ಕಾಂಗ್ರೆಸ್‌ ಪಾಲಿಗೆ ಇದು ಬೂಸ್ಟರ್‌ ಡೋಸ್‌ -  ನಾಯಕರಿಗೆ ಹೊಸ ಚೈತನ್ಯ  ವಿಪಕ್ಷದಲ್ಲಿದ್ದರೂ 11 ಸ್ಥಾನಗಳಲ್ಲಿ ಗೆಲುವು ಕಾಂಗ್ರೆಸ್‌ ನಾಯಕರಿಗೆ ಹೊಸ ಚೈತನ್ಯ  ಟಿಕೆಟ್‌ ಹಂಚಿಕೆ ವೇಳೆ ಸ್ಥಳೀಯ ನಾಯಕರಿಗೆ ಮನ್ನಣೆ ನೀಡಿದ ತಂತ್ರಗಾರಿಕೆಗೆ ಫಲ

ಬೆಂಗಳೂರು (ಡಿ.15):  ಕಳೆದ ಬಾರಿಗೆ ಹೋಲಿಸಿದರೆ ಮೂರು ಸ್ಥಾನ ಕಳೆದುಕೊಂಡಿದ್ದರೂ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ (Congress) ನಾಯಕರ ಪಾಲಿಗೆ ಬೂಸ್ಟರ್‌ ಡೋಸ್‌ನಂತೆ ಭಾಸವಾಗುತ್ತಿದೆ. 25 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ (Election) ಕಳೆದ ಬಾರಿ ಕಾಂಗ್ರೆಸ್‌ 14 ಸ್ಥಾನ ಗಳಿಸಿತ್ತು. ಈ ಬಾರಿ ಮೂರು ಸ್ಥಾನ ಕಡಿಮೆಯಾಗಿ ಪಕ್ಷದ ಒಟ್ಟಾರೆ ಗಳಿಕೆ 11 ಆಗಿದೆ. ಆದಾಗ್ಯೂ ಈ ಫಲಿತಾಂಶ ಕಾಂಗ್ರೆಸ್‌ ವಲಯದಲ್ಲಿ ಹೊಸ ಉತ್ಸಾಹ ತುಂಬಿದೆ. ಏಕೆಂದರೆ, 14 ಸ್ಥಾನ ಗಳಿಸಿದಾಗ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಈಗ ಪ್ರತಿಪಕ್ಷದಲ್ಲಿದೆ.

ಹೀಗಾಗಿಯೇ, 15 ಸ್ಥಾನ ಗೆಲ್ಲುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದರೂ 8 ರಿಂದ 10 ಸ್ಥಾನ ಜಯಗಳಿಸುವ ವಿಶ್ವಾಸವಷ್ಟೇ ಕಾಂಗ್ರೆಸ್‌ ನಾಯಕರಿಗೆ ಇತ್ತು. ಆದರೆ, 11 ಸ್ಥಾನಗಳಲ್ಲಿ ಭರ್ಜರಿ ಜಯ ಗಳಿಸಿದೆ. ಚಿಕ್ಕಮಗಳೂರು (Chikkamagaluru) ಹಾಗೂ ಕೊಡಗು (Kodagu) ಕ್ಷೇತ್ರದಲ್ಲಿ ವೀರೋಚಿತ ಸೋಲು ಕಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಚುನಾವಣೆಗೆ (Election) ಪಕ್ಷದ ನಾಯಕರು ರೂಪಿಸಿದ್ದ ಕಾರ್ಯತಂತ್ರ ತಕ್ಕಮಟ್ಟಿಗೆ ಯಶ ನೀಡಿದೆ. ಇದು ಕಾಂಗ್ರೆಸ್‌ ನಾಯಕರಿಗೆ ಹೊಸ ಚೈತನ್ಯ ನೀಡಿದೆ.

ಚುನಾವಣೆ ನಡೆದ 25 ಕ್ಷೇತ್ರಗಳ ಪೈಕಿ ಎರಡು ಸ್ಥಾನಗಳಿಗೆ ಸ್ಪರ್ಧಿಸುವ ಅವಕಾಶವಿದ್ದ 5 ಕ್ಷೇತ್ರಗಳಲ್ಲಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ತೀರ್ಮಾನವನ್ನು ಕೈಗೊಂಡಿತು. ಇದರ ಪರಿಣಾಮವಾಗಿ ಈ ಐದು ಕ್ಷೇತ್ರಗಳಲ್ಲಿಯೂ (ಬೆಳಗಾವಿ, ಧಾರವಾಡ, ವಿಜಯಪುರ, ಮೈಸೂರು ಹಾಗೂ ಮಂಗಳೂರು) ಕಾಂಗ್ರೆಸ್‌ (Congress) ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದೆ. ಇನ್ನು ಪಕ್ಷದ ನಾಯಕರು ತಮ್ಮೊಳಗಿನ ಭಿನಾಭಿಪ್ರಾಯಗಳನ್ನು ಈ ಚುನಾವಣೆ ಮಟ್ಟಿಗೆ ಬದಿಗಿಟ್ಟು ಪಕ್ಷದ ಗೆಲುವಿಗಾಗಿ ಒಗ್ಗಟ್ಟು ಸಾಧಿಸಿದ್ದರು. ಅಭ್ಯರ್ಥಿ ಆಯ್ಕೆ ವೇಳೆ ಪ್ರಮುಖ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕೆಲ ಅಭ್ಯರ್ಥಿಗಳಿಗೆ ಟಿಕೆಟ್‌ ದೊರಕಿಸಿಕೊಡುವಲ್ಲಿ ಲಾಬಿ ನಡೆಸಿದರೂ ಹೆಚ್ಚಿನ ಅಭ್ಯರ್ಥಿಗಳ ಆಯ್ಕೆ ವೇಳೆ ಸ್ಥಳೀಯ ನಾಯಕರ ಮಾತಿಗೆ ಮನ್ನಣೆ ನೀಡಿದ್ದಾರೆ. ಇದು ಫಲ ನೀಡಿದೆ.

ಇದೆಲ್ಲದರ ಜತೆಗೆ ಕುಟುಂಬ ರಾಜಕಾರಣ ಅಥವಾ ದುಡ್ಡಿದ್ದವರಿಗೆ ಟಿಕೆಟ್‌ ನೀಡುತ್ತಾರೆ ಎಂಬ ಟೀಕೆಗಳಿಗೆ ಮನ್ನಣೆ ನೀಡದೆ ಗೆಲುವೊಂದನ್ನೇ ಮಾನದಂಡ ಮಾಡಿಕೊಂಡು ಟಿಕೆಟ್‌ (Ticket) ಹಂಚಿಕೆ ಮಾಡಿದ್ದು ಕಾಂಗ್ರೆಸ್‌ ಉತ್ತಮ ಫಲಿತಾಂಶ ಕಾಣಲು ಕಾರಣವಾಗಿದೆ.

ಕಾಂಗ್ರೆಸ್‌ ಕಳೆದ ಬಾರಿ ಗೆದ್ದಿದ್ದ ಕ್ಷೇತ್ರಗಳ ಪೈಕಿ ಬಳ್ಳಾರಿ, ಶಿವಮೊಗ್ಗ (Shivamogga), ಚಿತ್ರದುರ್ಗ, ಉತ್ತರ ಕನ್ನಡ, ಬೆಂಗಳೂರು ನಗರ, ಹಾಸನ ಹಾಗೂ ವಿಜಯಪುರ (ಕಳೆದ ಬಾರಿ ಈ ಕ್ಷೇತ್ರದ ಎರಡೂ ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿತ್ತು. ಈ ಬಾರಿ ಒಂದೇ ಸ್ಥಾನಕ್ಕೆ ಸ್ಪರ್ಧಿಸಿತ್ತು) ಕಳೆದುಕೊಂಡಿದೆ. ಕಳೆದ ಬಾರಿ ಜೆಡಿಎಸ್‌ ಗೆದ್ದಿದ್ದ ಮೂರು ( ಮಂಡ್ಯ, ತುಮಕೂರು ಹಾಗೂ ಕೋಲಾರ) ಹಾಗೂ ಬಿಜೆಪಿಯ ಒಂದು (ಬೆಳಗಾವಿ) ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಲಾಬಿ ನಡೆಸಿ ಟಿಕೆಟ್‌ ಕೊಡಿಸಿದ್ದ ಬೆಳಗಾವಿಯ (Belagavi) ಚೆನ್ನರಾಜ ಹಟ್ಟಿಹೊಳಿ ಹಾಗೂ ಸಹೋದರ ಸಂಬಂಧಿ ಬೆಂಗಳೂರು ಗ್ರಾಮಾಂತರದ ಎಸ್‌.ರವಿ ಅವರನ್ನು ಗೆಲ್ಲಿಸಿಕೊಂಡಿದ್ದಾರೆ. ಆದರೆ, ಬೆಂಗಳೂರು ನಗರದಲ್ಲಿ ಕೆಜಿಎಫ್‌ ಬಾಬು ಹಾಗೂ ಕೊಡಗಿನಲ್ಲಿ ಮಂಥರ್‌ ಗೌಡಗೆ ಟಿಕೆಟ್‌ ಕೊಡಿಸಿದ್ದರೂ ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ಬಳ್ಳಾರಿ ಹಾಗೂ ಕಲಬುರಗಿಯಲ್ಲಿ ತಮ್ಮ ಆಪ್ತರಾದ ಕ್ರಮವಾಗಿ ಕೆ.ಸಿ. ಕೊಂಡಯ್ಯ ಹಾಗೂ ಶಿವಾನಂದ ಪಾಟೀಲ್‌ ಮರ್ತೂರು ಅವರಿಗೆ ಟಿಕೆಟ್‌ ಕೊಡಿಸಿದ್ದರೂ ಇಬ್ಬರೂ ಸೋತಿದ್ದಾರೆ. ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಡಿ. ತಿಮ್ಮಯ್ಯ ಅವರಿಗೆ ಟಿಕೆಟ್‌ ಕೊಡಿಸಿದ್ದು, ಗೆಲ್ಲಿಸಿಕೊಂಡು ಬಂದಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರ ಆಯ್ಕೆಯಂತೆ ಟಿಕೆಟ್‌ ಹಂಚಿಕೆ ಮಾಡಲಾಗಿತ್ತು. ಇದು ಫಲ ನೀಡಿದೆ.