಂದಿಲ್ಲ ಎಂದ ಯತ್ನಾಳ್
ಕೇಂದ್ರ ಶಿಸ್ತು ಸಮಿತಿಯಿಂದ ಅಧಿಕೃತವಾಗಿ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದ ಮೇಲೆ ವಿವರವಾದ ಉತ್ತರ ಕೊಡುತ್ತೇನೆ.- ಬಸನಗೌಡ ಪಾಟೀಲ ಯತ್ನಾಳ
ಸಿದ್ದರಾಮಯ್ಯ 660 ಕೆವಿ ಕರೆಂಟ್, ಅವರನ್ನು ಮುಟ್ಟೋದು ಅಷ್ಟು ಸುಲಭವಲ್ಲ: ಬಿಜೆಪಿ ಶಾಸಕ
'ಮುಖ್ಯಮಂತ್ರಿ ಸಿದ್ದರಾಮಯ್ಯ 11 ಕೆವಿ ಕರೆಂಟ್ ಅಲ್ಲ. ಅದು 660 ಕೆವಿ ಕರೆಂಟ್. ಅವರನ್ನು ಮುಟ್ಟೋದು ಅಷ್ಟು ಸುಲಭವಲ್ಲ' ಎಂದು ಬಿಜೆಪಿ ಶಾಸಕ ಮುನಿರತ್ನ ಹಾಡಿ ಹೊಗಳಿದ್ದಾರೆ.
ವಿಜಯೇಂದ್ರ ಬದಲಾಗುವ ವಿಶ್ವಾಸವಿದೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಗುತ್ತಾರೆ ಎಂಬ ವಿಶ್ವಾಸವಿದೆ. ಹೈ ಕಮಾಂಡ್ ಮೇಲೆ ನನಗೆ ನಂಬಿಕೆಯಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಹೈಕಮಾಂಡ್ ನಾಯಕರು ದೆಹಲಿಯಲ್ಲೇ ವೇದಿಕೆ ನಿರ್ಮಾಣ ಮಾಡುತ್ತಾರೆ. ಪಕ್ಷದ ಅಧ್ಯಕ್ಷರ ಆಹ್ವಾನ ನೀಡುವುದು ಮತ್ತು ಬಿಡುವುದು ಸಚಿವ ಸೋಮಣ್ಣ ಅವರಿಗೆ ಬಿಟ್ಟ ವಿಚಾರ ಎಂದರು.
ಅಧ್ಯಕ್ಷ ಸ್ಥಾನಕ್ಕೆ ಮೂರು ಲಿಂಗಾಯತ ನಾಯಕರ ಹೆಸರು
ಒಂದು ವೇಳೆ ಬಿಜೆಪಿ ಹೈಕಮಾಂಡ್ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಿಸುವ ನಿರ್ಣಯ ಕೈಗೊಂಡಲ್ಲಿ ಲಿಂಗಾಯತ ಸಮುದಾಯದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರುಗಳನ್ನು ಪರಿಶೀಲಿಸಬೇಕು ಎಂಬ ಚರ್ಚೆ ಪಕ್ಷದಲ್ಲಿ ಆರಂಭವಾಗಿದೆ.
ಚಿಕ್ಕಬಳ್ಳಾಪುರ ಅಧ್ಯಕ್ಷ ಆಯ್ಕೆಗೆ ವರಿಷ್ಠರ ತಡೆ
ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ಅವರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಬಿ.ಸಂದೀಪ್ ಆಯ್ಕೆಗೆ ಪಕ್ಷದ ವರಿಷ್ಠರು ತಡೆ ನೀಡಿದ್ದಾರೆ
ಯಡಿಯೂರಪ್ಪ ಅಸಮಾಧಾನ
ಯತ್ನಾಳ್ ಅವರು ಯಡಿಯೂರಪ್ಪ ವಿರುದ್ಧ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪಕ್ಷದ ನಾಯಕರು ಮೌನ ವಹಿಸಿದ್ದರ ಬಗ್ಗೆ ಆಕ್ರೋಶಭರಿತರಾಗಿ ಮಾತನಾಡಿದ್ದರು. ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿದರೂ ಅದನ್ನು ತಡೆಯಲು ಪ್ರಯತ್ನಿಸದೇ ಇರುವುದು ಅಪರಾಧ ಎಂದು ಹರಿಹಾಯ್ದಿದ್ದರು.