ಬೆಂಗಳೂರು(ಡಿ.07): ಶತಮಾನದಲ್ಲೇ ಕೇಳರಿಯದ ಕೊರೋನಾ ಸೋಂಕಿ​ನ ಕರಿನೆರಳಿನ ನಡುವೆಯೇ ಇಂದು(ಸೋಮವಾರ)ದಿಂದ ರಾಜ್ಯದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದೆ. ಕೋವಿಡ್‌ ನಿರ್ವಹಣೆ, ಆರ್ಥಿಕ ಕುಸಿತ, ನೆರೆ ಪರಿಹಾರ, ಹಲವು ವಿವಾದಾತ್ಮಕ ವಿಧೇಯಕಗಳು, ಪ್ರಸಕ್ತ ಡ್ರಗ್ಸ್‌ ಮಾಫಿಯಾ, ಡಿಜೆ ಹಳ್ಳಿ ಗಲ​ಭೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಂದಿನ ಹತ್ತು ದಿನಗಳ ಕಾಲ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಮುಖಾಮುಖಿ ವಾಕ್ಸಮರ ನಡೆಯಲಿದೆ.

"

ಸರ್ಕಾರದ ವಿರುದ್ಧ ಮುಗಿ ಬೀಳಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಸಾಲು-ಸಾಲು ವಿಷಯಗಳನ್ನು ಪಟ್ಟಿಮಾಡಿಕೊಂಡಿದ್ದು ಪ್ರಶ್ನೆಗಳ ಸುರಿಮಳೆ ಸುರಿಸಲು ಇದೇ ಮೊದಲ ಬಾರಿಗೆ 1,200ಕ್ಕೂ ಹೆಚ್ಚು ಪ್ರಶ್ನೆಗಳ ‘ಪ್ರಶ್ನೆ ಬ್ಯಾಂಕ್‌’ ಮಾಡಿದೆ. ಇನ್ನು ಕಾಂಗ್ರೆಸ್‌, ಜೆಡಿಎಸ್‌ನ ದಾಳಿಗೆ ಡ್ರಗ್ಸ್‌ ಹಗರಣದ ಆಳವಾದ ತನಿಖೆ, ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಪ್ರಕರಣಗಳನ್ನು ಬಳಸಿಕೊಂಡು ತಿರುಗೇಟು ನೀಡಲು ಆಡಳಿತಾರೂಢ ಬಿಜೆಪಿಯೂ ಸಜ್ಜಾಗಿದೆ. ಅಲ್ಲದೆ ವಿರೋಧಪಕ್ಷಗಳ ವಿರೋಧದ ನಡುವೆಯೇ ಹಲವು ವಿವಾದಾತ್ಮಕ ಕಾಯಿದೆ ತಿದ್ದುಪಡಿ ವಿಧೇಯಕಗಳ ಮಂಡನೆಗೆ ಮುಂದಾಗಿದೆ. ಹೀಗಾಗಿ ಸಹಜವಾಗಿಯೇ ಸದನವು ಕದನ ಕುತೂಹಲ ಕೆರಳಿಸಿದೆ.

ಕಲಾ​ಪ​ದಲ್ಲಿ ಏನೇ​ನು?:

ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿರುವ ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಮಂಡಿಸಿದ ಬಳಿಕ ಪ್ರಶ್ನೋತ್ತರ ಅವಧಿ ಕೈಗೆತ್ತಿಕೊಳ್ಳಲಾಗುವುದು. ಬಳಿಕ ರಾಷ್ಟ್ರಪತಿ, ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸಲಾಗುವುದು.

ದಿಲ್ಲಿ ರೀತಿ ಬೆಂಗಳೂರಲ್ಲೂ ರೈತರ ಹೋರಾಟ: ವಿಧಾನಸೌಧಕ್ಕೆ ಮುತ್ತಿಗೆ

ಈ ವೇಳೆ ಸುಗ್ರೀವಾಜ್ಞೆ ಮೂಲಕ ಹೊರಡಿಸಿರುವ ಎಪಿಎಂಸಿ ಕಾಯಿದೆ ತಿದ್ದುಪಡಿ, ಭೂ ಸುಧಾರಣೆ ಕಾಯಿದೆ, ಕಾರ್ಮಿಕ ಕಾಯಿದೆ ತಿದ್ದುಪಡಿಗಳು ಮಂಡನೆಯಾಗುವ ಸಾಧ್ಯತೆ ಇದೆ. 2018-19ನೇ ಸಾಲಿನ ಧನವಿನಿಯೋಗ ಮತ್ತು ಹಣಕಾಸು ಲೆಕ್ಕಗಳ ಸಿಎಜಿ ವರದಿ, 2019ರ ಮಾರ್ಚ್‌ವರೆಗಿನ ಹಣಕಾಸಿನ ವ್ಯವಹಾರಗಳ ಸಿಎಜಿ ವರದಿಯು ಮಂಡನೆಯಾಗಲಿದೆ. ಬಿಬಿಎಂಪಿ ವಿಧೇಯಕ ಪರಿಶೀಲನೆಗೆ ಎಸ್‌. ರಘು ನೇತೃತ್ವದಲ್ಲಿ ರಚಿಸಿರುವ ಜಂಟಿ ಪರಿಶೀಲನಾ ಸಮಿತಿಯ ವಿಶೇಷ ವರದಿಯೂ ಮಂಡನೆ ಸೇರಿ ಹಲವು ಮಹತ್ವದ ವರದಿಗಳು ಮಂಡನೆಯಾಗಲಿವೆ.

ಸಿಎಲ್‌ಪಿ ಸಭೆ ಮಾತ್ರವಲ್ಲದೆ ಹಿರಿಯ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿರುವ ಸಿದ್ದರಾಮಯ್ಯ, ನೆರೆ ನಿರ್ವಹಣೆ ವೈಫಲ್ಯ, ಕೇಂದ್ರದಿಂದ ಜಿಎಸ್‌ಟಿ ಹಾಗೂ ನೆರೆ ಪರಿಹಾರ ಕೇಳದ ಸರ್ಕಾರದ ಹಿಂಜರಿಕೆ, ಕೊರೋನಾ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ವೈಫಲ್ಯ, ಡ್ರಗ್ಸ್‌ ತನಿಖೆಯ ಹಾದಿ ತಪ್ಪಿಸುತ್ತಿರುವ ರೀತಿ, ಬಿ-ಖರಾಬು ಜಮೀನು ಮಾರಾಟಕ್ಕೆ ಮುಂದಾಗಿರುವುದು, ಕೇಂದ್ರದ ಹಿಂದಿ ಹೇರಿಕೆ ಸೇರಿದಂತೆ ಬಿಜೆಪಿ ಸರ್ಕಾರದ ಜನ ವಿರೋಧಿ ಧೋರಣೆ ಹಾಗೂ ವೈಫಲ್ಯಗಳನ್ನು ಎತ್ತಿ ತೋರಿಸುವ ವೇದಿಕೆಯನ್ನಾಗಿ ಸದನವನ್ನು ಮಾಡಿಕೊಳ್ಳಬೇಕು. ತನ್ಮೂಲಕ ಸರ್ಕಾರದ ಆರ್ಥಿಕ ಹಾಗೂ ನೈತಿಕ ದಿವಾಳಿತನವನ್ನು ಬಯಲು ಮಾಡಬೇಕು ಎಂದು ರಣತಂತ್ರ ರೂಪಿಸಿದೆ. ಅಲ್ಲದೆ, ಸುಗ್ರೀವಾಜ್ಞೆ ಮೂಲಕ ಎಪಿಎಂಸಿ, ಭೂ ಸುಧಾರಣೆ, ಕಾರ್ಮಿಕ ಕಾಯಿದೆಯಂತಹ ವಿವಿಧ ಕಾಯಿದೆಗಳನ್ನು ಜನ ವಿರೋಧಿಯಾಗಿ ತಿದ್ದುಪಡಿ ಮಾಡಿ ಮಂಡಿಸುತ್ತಿರುವುದಕ್ಕೆ ವಿರುದ್ಧವಾಗಿ ತೀವ್ರ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮಂಡನೆಯಾಗಲಿರುವ ಪ್ರಮುಖ ಹೊಸ ವಿಧೇಯಕಗಳು

* ಕರ್ನಾಟಕ ಲೋಕಾಯುಕ್ತ (2ನೇ ತಿದ್ದುಪಡಿ) ವಿಧೇಯಕ
* ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ವಿಧೇಯಕ
* ಕರ್ನಾಟಕ ಭಿಕ್ಷಾಟನೆ ನಿಷೇಧ ತಿದ್ದುಪಡಿ ವಿಧೇಯಕ
* ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ ವಿಧೇಯಕ
* ಕರ್ನಾಟಕ ವಿಧಾನಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಕಾನೂನು ತಿದ್ದುಪಡಿ ವಿಧೇಯಕ
* ಕರ್ನಾಟಕ ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ವಿಧೇಯಕ

ಸೋಂಕು ಭೀತಿ: ಹಲವರು ಗೈರಾಗುವ ಸಾಧ್ಯತೆ

ರಾಜ್ಯದಲ್ಲಿ ಕೊರೋನಾ ಸೋಂಕು ತಾರಕಕ್ಕೇರಿದ್ದು ವಿಧಾನಸಭೆ ಹಾಗೂ ವಿಧಾನಪರಿಷತ್‌ ಸದಸ್ಯರಲ್ಲಿ ಶೇ.60ಕ್ಕೂ ಹೆಚ್ಚು ಮಂದಿ 55 ರಿಂದ 60 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಸೋಂಕು ಭೀತಿಯಿಂದ ಗೈರು ಹಾಜರಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಸರ್ಕಾರದಿಂದ ಮಂಡನೆಯಾಗಲಿರುವ ಪ್ರಮುಖ ವಿಧೇಯಕಗಳು ಪಾಸ್‌ ಆದ ಬಳಿಕ ಬಹುತೇಕರು ಗೈರಾಗಲಿದ್ದಾರೆ ಎಂದು ತಿಳಿದು ಬಂದಿದೆ.