ಸಿಎಂ ಬದಲಾವಣೆ ಕುರಿತ ಚರ್ಚೆಗಳು ಅಪ್ರಸ್ತುತ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ. ಸಿಎಂ ಮತ್ತು ಡಿಸಿಎಂ ಇಬ್ಬರೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಅವರು ತಿಳಿಸಿದರು. ಮಾಧ್ಯಮಗಳೇ ಈ ವಿಚಾರವನ್ನು ಚರ್ಚೆಗೆ ತಂದಿವೆ ಎಂದು ಅವರು ಹೇಳಿದರು.
ಹುಬ್ಬಳ್ಳಿ: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಕುರಿತಂತೆ ನಡೆದಿರುವ ಚರ್ಚೆಗಳ ಕುರಿತು ಮಾತನಾಡಿದ ಎಪಿಎಂಸಿ ಹಾಗೂ ಕೈಮಗ್ಗ ಜವಳಿ ಸಚಿವ ಶಿವಾನಂದ ಪಾಟೀಲ್ ಅವರು, “ಸಿಎಂ ಬದಲಾವಣೆ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮಾತುಗಳ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಅವಕಾಶವಿಲ್ಲ,” ಎಂದು ತಿಳಿಸಿದರು.
ಸಿಎಂ ಬದಲಾವಣೆ ಕುರಿತು ಸಿಎಂ ಮತ್ತು ಡಿಸಿಎಂ ಇಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಈ ಸಂದರ್ಭದಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆ ಅಪ್ರಸ್ತುತವಾಗಿದೆ,” ಎಂದು ಅವರು ಹೇಳಿದರು.
ಇತ್ತೀಚೆಗೆ ಸಚಿವ ಮಹೇದೇವಪ್ಪ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೂಳಿ ಭೇಟಿ ನೀಡಿದ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಶಿವಾನಂದ ಪಾಟೀಲ್, “ಅವರು ಭೇಟಿಯಾದದ್ದು ಮತ್ತು ಅವರು ಏನು ಮಾತನಾಡಿದ್ರು ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಅವರು ತಾವೇ ಸೂಕ್ತ ವ್ಯಕ್ತಿಗಳು. ನಾನು ಅದರಲ್ಲಿ ಮಾತನಾಡುವುದಿಲ್ಲ,” ಎಂದರು.
ಸಿಎಂ ಬದಲಾವಣೆ ವಿಚಾರ ಮಾಧ್ಯಮವೇ ಚರ್ಚೆಗೆ ತಂದಿದ್ದು, ಅದಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು. “ಸಿಎಂ ಬದಲಾವಣೆ ಆಗುತ್ತಿದೆ ಎಂದು ನಾನು ಭವಿಷ್ಯವಾಣಿ ಹೇಳಲು ಸಾಧ್ಯವಿಲ್ಲ,” ಎಂದು ಅವರು ಹೇಳಿದರು.
ಡಿ.ಕೆ. ಶಿವಕುಮಾರ್ ಪರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, “ಡಿಸಿಎಂ ಶಿವಕುಮಾರಿಗೆ ಶಾಸಕರ ಬೆಂಬಲ ಇಲ್ಲ ಎಂಬ ಸಿಎಂ ಹೇಳಿಕೆ ಕುರಿತು ನನಗೆ ಮಾಹಿತಿ ಇಲ್ಲ. ಸಿಎಂ ಏನಾದರೂ ಹೇಳಿದರೆ, ಅದು ಅವರ ವೈಯಕ್ತಿಕ ಅಭಿಪ್ರಾಯ,” ಎಂದರು.
ಪವರ್ ಬದಲಾವಣೆಯ ಕುರಿತು ಸಂಬಂಧಪಟ್ಟವರು ತಾವೇ ಮಾತನಾಡುತ್ತಿರುವುದಾಗಿ ತಿಳಿಸಿದ ಅವರು, “ಸಿಎಂ ಮತ್ತು ಡಿಸಿಎಂ ಶೀಘ್ರದಲ್ಲೇ ತಮ್ಮ ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ಹಲವು ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ,” ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಶಾಸಕರ ಅಹವಾಲುಗಳನ್ನು ಆಲಿಸಿದ್ದಾರೆಂದು ತಿಳಿಸಿದ ಸಚಿವ ಶಿವಾನಂದ ಪಾಟೀಲ್, “ಬಹುತೇಕ ಶಾಸಕರು ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಆದರೆ ಯಾವುದೇ ರೀತಿಯ ಸಚಿವರ ಬಗ್ಗೆ ನೇರವಾಗಿ ದೂರು ನೀಡಿಲ್ಲ. ಕೆಲ ಶಾಸಕರು ಮಾತ್ರ ಕೆಲವು ಸಚಿವರ ಕುರಿತು ದೂರು ನೀಡಿದ್ದಾರೆ. ಆದರೆ ಇದುವರೆಗೆ ಸುರ್ಜೇವಾಲಾ ಯಾರನ್ನೂ ಚರ್ಚೆಗೆ ಕರೆದಿಲ್ಲ. ಮುಂದಿನ ದಿನಗಳಲ್ಲಿ ಅವರು ಮತ್ತೊಮ್ಮೆ ಶಾಸಕರನ್ನು ಕರೆದು ಚರ್ಚೆ ನಡೆಸುವ ಸಾಧ್ಯತೆ ಇದೆ,” ಎಂದರು.
