Karnataka Politics: ಸಿದ್ದು ಹಾಡಿ ಹೊಗಳುತ್ತಲೇ ಸರಿಯಾದ ಗುದ್ದು ನೀಡಿದ ಸಿಸಿ ಪಾಟೀಲ್!
* ರಾಜ್ಯ ರಾಜಕಾರಣದಲ್ಲಿ ಹೇಳಿಕೆಗಳ ಸಮರ
* ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸಿಸಿ ಪಾಟೀಲ್
* ಆಗ ಸೇರಿಸಿಕೊಳ್ಳುವುದೇ ಇಲ್ಲ ಎಂದು ಹೇಳಿದ್ದು ಯಾರು
* ಸಲ್ಲದ ಹೇಳಿಕೆ ಕೊಟ್ಟು ಜನರನ್ನು ಗೊಂದಲದಲ್ಲಿ ಇಡಬಾರದು
ಬಾಗಲಕೋಟೆ(ಜ. 26) ರಾಜ್ಯ ರಾಜಕಾರಣದಲ್ಲಿ (Karnataka Politics) ಮತ್ತೆ ಪಕ್ಷಾಂತರದ ಗುಲ್ಲು ಎದ್ದಿರುವಾಗ ನಾಯಕರ ನಡುವೆ ವಾಕ್ ಸಮರಕ್ಕೂ ವೇದಿಕೆ ಸಿಕ್ಕಿದೆ. ಮಾಜಿ ಸಿಎಂ (Siddaramaiah) ಸಿದ್ದರಾಮಯ್ಯಗೆ ಸಚಿವ ಸಿ.ಸಿ. ಪಾಟೀಲ್ ಟಾಂಗ್ ನೀಡಿದ್ದಾರೆ. ಬಾಗಲಕೋಟೆಯಲ್ಲಿ (Bagalakote) ಮಾತನಾಡಿದ ಸಿಸಿ (CC Patil) ಪಾಟೀಲ್ ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗದ ಉತ್ತರ ನೀಡಿದರು.
ಯಾವ ಕಾರಣಕ್ಕೂ ಅವರನ್ನ ವಾಪಸ್ ತಗೊಳೋದಿಲ್ಲ ಅಂತ ಹೇಳಿದ್ದು ಯಾರು..? ಬಿಟ್ಟು ಹೋದವರನ್ನ ವಾಪಸ್ ತಗೊಳೋದಿಲ್ಲ ಅಂತ ಗುದ್ದಿ ಹೇಳಿದವರು ಯಾರು? ಬಿಟ್ಟು ಹೋದವನ್ನ ಯಾವ ಕಾಲಕ್ಕೂ ವಾಪಸ್ ತಗೋಳೋದಿಲ್ಲ ಅಂತ ಇದೇ ಸಿದ್ದರಾಮಯ್ಯ ಹೇಳಿದ್ದರು. ಇನ್ನೂ ಒಂದು ವರ್ಷ ಆಗಿಲ್ಲ, ಈಗ ಹೀಗೆ ಹೇಳ್ತಾರೆ ಅಂದ್ರೆ ಅವರ ಅನಿವಾರ್ಯತೆ ಎಷ್ಟಿದೆ ಅವರ ಅಭದ್ರತೆ ಎಷ್ಟಿದೆ ಅಂತ ನೀವೇ ವಿಚಾರ ಮಾಡಿ. ವಾಪಸ್ ಹೋಗೋ ಬಗ್ಗೆ ನನಗೇನೂ ಸಂಶಯ ಇಲ್ಲಪ್ಪ ಎಂದರು.
ಕಾಂಗ್ರೆಸ್ ಸೇರುವವರಿಗೆ ಬಹಿರಂಗ ಆಹ್ವಾನ ನೀಡಿದ ಸಿದ್ದರಾಮಯ್ಯ
ಮಾನ್ಯ ಸಿದ್ದರಾಮಯ್ಯನವರು ಈ ರಾಜ್ಯದ ಒಬ್ಬ ಹಿರಿಯ ನಾಯಕರು. ಅವರ ಮಾತಿಗೆ ಬೆಲೆ ಇರುತ್ತೆ, ಗೌರವ ಇರುತ್ತೆ, ಅವರು ಅನುಭವಿ ನಾಯಕರು.ಸುಮ್ನೆ ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಅಂದ್ರೆ ಹೇಗೆ? ನಾನು ನೀವೇ ನನ್ನ ಸಂಪರ್ಕದಲ್ಲಿ ಇದ್ದೀರಿ ಅಂತ ಹೇಳ್ತೀನಿ.. ಸುಮ್ನೆ ಹೇಳೋಕೆ ಏನು ಹೋಗುತ್ತೆ? ಆದ್ರೆ ನಾನು ಸಿದ್ದರಾಮಯ್ಯನವರಿಗೆ ಗೌರವ ಕೊಡ್ತೇನೆ, ಅವರ ವಯಸ್ಸಿಗೆ, ಆಡಳಿತಕ್ಕೆ. ಸುಮ್ನೆ ಹೇಳಿ ರಾಜ್ಯದ ಜನರನ್ನು ಗೊಂದಲಕ್ಕೆ ದೂಡುವ ಕೆಲಸ ಮಾಡಬಾರದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ವಿಚಾರದ ಬಗ್ಗೆಯೂ ಮಾತನಾಡಿದ ಸಿಸಿ ಪಾಟೀಲ್, ಆಡಳಿತ ವ್ಯವಸ್ಥೆಯಲ್ಲಿ ಚುರುಕುಗೊಳಿಸಲು ಸಚಿವರಿಗೆ ಸ್ವಂತ ಜಿಲ್ಲೆ ಬಿಟ್ಟು ಬೇರೆ ಕಡೆ ಉಸ್ತುವಾರಿ ಕೊಟ್ಟಿದ್ದಾರೆ. ರಾಜ್ಯದಲೇ ಪ್ರಥಮ ಬಾರಿಗೆ ಸ್ವಂತ ಜಿಲ್ಲೆಗಳನ್ನ ಬಿಟ್ಟು ಬೇರೆ ಜಿಲ್ಲೆಗಳ ಉಸ್ತುವಾರಿ ಕೊಟ್ಟಿದ್ದಾರೆ. ಈ ಬಾರಿ ಉಸ್ತುವಾರಿ ಸಚಿವರ ನೇಮಕಾತಿ ಹೊಸ ಪ್ರಯೋಗ ಮಾಡಲಾಗಿದೆ. ಬಹಳ ದಿನಗಳಿಂದ ಜಿಲ್ಲೆಯಲ್ಲಿ ಸಭೆಗಳು ಆಗಿಲ್ಲ. ಶೀಘ್ರದಲ್ಲೇ ಕೆಡಿಪಿ ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಬಾಗಲಕೋಟೆ ಉಸ್ತುವಾರಿ ಸಚಿವನಾಗಿ ಹೊಣೆಗಾರಿಕೆ ಇದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಲೋಕೋಪಯೋಗಿ ಸಚಿವರು ತಿಳಿಸಿದರು. ರಮೇಶ್ ಜಾರಕಿಹೊಳಿ ಸಮರ್ಥರು: ರಮೇಶ್ ಜಾರಕಿಹೊಳಿ ಒಬ್ಬ ಸಮರ್ಥ ನಾಯಕರು. ಅವರು ಬಿಜೆಪಿಗೆ ಎಷ್ಟು ಜನರನ್ನು ಬೇಕಾದರೂ ಕರೆ ತರಬಹುದು. ಅವರಲ್ಲಿ ಆ ಶಕ್ತಿ ಇದೆ. ಅವರು ಎಷ್ಟು ಜನ ಶಾಸಕರನ್ನು ಬೇಕಾದರೂ ಕರೆತರಬಹುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಬೆಳಗಾವಿ ಗಣರಾಜ್ಯೋತ್ಸವ ಸಂಬರ್ಭದಲ್ಲಿ ಧ್ವಜಾರೋಹಣದ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾರಜೋಳ,. ರಮೇಶ್ ಜಾರಕಿಹೊಳಿ ಒಬ್ಬ ಹಿರಿಯ ರಾಜಕಾರಣಿಗಳು. ಮಾಜಿ ಮಂತ್ರಿ ಹಾಗೂ ಅನುಭವಿ ರಾಜಕಾರಣಿ. ಅವರ ಸಂಪರ್ಕದಲ್ಲಿ ಎಷ್ಟೋ ಜನ ಶಾಸಕರು ಇರಬಹುದು. ಆದರೆ ಆವಿಷಯದ ಬಗ್ಗೆ ನನಗೆ ಗೊತ್ತಿಲ್ಲ.ಆದರೆ ಅವರಲ್ಲಿ ಆ ತಾಕತ್ತಿದೆ. ಆಶಕ್ತಿ ಇದೆ. ಅವರು ಶಾಸಕರನ್ನು ಬಿಜೆಪಿ ಕರೆದುಕೊಂಡು ಬರಬಹುದು ಎಂದರು.
ರಮೇಶ್ ಜಾರಕಿಹೊಳಿ ರಾಜಕೀಯದಲ್ಲಿ ಶಕ್ತಿ ಇರುವ ನಾಯಕರು. ಅವರ ಜೊತೆ ಸಂಪರ್ಕದಲ್ಲಿರುವುವವರು ಬಿಜೆಗೆ ಬರಬಹುದು ಎಂದು ಆಹ್ವಾನ ನೀಡಿದರು. ಆದರೆ ಈ ಕುರಿತಂತೆ ಎಷ್ಟು ಜನ ಶಾಸಕರು ಅವರ ಸಂಪರ್ಕದಲ್ಲಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ ಬಿಜೆಪಿ ಎಲ್ಲರ ಶಕ್ತಿಯನ್ನು ಬಳಸಿಕೊಳ್ಳಲು ಸಮರ್ಥವಿದೆ ಎಂದರು.