ಗ್ಯಾರಂಟಿ ಜಾರಿ ಅಸಾಧ್ಯ ಎಂದಿದ್ದರು ಮೋದಿ, ನಾವು ಐದೂ ಗ್ಯಾರಂಟಿಗಳ ಜಾರಿ ಮಾಡಿದ್ದೇವೆ, ಹಣ ಎಲ್ಲಿಂದ ಬರುತ್ತೆಂದು ಉತ್ತರ ಕೊಟ್ಟಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು(ಜು.09): ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವಿಲ್ಲ, ಹಾಗೇನಾದರೂ ಜಾರಿಗೊಳಿಸಿದರೆ ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ನಾವು ಆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಈ ಯೋಜನೆಗಳಿಗೆ ಹೇಗೆ ಮತ್ತು ಎಲ್ಲಿಂದ ಹಣ ಒದಗಿಸುತ್ತೇವೆ ಎಂದು ಬಜೆಟ್‌ನಲ್ಲಿ ವಿವರಿಸಿದ್ದೇವೆ. ಈಗ ರಾಜ್ಯ ದಿವಾಳಿಯಾಗಿದೆಯೇನು? ಹೀಗಂತ ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಟೀಕೆಗೆ ತಿರುಗೇಟು ನೀಡಿದ್ದಾರೆ.
ಅಲ್ಲದೆ, ಯಾವುದೇ ಕಾರಣಕ್ಕೂ ರಾಜ್ಯ ಆರ್ಥಿಕ ದಿವಾಳಿ ಆಗಲು ಬಿಡುವುದಿಲ್ಲ. ಕೊಟ್ಟಿರುವ ಐದು ಗ್ಯಾರಂಟಿಗಳನ್ನು ನಾವು ಜಾರಿಗೆ ತರುತ್ತೇವೆ. ಅದಕ್ಕೆ ಬೇಕಾದ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Karnataka Budget 2023: ಕಲಬುರಗಿಗೆ ಹಿಂದೆಯೇ ಮಂಜೂರಾಗಿದ್ದ ಅಸ್ಪತ್ರೆಗಳಿಗೆ ಮರುಜೀವ
ಶನಿವಾರ ಬೆಂಗಳೂರಿನ ವಸಂತನಗರದಲ್ಲಿರುವ ದೇವರಾಜ ಅರಸು ಭವನದಲ್ಲಿ ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶ’ದ ಸಂವಾದದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈ ಗ್ಯಾರಂಟಿಗಳನ್ನು ಜಾರಿಗೊಳಿಸಲು ಯಾವ ಪಕ್ಷಕ್ಕೂ ಸಾಧ್ಯವಾಗುವುದಿಲ್ಲ ಎಂದಿದ್ದರು. ನಾನು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಎಷ್ಟುಹಣ ಆಗುತ್ತದೆ. ಎಲ್ಲಿಂದ ತರುತ್ತೇವೆ ಎಂದು ವಿವರಣೆ ಕೊಟ್ಟಿದ್ದೇನೆ. ಒಟ್ಟು ಐದು ಗ್ಯಾರಂಟಿಗಳನ್ನು ಜಾರಿ ಮಾಡಬೇಕಾದರೆ ವಾರ್ಷಿಕ 52,045 ಕೋಟಿ ರು.ಗಳು ಬೇಕು. ಈ ವರ್ಷ ಉಳಿದ ಅವಧಿಗೆ 35,410 ಕೋಟಿ ರು.ಬೇಕಿದೆ ಎಂದು ವಿವರಿಸಿದರು.
ಈ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಹೊಂದಿಸಬೇಕು ಎಂಬ ಕಾರಣಕ್ಕೆ ನಾನು ಸಾಮಾನ್ಯ ಜನರ ಮೇಲೆ ತೆರಿಗೆ ಹಾಕಿಲ್ಲ. ಬಡವರ ಮೇಲೆ ತೆರಿಗೆ ಹಾಕಿಲ್ಲ. ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಪ್ರಯತ್ನ ಮಾಡಿದ್ದೇನೆ. ವಾಣಿಜ್ಯ ತೆರಿಗೆ, ಜಿಎಸ್‌ಟಿಯಲ್ಲಿ ನಮಗೆ ಕೊರತೆಯಾಗಿದ್ದು, ಸೋರಿಕೆ ತಡೆಗಟ್ಟಿ4 ಸಾವಿರ ಕೋಟಿ ರು.ವೆಚ್ಚ ಮಾಡಬೇಕು ಎಂದು ಸೂಚಿಸಿದ್ದೇನೆ. 2018-19ರಲ್ಲಿ ಮಾರ್ಗಸೂಚಿ ದರ ನಿಗದಿಯಾಗಿದ್ದು ಭೂಮಿ ಬೆಲೆ ಜಾಸ್ತಿಯಾಗಿದೆ. ಸ್ಟಾಂಪ್‌ಡ್ಯೂಟಿ ಸಂಗ್ರಹ ಹೆಚ್ಚಾಗುವುದರಿಂದ 6 ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಇನ್ನು ವಿಸ್ಕಿ, ಬಿಯರ್ ಬೆಲೆ ಜಾಸ್ತಿ ಮಾಡಿದ್ದೇನೆ. ಗಣಿ ಮತ್ತು ಭೂ ವಿಜ್ಞಾನ ಮೇಲೆ ಸ್ವಲ್ಪ ತೆರಿಗೆ ಹಾಕಿದ್ದೇನೆ. ಈ ಮೂಲಕ 13,500 ಕೋಟಿ ರು. ತೆರಿಗೆಯನ್ನು ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದೇವೆ. ಇದರಿಂದ ಮಹಿಳೆಯರಿಗೆ, ಬಡವರಿಗೆ ಅನ್ಯಾಯ ಅಗಲ್ಲ. ಪೆಟ್ರೋಲ್, ಡೀಸೆಲ್‌ಗೆ ಒಂದು ಪೈಸೆ ಹೆಚ್ಚುಮಾಡಿಲ್ಲ. ಸಾಮಾನ್ಯ ಜನರು ಬಳಸುವ ಪದಾರ್ಥಗಳ ಮೇಲೆ ಬೆಲೆ ಹೆಚ್ಚಳ ಮಾಡಿಲ್ಲ. ಮೋಟಾರು ವಾಹನಗಳಿಂದ ಸ್ವಲ್ಪ ಸಂಪನ್ಮೂಲ ಸಂಗ್ರಹವಾಗುತ್ತದೆ ಎಂದರು.
ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ 77 ಸಾವಿರ ಕೋಟಿ ಸಾಲ ಪಡೆಯುತ್ತೇವೆ ಎನ್ನುತ್ತಿದ್ದರು. ನಮಗೆ ಇನ್ನೂ ಸಾಲ ಪಡೆಯಲು ಅವಕಾಶವಿದೆ. ಅದಕ್ಕೆ ಜಿಡಿಪಿಯ ಶೇ.25ರೊಳಗೆ ಸಾಲ ಇರಬೇಕು. ನಮ್ಮದು ಈಗ ಶೇ.22.30ರಷ್ಟು ಸಾಲ ಇದೆ ಎಂದು ತಿಳಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರ ಹನಿ ನೀರಾವರಿ, ಲೋಕೋಪಯೋಗಿ, ಬೆಂಗಳೂರು ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿಯಲ್ಲಿ ಸುಮಾರು ಕೆಲಸಗಳಿಗೆ ಅನುಮೋದನೆ ಮಾಡಿ ಕೇಂದ್ರಕ್ಕೆ ಕಳುಹಿಸಿದೆ. 2.55 ಲಕ್ಷ ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿದೆ. ಸಣ್ಣ ನೀರಾವರಿಗೆ ಇರುವುದೇ 2 ಸಾವಿರ ಕೋಟಿ ಅನುದಾನ ಮೀಸಲು. ಆದರೆ, ಮಂಜೂರು ಮಾಡಿರುವುದು 13 ಸಾವಿರ ಕೋಟಿ ರು.ಗಳು. ಹೀಗಿರುವಾಗ ಹೇಗೆ ಕೆಲಸ ಮಾಡುವುದು? ಆರ್ಥಿಕ ಅಶಿಸ್ತು ಕೆಟ್ಟದಾಗಿರುವ ಪರಿಸ್ಥಿತಿಯಲ್ಲಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಈ ಪರಿಸ್ಥಿತಿಯನ್ನು ಬದಲಾವಣೆ ಮಾಡಿ ಸುಸ್ಥಿತಿಗೆ ತರುವಂತ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶೀಘ್ರವೇ ಮುಟ್ಟಿನ ರಜೆ, ಸಿಎಂ ಪ್ರತಿಕ್ರಿಯೆ
ಬಡವರ ಮೇಲೆ ನಾವು ತೆರಿಗೆ ಹೇರಿಕೆ ಮಾಡಿಲ್ಲ
ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಹೊಂದಿಸಬೇಕು ಎಂಬ ಕಾರಣಕ್ಕೆ ನಾನು ಸಾಮಾನ್ಯ ಜನರ ಮೇಲೆ ತೆರಿಗೆ ಹಾಕಿಲ್ಲ. ಬಡವರ ಮೇಲೆ ತೆರಿಗೆ ಹೇರಿಲ್ಲ. ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಪ್ರಯತ್ನ ಮಾಡಿದ್ದೇನೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿದ್ದುದು ಬಜೆಟ್ಟೋ, ಬಿಜೆಪಿಗೆ ಬೈಗುಳವೋ?
ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದರಾ ಅಥವಾ ಬಿಜೆಪಿಯನ್ನು ಬೈದರಾ ಎಂಬುದೇ ಗೊತ್ತಾಗಲಿಲ್ಲ. ಬಜೆಟ್‌ನಲ್ಲಿ ಅವರು ಯೋಜನೆಗಳನ್ನು ಮಂಡಿಸಿದ್ದಕ್ಕಿಂತ ಬಿಜೆಪಿಯನ್ನು ಬೈದಿದ್ದೇ ಹೆಚ್ಚು ಅಂತ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ,
