Asianet Suvarna News Asianet Suvarna News

ದಿಲ್ಲಿ ರೀತಿ ಬೆಂಗಳೂರಲ್ಲೂ ರೈತರ ಹೋರಾಟ: ವಿಧಾನಸೌಧಕ್ಕೆ ಮುತ್ತಿಗೆ

ಹೋರಾಟ-ಅಧಿವೇಶನ ಆರಂಭವಾಗುವ ಡಿ.7ಕ್ಕೆ ರೈತ ಸಂಘಟನೆಗಳಿಂದ ಪ್ರತಿಭಟನೆ| ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯ ಬಳಿ ಪ್ರತಿಭಟನೆ ತೀವ್ರಗೊಳಿಸಿದ ರೈತರು| ಈ ಪ್ರತಿಭಟನೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ವಿವಿಧ ರೈತ ಪರ ಸಂಘಟನೆಗಳಿಂದ ಬೆಂಬಲ| 

Farmers Will Be Held Protest Against Central Government on Dec 7th grg
Author
Bengaluru, First Published Dec 4, 2020, 12:10 PM IST

ಬೆಂಗಳೂರು(ಡಿ.03): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ವಿಧಾನಮಂಡಲದ ಅಧಿವೇಶನ ಆರಂಭವಾಗುವ ದಿನವಾದ ಡಿ.7ರಂದು ವಿಧಾನಸೌಧ ಮುತ್ತಿಗೆ ಹಾಕಲು ರಾಜ್ಯದ ರೈತ ಸಂಘಟನೆಗಳು ನಿರ್ಧರಿಸಿವೆ.

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ರಾಷ್ಟ್ರ ರಾಜಧಾನಿಯ ಬಳಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ರೈತರ ಈ ಪ್ರತಿಭಟನೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸೇರಿದಂತೆ ವಿವಿಧ ರೈತ ಪರ ಸಂಘಟನೆಗಳು ಬೆಂಬಲ ಘೋಷಿಸಿವೆ. ರೈತರ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ಡಿ.7ರಿಂದ 15ರವರೆಗೆ ನಡೆಯಲಿರುವ ವಿಧಾನಮಂಡಲದ ಅಧಿವೇಶನದುದ್ದಕ್ಕೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ರಾಜ್ಯ ರೈತ ಸಂಘ ಮತ್ತು ಹಸಿರು ಸೇವೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆ ವಿರುದ್ಧ ಮತ್ತು ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕಾರವಾಗಿ ಪರಿಷತ್ತಿನಲ್ಲಿ ಅಂಗೀಕಾರವಾಗದ ಭೂಸುಧಾರಣಾ (ತಿದ್ದುಪಡಿ) ಕಾಯ್ದೆ ಮತ್ತು ಎಪಿಎಂಸಿ (ತಿದ್ದುಪಡಿ) ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾಯ್ದೆಗಳ ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ಡಿ.7ರಂದು ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಅಂದು ಬೃಹತ್‌ ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕನಿಷ್ಠ ಬೆಂಬಲ ಬೆಲೆ ತಂಟೆಗೆ ಸರ್ಕಾರ ಹೋಗಲ್ಲ : ಕೇಂದ್ರ ಸರ್ಕಾರ

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿವೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಹಕ್ಕನ್ನೇ ಕಸಿದುಕೊಳ್ಳಲಿವೆ. ಇದನ್ನು ವಿರೋಧಿಸಿ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತ, ದಲಿತ ಮತ್ತು ಕಾರ್ಮಿಕರ ಐಕ್ಯ ಹೋರಾಟ ಸಮಿತಿಯಿಂದ ಡಿ.7ರಿಂದ 15ವರೆಗೆ ದಿನವೂ ವಿವಿಧ ಮಾದರಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು. ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ರೀತಿಯಲ್ಲಿ ಹೋರಾಟದ ರೂಪರೇಷೆ ಸಿದ್ಧಪಡಿಸಲಿದ್ದೇವೆ. ಅಂದು ನಗರದ ಆನಂದರಾವ್‌ ವೃತ್ತ ಸಮೀಪದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಆರಂಭಿಸಲಾಗುವುದು ಎಂದು ಹೇಳಿದರು.
 

Follow Us:
Download App:
  • android
  • ios