ರಾಜ್ಯ ರಾಜಕಾರಣದ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಯತ್ನಾಳ್
ಸದಾ ಒಂದಿಲ್ಲೊಂದು ಹೇಳಿಕೆ ಕೊಟ್ಟು ರಾಜ್ಯ ರಾಜಕಾರಣದಲ್ಲಿ ಸುದ್ದಿಯಾಗುವ ವಿಜಯಪುರ ನಗರ ಬಿಜೆಪಿ ಶಾಸಕ ಪಾಟೀಲ್ ಯತ್ನಾಳ್ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಿಜಯಪುರ, (ಫೆ.14): ರಾಜ್ಯ ರಾಜಕೀಯಲ್ಲಿ ಭಾರೀ ಬದಲಾವಣೆಯಾಗಲಿದ್ದು, ಮುಂದಿನ 4 ತಿಂಗಳಲ್ಲಿ ಈ ಬದಲಾವಣೆ ಕಾಣಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಇಂದು [ಶುಕ್ರವಾರ] ನಗರದಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನ ಬಳಿಕ ಸಂಪುಟ ಪುನಾರಚನೆಯಾಗಲಿದ್ದು, ಸಚಿವ ಸಂಪುಟ ಬದಲಾವಣೆ ಮಾಡಲೇಕಾಗುತ್ತದೆ. ಈ ಬಗ್ಗೆ ಹೈಕಮಾಂಡ್ ಒಳ್ಳೆಯ ನಿರ್ಧಾರ ಕೈಗೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದು ಹೇಳಿದರು.
ಕಳಪೆ ಸಾಧನೆ ಮಾಡಿದ ಸಚಿವರ ಕೈಬಿಡಿ: ಯತ್ನಾಳ್
ಸಚಿವ ಸ್ಥಾನಕ್ಕಾಗಿ ಈಗಾಗಲೇ ಪಕ್ಷದಲ್ಲಿ ಹಿರಿಯ ನಾಯಕರು ಅಸಮಾಧಾನ ತೋರಿದ್ದಾರೆ. ಸಿಎಂ ಸಂಪುಟ ಪುನಾರಚನೆ ಮಾಡಬೇಕು ಎಂದು ಗಂಭೀರ ಚರ್ಚೆಯಾಗುತ್ತಿದೆ. ರಾಜಕೀಯದಲ್ಲಿ ಸಚಿವರ ಕುಟುಂಬ ಹಸ್ತಕ್ಷೇಪ ಮಾಡುತ್ತಿದೆ ಎಂಬ ಬಗ್ಗೆಯೂ ಹೈಕಮಾಂಡ್ಗೂ ಮಾಹಿತಿ ಇದೆ ಎಂದರು.
ಸಚಿವರ ಮೌಲ್ಯಮಾಪನ ನಡೆಸಬೇಕೆಂದು ಸಿಎಂ ಅವರಿಗೆ ಮನವಿ ಮಾಡಿದ್ದೇನೆ. ಕೆಲ ಸಚಿವರು ವಿಧಾನಸೌಧ ಹಾಗೂ ವಿಕಾಸ ಸೌಧದತ್ತ ಸುಳಿಯಲ್ಲಾ. ಶಾಸಕರಾದ ನಾವು ಸಚಿವರನ್ನು ಹುಡುಕಾಡಬೇಕಾಗಿದೆ. ಅವರ ಪಿಎಗಳೂ ಸಹ ಸಿಗುತ್ತಿಲ್ಲಾ ಎಂದು ತಮ್ಮದೇ ಸರ್ಕಾರದ ಸಚಿವರ ಕಾರ್ಯ ವೈಖರಿ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ. ಕಳಪೆ ಸಾಧನೆ ಮಾಡಿದ ಸಚಿವರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಸಚಿವ ಸ್ಥಾನ ಕಳೆದುಕೊಂಡರೆ ಅವರೇನು ಬಂಡಾಯ ಏಳಲ್ಲ. ಬಂಡಾಯ ಎದ್ದು ಚುನಾವಣೆಗೆ ಹೋದರೂ ಅವರು ಮರು ಆಯ್ಕೆಯಾಗಲ್ಲ. ಅಸಮರ್ಥ ಸಚಿವರನ್ನು ಮನೆಗೆ ಕಳುಹಿಸಬೇಕು ಎಂದು ಗುಡುಗಿದರು.
ರಾಜ್ಯದ ಬೆಳವಣಿಗೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ. ಪ್ರತಿನಿತ್ಯದ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವರು ಮಾಹಿತಿ ಪಡೆಯುತ್ತಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು.