Asianet Suvarna News

ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಬಿಜೆಪಿ ಹೈಕಮಾಂಡ್‌ ಅಸಹಾಯಕ ಆಗಿದೆಯಾ?

‘ನಮಗೆ ಏನು ಸಿಕ್ಕಿದೆಯೊ ಅದೆಲ್ಲವೂ ಪಕ್ಷದ ಕೊಡುಗೆ. ನಮ್ಮನ್ನು ಬೆಳೆಸಿದ್ದು ಪಕ್ಷ. ವಿವಿಧ ಹುದ್ದೆಗಳನ್ನು ನೀಡಿದ್ದು ಪಕ್ಷ. ಹೀಗಾಗಿ, ಈಗ ಸ್ಥಾನ ಕಳೆದುಕೊಂಡವರು ಹಾಗೂ ಮುಂದೆ ಕಳೆದುಕೊಳ್ಳುವವರು ಸೇರಿದಂತೆ ಯಾರೊಬ್ಬರೂ ಬೇಸರಪಟ್ಟುಕೊಳ್ಳುವಂತಿಲ್ಲ: ಸಿ.ಟಿ.ರವಿ 

Karnataka Politics BJP Leader CT Ravi on Political Development inside the party in Kannada Prabha Interview hls
Author
Bengaluru, First Published Jul 14, 2021, 12:19 PM IST
  • Facebook
  • Twitter
  • Whatsapp

ಬೆಂಗಳೂರು (ಜು. 14): ‘ನಮಗೆ ಏನು ಸಿಕ್ಕಿದೆಯೊ ಅದೆಲ್ಲವೂ ಪಕ್ಷದ ಕೊಡುಗೆ. ನಮ್ಮನ್ನು ಬೆಳೆಸಿದ್ದು ಪಕ್ಷ. ವಿವಿಧ ಹುದ್ದೆಗಳನ್ನು ನೀಡಿದ್ದು ಪಕ್ಷ. ಹೀಗಾಗಿ, ಈಗ ಸ್ಥಾನ ಕಳೆದುಕೊಂಡವರು ಹಾಗೂ ಮುಂದೆ ಕಳೆದುಕೊಳ್ಳುವವರು ಸೇರಿದಂತೆ ಯಾರೊಬ್ಬರೂ ಬೇಸರಪಟ್ಟುಕೊಳ್ಳುವಂತಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾರ್ಮಿಕವಾಗಿ ಹೇಳಿದ್ದಾರೆ.

ನಾವು ಭ್ರಷ್ಟವ್ಯವಸ್ಥೆಯನ್ನು ಕಟ್ಟಿಕೊಟ್ಟರೆ ಭ್ರಷ್ಟತೆಗೆ ನಮ್ಮನ್ನು ಉದಾಹರಣೆ ನೀಡುತ್ತಾರೆ. ಅದೇ ರೀತಿ ಒಳ್ಳೆಯ ವ್ಯವಸ್ಥೆ ಕಟ್ಟಿಕೊಟ್ಟರೆ ಒಳ್ಳೆಯದಕ್ಕೆ ಉದಾಹರಣೆ ಕೊಡುತ್ತಾರೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವದ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ರವಿ ಅವರು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಸಂದರ್ಶನದ ಆಯ್ದ ಭಾಗ ಹೀಗಿದೆ:

ಕೇಂದ್ರ ಸಂಪುಟ ಭರ್ಜರಿ ಸರ್ಜರಿ ಮಾಡಲಾಗಿದೆಯಲ್ಲ?
-ಸಂಪುಟ ವಿಸ್ತರಣೆ ಮೂಲಕ ಪ್ರಾದೇಶಿಕ ಸಮತೋಲನ ಮತ್ತು ಸಾಮಾಜಿಕ ನ್ಯಾಯ ಮತ್ತು ಉತ್ತಮವಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಿ ಅವಕಾಶ ಕೊಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಕರ್ನಾಟಕದ್ದನ್ನೇ ತೆಗೆದುಕೊಂಡರೆ ರಾಜ್ಯದ ಎಲ್ಲ ಭಾಗಗಳಿಗೂ ಇದೀಗ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಪ್ರಧಾನಿ ಮೋದಿ ಅವರಿಗೆ ಅಂತಿಮವಾಗಿ ಬೇಕಾಗಿರುವುದು ಫಲಿತಾಂಶ. ಇದಕ್ಕೆ ಪೂರಕವಾಗಿ ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿದ್ದಾರೆ.

ಕರ್ನಾಟಕದಲ್ಲೂ ಜನಸಂಖ್ಯೆ ನಿಯಂತ್ರಣ ನೀತಿ ಜಾರಿಗೊಳಿಸಲು ಇದು ಸಕಾಲ: ಸಿಟಿ ರವಿ

ಹಲವು ಹಿರಿಯರನ್ನು ಕೈಬಿಟ್ಟಿರುವುದರ ಉದ್ದೇಶ?
-ಎಲ್ಲದಕ್ಕೂ ಕಾರಣ ಇದ್ದೇ ಇರುತ್ತದೆ. ಆದರೆ, ನನಗೆ ನಿರ್ದಿಷ್ಟಕಾರಣ ಗೊತ್ತಿಲ್ಲ. ಕೈಬಿಟ್ಟವರು ಕೆಲಸವನ್ನೇ ಮಾಡುತ್ತಿರಲಿಲ್ಲ ಎಂದರ್ಥವಲ್ಲ. ಅವರನ್ನು ಬೇರೆ ಬೇರೆ ಉದ್ದೇಶದಿಂದ ಬಳಸಿಕೊಳ್ಳಬೇಕು ಎಂಬ ಉದ್ದೇಶ ಇರಬಹುದು.

ಹಠಾತ್ತನೇ ಪ್ರಮುಖ ಸ್ಥಾನದಿಂದ ಕೈಬಿಡುವುದು ಎಷ್ಟರ ಮಟ್ಟಿಗೆ ಸರಿ?
-ನಾನು, ಸದಾನಂದಗೌಡರು, ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರು. ನಮಗೆ ಸ್ಥಾನಮಾನ ಕೊಟ್ಟಿರುವುದೆಲ್ಲ ಪಕ್ಷ. ಹೀಗಾಗಿ, ಒಂದು ಜವಾಬ್ದಾರಿಯಿಂದ ಬದಲಾವಣೆಯಾದರೂ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಪಕ್ಷವೇ ನಮ್ಮನ್ನು ಈ ಮಟ್ಟಕ್ಕೆ ತಂದಿದೆ. ಪಕ್ಷ ಇಲ್ಲದಿದ್ದರೆ ನಾವ್ಯಾರು? ನಾವ್ಯಾರೂ ಮೈಸೂರು ಮಹಾರಾಜರ ವಂಶಸ್ಥರಲ್ಲ. ಘೋರ್ಪಡೆ ವಂಶಸ್ಥರಲ್ಲ. ನಮಗೆ ಏನು ಸಿಕ್ಕಿದೆಯೊ ಅದೆಲ್ಲವೂ ಪಕ್ಷದ ಕೊಡುಗೆ. ನಮ್ಮನ್ನು ಬೆಳೆಸಿದ್ದು ಪಕ್ಷ. ವಿವಿಧ ಹುದ್ದೆ ನೀಡಿದ್ದು ಪಕ್ಷ. ಈಗ ಸ್ಥಾನ ಕಳೆದುಕೊಂಡವರು ಹಾಗೂ ಮುಂದೆ ಕಳೆದುಕೊಳ್ಳುವವರು ಸೇರಿದಂತೆ ಯಾರೊಬ್ಬರೂ ಬೇಸರಪಟ್ಟುಕೊಳ್ಳುವಂತಿಲ್ಲ.

ಮುಂದಿನ ಸಿಎಂ ಸದಾನಂದಗೌಡರು ಎಂಬ ಕೂಗು ಕೇಳಿಬಂದಿದೆಯಲ್ಲ?
-ಆಯಾ ಕಾಲಘಟ್ಟದಲ್ಲಿ ಪಕ್ಷ ಏನು ನಿರ್ಣಯ ಕೈಗೊಳ್ಳಬೇಕೊ ಅದನ್ನು ತೆಗೆದುಕೊಳ್ಳುತ್ತದೆ. ಯಾವುದೂ ಶಾಶ್ವತವಲ್ಲ, ಯಾವುದೂ ನಮ್ಮದಲ್ಲ ಎಂಬುದರ ಬಗ್ಗೆ ನಾವು ಸ್ಪಷ್ಟವಾಗಿರಬೇಕು. ಇದ್ದ ಕಾಲದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಕೆಲವು ಕಾಲ ಜನರ ಮನಸ್ಸಿನಲ್ಲಿ ಉಳಿಯುತ್ತೇವೆ. ನಾವು ಭ್ರಷ್ಟವ್ಯವಸ್ಥೆಯನ್ನು ಕಟ್ಟಿಕೊಟ್ಟರೆ ಭ್ರಷ್ಟತೆಗೆ ನಮ್ಮನ್ನು ಉದಾಹರಣೆ ನೀಡುತ್ತಾರೆ. ಅದೇ ರೀತಿ ಒಳ್ಳೆಯ ವ್ಯವಸ್ಥೆ ಕಟ್ಟಿಕೊಟ್ಟರೆ ಒಳ್ಳೆಯದಕ್ಕೆ ಉದಾಹರಣೆ ಕೊಡುತ್ತಾರೆ. ಯಾವುದಕ್ಕೆ ಉದಾಹರಣೆಯಾಗಬೇಕು ಎಂಬ ವಿವೇಚನೆ ಇಟ್ಟುಕೊಂಡರೆ ಯಾವತ್ತೂ ಕೆಟ್ಟಮಾತು ಬರುವುದಿಲ್ಲ.

ಬಿಜೆಪಿಗೆ ಏಕಾಂಗಿ ಜಯ ಅಸಾಧ್ಯ: ರಾಷ್ಟ್ರಪತಿ ಅಯ್ಕೆಗೆ ಮೈತ್ರಿ ಅನಿವಾರ್ಯ

ರಾಜ್ಯ ಸರ್ಕಾರದ ಬಗ್ಗೆ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದೆ?
-ಪ್ರಧಾನಿ ಮೋದಿ ಅವರು ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತಕ್ಕೆ ಮಾದರಿ. ನಾವು ಅದನ್ನು ಅಳವಡಿಸಿಕೊಳ್ಳಬೇಕು. ಭ್ರಷ್ಟಾಚಾರದ ಆರೋಪಗಳು ಯಾಕೆ ಬರುತ್ತಿವೆ ಎಂಬುದರ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕು. ಅದಕ್ಕೆ ಕಾರಣವೇನು? ಸುಮ್ಮನೆ ಆರೋಪ ಕೇಳಿಬರುತ್ತಿವೆಯೇ ಅಥವಾ ನಮ್ಮದೂ ತಪ್ಪಿದೆಯೇ ಎಂಬುದನ್ನು ಯೋಚಿಸಬೇಕು. ಸುಮ್ಮನೆ ಆರೋಪ ಕೇಳಿಬರುತ್ತಿದ್ದರೆ ನಾವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ತಪ್ಪಿದ್ದರೆ ರಾಜ್ಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ನಮ್ಮ ನಡೆಯನ್ನು ಸರಿಪಡಿಸಿಕೊಳ್ಳಬೇಕು. ಪ್ರಧಾನಿ ಮೋದಿ ಅವರ ಮೇಲೂ ಆರೋಪ ಹೊರಿಸಿದರು. ಆದರೆ, ಅವು ರಾಜಕೀಯ ಪ್ರೇರಿತವಾಗಿದ್ದವು. ಅವರು ತಮ್ಮ ಕೆಲಸ ಮಾಡಿಕೊಂಡು ಮುಂದೆ ಹೋದರು. ಜನರ ವಿಶ್ವಾಸ ಗಳಿಸಿದರು.

ಮೋದಿ ವಿರುದ್ಧ ಆರೋಪ ಮಾಡಿದವರು ಪ್ರತಿಪಕ್ಷದವರು. ಆದರೆ, ರಾಜ್ಯದಲ್ಲಿ ಆರೋಪ ಕೇಳಿಬರುತ್ತಿರುವುದು ಸ್ವಪಕ್ಷೀಯರಿಂದ?
-ನಾನು ಆ ವಿಷಯದ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ. ಆದರೆ, ನನ್ನ ಸರಿ ತಪ್ಪುಗಳು ಹೊರಗಿನವರಿಗೆ ಗೊತ್ತಾಗುವುದಕ್ಕಿಂತ ನನಗೇ ಗೊತ್ತಾಗುತ್ತವೆ. ತಪ್ಪಿದ್ದರೆ ಸರಿಪಡಿಸಿಕೊಳ್ಳಬೇಕು ಅಷ್ಟೇ.

ನಿಮ್ಮ ತಪ್ಪುಗಳನ್ನು ನೀವು ಸರಿಪಡಿಸಿಕೊಳ್ಳದೇ ಇದ್ದಾಗ ಪಕ್ಷದ ವರಿಷ್ಠರು ಸರಿಪಡಿಸಲು ಮುಂದಾಗಬೇಕಲ್ಲವೇ?
-ನಾನು ಇದಕ್ಕೆ ಏನೇ ಉತ್ತರ ನೀಡಿದರೂ ತಪ್ಪು ಅರ್ಥವೇ ಬರುತ್ತದೆ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬಂತಾಗುತ್ತದೆ. ಹೀಗಾಗಿ, ನಾನು ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ಕಾಲ ಎಲ್ಲ ಸಮಯದಲ್ಲೂ ತನ್ನ ಕೆಲಸ ಮಾಡಿದೆ. ಅದು ನಿಂತಿಲ್ಲ.

ಜೆಪಿ ನಡ್ಡಾ, ಬಿಎಲ್ ಸಂತೋಷ್ ಭೇಟಿಯಾದ ಪ್ರಧಾನಿ ಮೋದಿ; ಮಹತ್ವದ ಚರ್ಚೆ!

ಕರ್ನಾಟಕದಲ್ಲಿನ ಬೆಳವಣಿಗೆ ಬಗ್ಗೆ ಪಕ್ಷ ಅಸಹಾಯಕವಾಗಿದೆಯೇ?
-ಸಾಕಷ್ಟುಸಂಕಷ್ಟಗಳನ್ನು ಎದುರಿಸಿಯೇ ನಮ್ಮ ಪಕ್ಷ ಬೆಳೆದಿದೆ. ಯಾವತ್ತೂ ಅಸಹಾಯಕವಾಗಿಲ್ಲ. ಆಗುವುದೂ ಇಲ್ಲ. ಎಲ್ಲ ಸಂದರ್ಭಗಳನ್ನು ಎದುರಿಸಿಕೊಂಡೇ ಬಂದಿದೆ. ಅಂಥ ಕೆಟ್ಟಸ್ಥಿತಿ ಇಂದು ಇಲ್ಲ.

ರಾಜ್ಯ ಉಸ್ತುವಾರಿ ಹಲವು ಬಾರಿ ಎಚ್ಚರಿದರೂ ಮುಖಂಡರ ವಾಕ್ಸಮರ ನಿಂತಿಲ್ಲ?
-ಮಾತನಾಡಿದ್ದು ಇವತ್ತು ಸುದ್ದಿಯಾಗಬಹುದು. ಮಾತನಾಡಿದ್ದರ ಸಕಾರಾತ್ಮಕ ಪರಿಣಾಮ ಇದ್ದರೆ ಅದರಿಂದ ಅವರಿಗೆ ಮತ್ತು ಪಕ್ಷಕ್ಕೆ ಒಳ್ಳೆಯದಾಗುತ್ತದೆ. ಒಂದು ವೇಳೆ ಮಾತಿನ ದುಷ್ಪರಿಣಾಮ ಇದ್ದರೆ ಅದರಿಂದ ಪಕ್ಷ ಹಾಗೂ ಅವರಿಗೆ ದುಷ್ಪರಿಣಾಮವೇ ಆಗುತ್ತದೆ. ಹೀಗಾಗಿ, ಮಾತನಾಡುವವರು ಯೋಚಿಸಿ ಮಾತನಾಡಿದರೆ ಅವರಿಗೂ ಕ್ಷೇಮ. ಪಕ್ಷಕ್ಕೂ ಕ್ಷೇಮ.

ನಾಯಕತ್ವದ ವಿರುದ್ಧ ಅಪಸ್ವರದ ಧ್ವನಿ ಇರಲಿ ಎಂಬ ಉದ್ದೇಶವೇನಾದರೂ ಹೈಕಮಾಂಡ್‌ಗೆ ಇದೆಯೇ?
-ಹಾಗೇನಿಲ್ಲ. ಇಂಥ ವಿಷಯಗಳಲ್ಲಿ ನಾನು ಹೆಚ್ಚು ಹೇಳುವುದಿಲ್ಲ.

ನೀವು ಇತ್ತೀಚೆಗೆ ಮಾರ್ಮಿಕವಾಗಿ ಅಥವಾ ನಿಗೂಢಾರ್ಥ ಒಳಗೊಂಡಂತೆ ಹೇಳಿಕೆ ನೀಡುತ್ತಿದ್ದೀರಿ?
-ನಾನು ನೇರವಾಗಿ ಹೇಳಬೇಕಾದ ಜಾಗದಲ್ಲಿ ಹೇಳಿರುತ್ತೇನೆ. ಈಗ ಪಕ್ಷ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಆ ಜವಾಬ್ದಾರಿಗೆ ತಕ್ಕಂತೆ ಯೋಗ್ಯತೆ ಬೆಳೆಸಿಕೊಳ್ಳಬೇಕು. ಸ್ಥಾನದ ಗೌರವ ಉಳಿಯುವಂತೆ ಮಾತನಾಡುತ್ತೇನೆ. ಹೊರಗೆ ಮಾತನಾಡುವಾಗ ಸೂಕ್ಷ್ಮವಾಗಿ ಮತ್ತು ಅರ್ಥವಾಗುವಂತೆ ಹೇಳಿದ್ದೇನೆ. ನನ್ನಿಂದ ಅಪಚಾರವಾಗಬಾರದು ಎಂಬ ಪ್ರಯತ್ನದಲ್ಲಿರುತ್ತೇನೆ. ಆದರೂ ಹಲವು ಬಾರಿ ನಾನು ಮಾತನಾಡಿದ್ದನ್ನು ತಿರುಚುವ ಪ್ರಯತ್ನ ಮಾಡಲಾಗಿದೆ.

ರಾಜ್ಯದಲ್ಲಿನ ನಾಯಕತ್ವ ವಿವಾದ ಮುಗಿದಿದೆಯೇ ಅಥವಾ ಇನ್ನೂ ಇಲ್ಲವೇ?
-ಇದಕ್ಕೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಾವು ಯಡಿಯೂರಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಬಹುಮತದಿಂದ ಅಲ್ಲ. ನಾನು ಎಷ್ಟುಸರಿ ಇದ್ದೇನೆ ಅಥವಾ ಇಲ್ಲ ಎಂಬುದು ನನಗೆ ಗೊತ್ತಿರಬೇಕು. ನಮಗೆ ನಾವೇ ಮೌಲ್ಯಮಾಪನ ಮಾಡಿಕೊಂಡು ಮುಂದೆ ಸಾಗಿದರೆ ನಮಗಿರುವ ಬೆಂಬಲ ಎರಡು ಪಟ್ಟು, ಮೂರು ಪಟ್ಟು ಹೆಚ್ಚಾಗುತ್ತದೆ.

ಬಿಜೆಪಿಗೆ ಬಿಗ್ ಶಾಕ್: ಕಮಲ ಪಾಳಯಕ್ಕೆ ಪಂಕಜಾ ಮುಂಡೆ ಗುಡ್‌ ಬೈ.?

ತಮಿಳುನಾಡಿನಲ್ಲಿ ಅಣ್ಣಾಮಲೈ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೀರಿ?
-ನಮ್ಮದು ಪ್ರಯೋಗಶೀಲತೆಯ ಪಕ್ಷ. ಅವರು ಪಕ್ಷಕ್ಕೆ ಒಂದು ಇನ್ನೂ ಒಂದು ವರ್ಷವೂ ಆಗಿಲ್ಲ. ಯುವಜನರ ಆಶೋತ್ತರಗಳನ್ನು ಈಡೇರಿಸುವ ಸಾಮರ್ಥ್ಯವಿದೆ ಎಂಬ ಉದ್ದೇಶದಿಂದ ಅವರಿಗೆ ಜವಾಬ್ದಾರಿ ಕೊಡಲಾಗಿದೆ. ತಮಿಳುನಾಡಿನಲ್ಲಿ ನಮ್ಮದು ಬೆಳೆಯಬೇಕಾಗಿರುವ ಪಕ್ಷ. ಇನ್ನೂ ಬೆಳೆದಿಲ್ಲ. ಪೂರ್ಣ ಪ್ರಮಾಣದಲ್ಲಿ ಸಂಘಟನೆಗಾಗಿ ಸಮಯ ನೀಡಬೇಕಾಗಿರುವ ನಾಯಕ ಬೇಕಾಗಿದೆ. ಇದೆಲ್ಲ ಕಾರಣಕ್ಕಾಗಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದೇವೆ.

ಇತರ ರಾಜ್ಯಗಳಲ್ಲಿ ಪಕ್ಷ ಪ್ರಯೋಗ ಮಾಡುತ್ತಿದೆ? ಕರ್ನಾಟಕದಲ್ಲಿ ಪ್ರಯೋಗವಿಲ್ಲವೇ?
-ಕೆಲವು ಪ್ರಯೋಗಗಳು ಗೊತ್ತಾಗುತ್ತವೆ. ಇನ್ನು ಕೆಲವು ಗೊತ್ತಾಗುವುದಿಲ್ಲ.

- ವಿಜಯ್‌ ಮಲಗಿಹಾಳ
ಕನ್ನಡಪ್ರಭಕ್ಕೆ ಸಿ.ಟಿ.ರವಿ ವಿಶೇಷ ಸಂದರ್ಶನ

Follow Us:
Download App:
  • android
  • ios