ವಾಲ್ಮೀಕಿ ನಿಗಮದ ಬಹುಕೋಟಿ ಹಣ ಗುಳುಂ: ಈ ಪ್ರಕರಣದಲ್ಲಿ ಯಾರನ್ನ ಬಿಡುವುದಿಲ್ಲ: ಪ್ರಿಯಾಂಕ್ ಖರ್ಗೆ
ನೀವು ಆಡಳಿತದಲ್ಲಿ ಇದ್ರಲ್ರಿ, ನಿಮ್ಮ ಸರ್ಕಾರದ ಅವಧಿಯಲ್ಲಿ ಏನೆಲ್ಲ ಆಯ್ತು ಯಾಕೆ ಸುಮ್ನನೆ ಇದ್ರಿ ಆಗ? ಆಗ ಸುಮ್ಮನಿದ್ದು ಈಗ ಮಾತಾಡ್ತೀರಾ? ಎಂದು ಶಾಸಕ ಯತ್ನಾಳ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಕಲಬುರಗಿ (ಜೂ.1): 'ನೀವು ಆಡಳಿತದಲ್ಲಿ ಇದ್ರಲ್ರಿ, ನಿಮ್ಮ ಸರ್ಕಾರದ ಅವಧಿಯಲ್ಲಿ ಏನೆಲ್ಲ ಆಯ್ತು ಯಾಕೆ ಸುಮ್ನನೆ ಇದ್ರಿ ಆಗ? ಆಗ ಸುಮ್ಮನಿದ್ದು ಈಗ ಮಾತಾಡ್ತೀರಾ? ಎಂದು ಶಾಸಕ ಯತ್ನಾಳ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ಸಂಬಂಧ ಯತ್ನಾಳ್ ಹೇಳಿಕೆ ಬಗ್ಗೆ ಇಂದು ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಿಮ್ಮ ಸರ್ಕಾರದಲ್ಲಿ ಪಿಎಸ್ ಐ ಹಗರಣ, ಬಿಟ್ ಕಾಯಿನ್ ಹಗರಣ, ಗಂಗಾ ಕಲ್ಯಾಣ ಹಗರಣ ನಡೆದಾಗ ನೀವೇಲ್ಲಿದ್ರಿ, ನೀವ್ಯಾಕೆ ಸುಮ್ಮನಿದ್ರಿ? ಆ ಸಂದರ್ಭದಲ್ಲಿ ನೀವೇ ರಾಜೀನಾಮೆ ಕೊಡಬೇಕಿತ್ತಲ್ಲಾ ಯತ್ನಾಳರೇ? ಅಷ್ಟಕ್ಕೂ ಈಗ ನಡೆದಿರುವ ಪ್ರಕರಣದಲ್ಲಿ ಯಾರಿಗೂ ರಕ್ಷಣೆ ಕೊಡುವ ಮಾತೇ ಇಲ್ಲ ಅಂತ ನಮ್ಮ ನಾಯಕರು ಹೇಳಿದ್ದಾರೆ. ಸಚಿವ ನಾಗೇಂದ್ರ ರಾಜೀನಾಮೆ ತಗೊಳ್ಳೋದು ಬಿಡೋದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಆದ್ರೆ ಈಶ್ವರಪ್ಪ ಪ್ರಕರಣವೇ ಬೇರೆ. ಎಲ್ಲಾ ರೀತಿ ತನಿಖೆಗೆ ನಾವು ಸುಮ್ಮನಿದ್ದೇವೆ ಎಂದರು.
ಸಿಎಂ, ಡಿಸಿಎಂ ಇಂದು ನ್ಯಾಯಲಯಕ್ಕೆ ಹಾಜರಾಗಿ ಬೇಲ್ ತಗೊಳ್ತಾರೆ. ನಾವು ಇದ್ದಿದ್ದು ಇದ್ದಂಗೆ ಹೇಳಿದ್ದಕ್ಕೆ ಬಿಜೆಪಿಯವರು ಮಾನಹಾನಿ ಕೇಸ್ ಹಾಕಿದ್ದಾರೆ. ಪತ್ರಿಕೆಯಲ್ಲಿ ಬಂದ ವರದಿ ಆಧರಿಸಿ ನಾವು ಜಾಹೀರಾತು ನೀಡಿದ್ದೆವು. ಅವರು ಬಹಳ ಮನನೊಂದು ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ನಾವು ಕಾನೂನು ಮೂಲಕ ಎದುರಿಸುತ್ತೇವೆ. ರಾಹುಲ್ ಗಾಂಧಿ ಇವತ್ತು ಕೋರ್ಟ್ ಬರೋದಿಲ್ಲ. ದೆಹಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಮಹತ್ವದ ಸಭೆ ಇರೋದ್ರಿಂದ ಬರೋದಿಲ್ಲ. ಅದಕ್ಕಾಗಿ ಅವರು ಅವರ ವಕೀಲ ಮೂಲಕ ನ್ಯಾಯಾಲಯಕ್ಕೆ ಮಾಹಿತಿ ನೀಡ್ತಾರೆ ಎಂದರು.