ವಿಧಾನ ಪರಿಷತ್ ಚುನಾವಣೆಯಲ್ಲಿನ ಅಡ್ಡ ಮತದಾನದ ಕುರಿತು ಬಿಜೆಪಿ ಸತ್ಯಶೋಧನಾ ಸಮಿತಿಯು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ. ವರದಿಯಲ್ಲಿ ಅನುಮಾನಾಸ್ಪದ ಶಾಸಕರ ಹೆಸರುಗಳನ್ನು ಗೌಪ್ಯವಾಗಿ ಉಲ್ಲೇಖಿಸಲಾಗಿದ್ದು, ಕಾಂಗ್ರೆಸ್ ಅನೈತಿಕ ಮಾರ್ಗದಿಂದ ಅಡ್ಡ ಮತದಾನ ಮಾಡಿಸಿದೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿನ ಅಡ್ಡ ಮತದಾನ ಸಂಬಂಧ ಆಂತರಿಕ ತನಿಖೆಗಾಗಿ ರಚಿಸಲಾಗಿದ್ದ ಬಿಜೆಪಿಯ ಸತ್ಯಶೋಧನಾ ಸಮಿತಿಯು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಶನಿವಾರ ಮಧ್ಯಂತರ ವರದಿ ಸಲ್ಲಿಸಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಸತ್ಯಶೋಧನಾ ಸಮಿತಿ ಸದಸ್ಯರಾದ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಎನ್.ಮಹೇಶ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮಧ್ಯಂತರ ವರದಿ ಹಸ್ತಾಂತರಿಸಿದರು. ವರದಿಯಲ್ಲಿ ಅಡ್ಡಮತದಾನ ಮಾಡಿದ ಶಾಸಕರ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಬದಲಾಗಿ ಅನುಮಾನಾಸ್ಪದವಾಗಿ ಕಂಡು ಬಂದ ಶಾಸಕರ ಹೆಸರು ಉಲ್ಲೇಖಿಸಿದೆ. ಆ ಶಾಸಕರ ಹೆಸರುಗಳನ್ನು ಗೌಪ್ಯವಾಗಿ ಇರಿಸಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಇತ್ತೀಚೆಗೆ ನಡೆದ ಪರಿಷತ್ ಚುನಾವಣೆ ಸಂದರ್ಭದಲ್ಲಿ ಅಡ್ಡಮತದಾನದ ಆಗಿರುವ ಕುರಿತು ಆಂತರಿಕ ಸತ್ಯಶೋಧನೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಾನೂ ಸೇರಿ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಮಾಜಿ ಸಚಿವ ಎನ್.ಮಹೇಶ್ ಒಳಗೊಂಡ ಸತ್ಯಶೋಧನಾ ಸಮಿತಿ ರಚಿಸಿದ್ದರು. ಅದರಂತೆ ಮೂವರು ಕುಳಿತು ಪರಸ್ಪರ ಚರ್ಚಿಸಿ ಸಹಮತವಿರುವ ಅಂಶಗಳನ್ನಷ್ಟೇ ವರದಿಯಲ್ಲಿ ಉಲ್ಲೇಖಿಸಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಮಧ್ಯಂತರ ವರದಿ ನೀಡಿದ್ದೇವೆ ಎಂದು ಹೇಳಿದರು.
ವೈಯಕ್ತಿಕ ಸಮಾಲೋಚನೆ ನಡೆಸಿದ್ದೇವೆ:
ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಹೆಸರುಗಳನ್ನು ಪಟ್ಟಿ ಮಾಡಿ ವೈಯಕ್ತಿಕ ಸಮಾಲೋಚನೆ ನಡೆಸಿದ್ದೇವೆ. ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಜೆಡಿಎಸ್ ಮುಖಂಡರ ಜೊತೆಗೂ ಸಮಾಲೋಚಿಸಿದ್ದೇವೆ. ಮಾಧ್ಯಮಗಳಿಂದಲೂ ಮಾಹಿತಿ ಸಂಗ್ರಹಿಸಿದ್ದೇವೆ. ಪಕ್ಷದ ಮುಖ್ಯ ಸಚೇತಕ, ವಿರೋಧ ಪಕ್ಷದ ನಾಯಕರೊಂದಿಗೂ ಮಾತನಾಡಿದ್ದೇವೆ. ಈ ಎಲ್ಲದರ ಜೊತೆಗೆ ಸ್ಥಳೀಯವಾಗಿ ಲಭ್ಯವಾದ ಮಾಹಿತಿಗಳನ್ನೊಳಗೊಂಡ ಮಧ್ಯಂತರ ವರದಿ ತಯಾರಿಸಿ ಪಕ್ಷದ ರಾಜ್ಯಾಧ್ಯಕ್ಷರಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
11 ಅಡ್ಡಮತ, 1 ಮತ ಅಸಿಂಧು:
ಈ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ 12 ಮತಗಳು ಅಡ್ಡ ಮತದಾನವಾಗಿವೆ. ಬಿಜೆಪಿಯ ಮೂರು ಮತಗಳು ನೇರವಾಗಿ ಅಡ್ಡ ಮತದಾನವಾಗಿವೆ. ಒಂದು ಮತ ಅಸಿಂಧುವಾಗಿದೆ. ಇನ್ನು ಜೆಡಿಎಸ್ ಅಭ್ಯರ್ಥಿಗೆ 22 ಮತದ ಬದಲು 14 ಬಂದಿವೆ. ಅಂದರೆ ಇಲ್ಲಿ 8 ಮತಗಳು ಅಡ್ಡಮತದಾನವಾಗಿವೆ. ಇದು ಆಂತರಿಕ ತನಿಖೆಯಾಗಿರುವುದರಿಂದ ಈ ಮಧ್ಯಂತರ ವರದಿ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುವುದು ಸೂಕ್ತವಲ್ಲ ಎಂದು ಹೇಳಿದರು.
ಕಾಂಗ್ರೆಸ್ ಅನೈತಿಕ ಮಾರ್ಗದಿಂದ ಅಡ್ಡಮತದಾನ:
ಕಾಂಗ್ರೆಸ್ ಮೇಲಿನ ಅಭಿಮಾನಕ್ಕೆ ಅಡ್ಡ ಮತ ಬಿದ್ದಿವೆ ಎಂದು ಕಾಂಗ್ರೆಸಿಗರು ಭಾವಿಸಬಾರದು. ಅನೈತಿಕ ಮಾರ್ಗದಿಂದ ಈ ಅಡ್ಡ ಮತದಾನ ಮಾಡಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಅಡ್ಡ ಮತದಾನವಾದಾಗ ಕಾಂಗ್ರೆಸ್ ಉಪದೇಶ ಮಾಡುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳ ಅಪಮೌಲ್ಯ ಎಂದು ಹೇಳುತ್ತಾರೆ. ಇನ್ನು ಮುಂದೆ ಬೇರೆ ರಾಜ್ಯಗಳಲ್ಲಿ ಅಡ್ಡ ಮತದಾನವಾದಾಗ ಪ್ರಶ್ನಿಸುವ ನೈತಿಕತೆ ನಿಮಗೆ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಚುನಾವಣೆ ವೇಳೆ ಆಂತರಿಕವಾಗಿ ಎಲ್ಲಿ ಎಚ್ಚರಿಕೆ ವಹಿಸಬೇಕಿತ್ತು, ಎಲ್ಲಿ ಎಚ್ಚರಿಕೆ ವಹಿಸಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಸಂಗತಿಗಳ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರ ನಿರ್ದೇಶನದ ಮೇರೆಗೆ ಕೋರ್ ಕಮಿಟಿಯಲ್ಲಿ ಚರ್ಚಿಸಿ ನಿರ್ಣಯಿಸಲಾಗುತ್ತದೆ. ಈ ನಿರ್ಣಯದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
