ನನ್ನ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ- ಡಾ. ಧನಂಜಯ ಸರ್ಜಿ
ನನ್ನ ಬಗ್ಗೆ ಹೇಳಲು ಅವರಿಗೆ ಬೇರೆ ಏನು ಇಲ್ಲ. ಹೀಗಾಗಿ ರಘುಪತಿ ಭಟ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಧನಂಜಯ್ ಸರ್ಜಿ ತಿರುಗೇಟು ನೀಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.28): ಧನಂಜಯ ಸರ್ಜಿ ಬಿಜೆಪಿ ಪಕ್ಷಕ್ಕೆ ಹೊಸಬನಲ್ಲ, ನಾನು 10 ನೇ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಈಗಲು ಸ್ವಯಂ ಸೇವಕ, ನನ್ನ ಜೀವ ಇರುವ ತನಕ ನಾನು ಸ್ವಯಂ ಸೇವಕ. ಪಕ್ಷದ ಹಿರಿಯರ ತೀರ್ಮಾನ ಅಂತಿಮ ಅದರಂತೆ ಚುನಾಚಣಾ ಕೆಲಸ ಆಗುತ್ತದೆ. ಧನಂಜಯ್ ಸರ್ಜಿ ಬಗ್ಗೆ ಮಾತನಾಲು ರಘುಪತಿ ಭಟ್ ಗೆ ಬೇರೆ ಏನು ವಿಚಾರ ಇಲ್ಲ. ಹೀಗಾಗಿ ನನ್ನ ವಿರುದ್ಧ ಇಲ್ಲದ ಅಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಬಂಡಾಯದ ಅಭ್ಯರ್ಥಿ ರಘುಪತಿ ಭಟ್ ಅವರಿಗೆ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಧನಂಜಯ್ ಸರ್ಜಿ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ರಘು ಪತಿ ಬಟ್ ಅವರು ಮೂರು ಬಾರಿ ಎಂ.ಎಲ್.ಎ ಆಗಿ ಮಾಡಿರುವುದು ಬಿಜೆಪಿ. ಅದು ಅವರಿಗೆ ಗೊತ್ತಿರಲಿ ಎಂದು ಸರ್ಜಿ ಟಾಂಗ್ ನೀಡಿದರು. ನನಗೆ ಟಿಕೆಟ್ ಘೋಷಣೆಯಾದಾಗ ಉಡುಪಿಯಲ್ಲಿ ರಘುಪತಿ ಭಟ್ ಅವರ ಮನೆಗೆ ಹೋದಾಗ ಕೂಡ ಸೌಜನ್ಯಕ್ಕೂ ಅವರು ಮನೆಯ ಒಳಗೆ ಕರೆಯಲಿಲ್ಲ. ಇದು ಅವರೇನು ಎನ್ನುವುದನ್ನು ಸೂಚಿಸುತ್ತದೆ ಎಂದರು. ಧನಂಜಯ್ ಸರ್ಜಿಯಿಂದ ಸರ್ಕಾರ ರಚನೆಯಾಗಲ್ಲ, ಹೀಗಾಗಿ ಅವರ ಸೋಲಿನಿಂದ ಬಿಜೆಪಿಗೆ ನಷ್ಟವಿಲ್ಲ ಎಂದಿದ್ದ ರಘುಪತಿ ಭಟ್ ಹೇಳಿಕೆಗೂ ಗರಂ ಆದ ಧನಂಜಯ ಸರ್ಜಿ ಭಾರತೀಯ ಜನತಾ ಪಾರ್ಟಿ ನಿಂತಿರುವುದು ಕಾರ್ಯಕರ್ತರ ಬಲದಿಂದ. ರಘುಪತಿ ಭಟ್ ಅವರು ಮೂರು ಬಾರಿ ಶಾಸಕರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನಮಗೆ ಬಹಳ ಗೌರವವಿದೆ. ಭಾರತೀಯ ಜನತಾ ಪಾರ್ಟಿಗೆ ಇರೋದು ಒಬ್ಬರೆ ಅಭ್ಯರ್ಥಿ. ಸೂಕ್ತ ಅಭ್ಯರ್ಥಿಯನ್ನ ಸಂಘಟನೆಯ ಹಿರಿಯರು ಸೂಚಿಸಿದ್ದಾರೆ. ಸಾಮಾಜಿಕ, ಆರೋಗ್ಯ ಕ್ಷೇತ್ರದಲ್ಲಿ ದುಡಿದ ಒಳ್ಳೆಯ ಅಭ್ಯರ್ಥಿಯನ್ನ ನಿಲ್ಲಿಸಿದ್ದಾರೆ ಎಂದಿದ್ದಾರೆ.
Breaking: ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಉಚ್ಛಾಟನೆ
ರಘುಪತಿ ಭಟ್ ಹೇಳ್ತಾರೆ ನಾನು ಕಾಂಗ್ರೆಸ್ ಪಕ್ಷದಿಂದ ಬಂದಿದ್ದೇನೆ ಅಂತ. ಆದರೆ ನಾನು ಬಿಜೆಪಿ ಬರೋ ಮುಂಚಿತವಾಗಿ ಸಂಘಟನೆಯಲ್ಲಿ ಇದ್ದವನು. ಕಾಂಗ್ರೆಸ್ ನಿಂದ ಟಿಕೆಟ್ ನೀಡುತ್ತೇವೆ ಅಂತ ಬಹಳ ಒತ್ತಡ ಇತ್ತು. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಯಾವುದಕ್ಕೂ ಮಣಿಯದೆ ಬಿಜೆಪಿಯಲ್ಲಿ ಇದ್ದೇನೆ. ನನ್ನ ಬಗ್ಗೆ ಹೇಳಲು ಅವರಿಗೆ ಬೇರೆ ಏನು ಇಲ್ಲ. ಹೀಗಾಗಿ ರಘುಪತಿ ಭಟ್ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಧನಂಜಯ್ ಸರ್ಜಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಕೊಲೆಯ ಸಂದರ್ಭ ಧನಂಜಯ ಸರ್ಜಿ ಸೌಹಾರ್ದ ನಡಿಗೆ ನಡೆಸಿ ಸಂಘ ಪರಿವಾರದ ವಿರುದ್ಧವೇ ಕೆಲಸ ಮಾಡಿದ್ದರು. ಅಂತವರಿಗೆ ಟಿಕೆಟ್ ನೀಡಲಾಗಿದೆ ಎಂದು ರಘಪತಿ ಭಟ್ ಹೇಳಿದ್ದಾರೆ.
ರಾಷ್ಟ್ರೀಯವಾದ, ಹಿಂದುತ್ವ ಪಾಲಿಸುವವರ ಮೂಲೆಗುಂಪು: ರಘುಪತಿ ಭಟ್ ಅಸಮಾಧಾನ
ಆದರೆ ಹರ್ಷ ಕೊಲೆ ಪ್ರಕರಣದಲ್ಲಿ ಗೊಂದಲದಿಂದ ಅಲ್ಲಿನ ವ್ಯಾಪಾರ ವಹಿವಾಟು ಎಲ್ಲವೂ ಸ್ಥಗಿತವಾಗಿತ್ತು. ಹೀಗಾಗಿ ಶಾಂತಿಗಾಗಿ ಮೆರವಣಿಗೆ ಜವಬ್ದಾರಿ ಹೊತ್ತಿದೆ ಅಷ್ಟೇ. ಇದರಲ್ಲಿ ಸಾಧು ಸಂತರು ಹಾಗೂ ನ್ಯಾಯಧೀಶರು ಭಾಗಿಯಾಗಿದ್ರು. ಒಬ್ಬ ವೈದ್ಯನಾಗಿ ಆ ವಿಚಾರದಲ್ಲಿ ಭಾಗಿಯಾಗಿದ್ದೆ ಎನ್ನುವುದು ನಿಜ. ಆದರೆ ಇದನ್ನೆ ನಾನು ಹಿಂದು ವಿರೋಧಿ ಅಂತ ಹೇಳೋದು ಸರಿಯಲ್ಲ. ನನ್ನ ವಿರುದ್ಧ ಏನೂ ಮಾಡಲು ಆಗಿಲ್ಲ ಅಂದಾಗ ಅವರಿಗೆ ಉಳಿಯೋದು ಒಂದೆ ಅದು ನನ್ನ ವಿರುದ್ಧ ಅಪಪ್ರಚಾರ. ಅದನ್ನು ರಘುಪತಿ ಭಟ್ ಮಾಡುತ್ತಿದ್ದಾರೆ. ಧನಂಜಯ್ ಸರ್ಜಿಯ ಸೇವೆ ಏನೆಂಬುದು ಕ್ಷೇತದ ಜನತೆಗೆ ಗೊತ್ತಿದೆ. ಅವರಿಗೆ ಉತ್ತರವನ್ನ ಚುನಾವಣೆಯ ಮೂಲಕ ನೀಡ್ತೇವೆ. ಅತ್ಯಧಿಕ ಮತದಿಂದ ನಾವು ಗೆಲವು ಸಾಧಿಸುತ್ತೇವೆ ಎಂದು ರಘುಪತಿ ಭಟ್ ಗೆ ಧನಂಜಯ್ ಸರ್ಜಿ ಟಾಂಗ್ ನೀಡಿದ್ದಾರೆ.