ಬೆಂಗಳೂರು, (ಡಿ.16): ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್ ವಿಚಾರವಾಗಿ ಬಿಜೆಪಿ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ ಉಪಯೋಗಿಸಲು ಮುಂದಾಗಿದೆ.

ಬಿಜೆಪಿಯವರು ಏನು ಮಾಡ್ತಾರೋ ಅದನ್ನೇ ನಾವೂ ಮಾಡುತ್ತೇವೆ. ಅವರು ಕಾನೂನು ಹೋರಾಟ ಮಾಡಿದರೇ, ನಾವೂ ಕಾನೂನು ಹೋರಾಟಕ್ಕೆ ಸಿದ್ಧ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಹೇಳಿದ್ದಾರೆ.

ಸಭಾಪತಿ ಬರಬಾರದೆಂದು ಬಾಗಿಲು ಹಾಕಿದ್ದು ಗುಂಡಾಗಿರಿ ಅಲ್ವಾ.? ಬಿಜೆಪಿಗೆ ಸಿದ್ದು ಗುದ್ದು..!

ಬಿಜೆಪಿಯವರು ಯಾವ ಅಸ್ತ್ರ ಪ್ರಯೋಗಿಸುತ್ತಾರೋ ಕಾದು ನೋಡಿ ಅದಕ್ಕೆ ಪ್ರತ್ಯಸ್ತ್ರ ಪ್ರಯೋಗಿಸುತ್ತೇವೆ. ಪರಿಷತ್​ನಲ್ಲಿ ನಡೆದ ರಾದ್ಧಾಂತದ ಹಿನ್ನೆಲೆಯಲ್ಲಿ ಮುಂದಿನ ಹೋರಾಟ ಏನಿದ್ದರೂ ಬಿಜೆಪಿ ನಡೆ ಆಧರಿಸಿ ತೀರ್ಮಾನ ಎಂಬ ಸಂದೇಶ ಸಿದ್ದರಾಮಯ್ಯ ರವಾನಿಸಿದರು. ಆ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಹೆಜ್ಜೆ ಮುಂದಿಡುವವರೆಗೂ ಕಾದು ನೋಡುವ ತಂತ್ರಕ್ಕೆ ಕಾಂಗ್ರೆಸ್ ಮೊರೆ ಹೋಗಿದೆ.

ಸದನದದೊಳಗೆ ನಡೆಯುವ ವಿದ್ಯಮಾನಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಮಾಡುವಂತಿಲ್ಲ. ಬದಲಾಗಿ ಸದನದಲ್ಲಿ ಕೈಗೊಂಡ ನಿರ್ಣಯಗಳಿಗೆ ಮಾತ್ರ ಅಂತಿಮ ಮುದ್ರೆ ಒತ್ತುವ ಅಧಿಕಾರ ರಾಜ್ಯಪಾಲರಿಗೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಮಧ್ಯಪ್ರವೇಶ ಕಷ್ಟಸಾಧ್ಯ. ಹೀಗಾಗಿ ಬಿಜೆಪಿ ಕಾನೂನು ಹೋರಾಟದತ್ತ ಚಿಂತನೆ ನಡೆಸಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಬಳಿ ಇರುವ ವಿಧಾನಪರಿಷತ್ ಸಬಾಪತಿ ಸ್ಥಾನವನ್ನು ಇತ್ತುಕೊಳ್ಳಲು ಬಿಜೆಪಿ ನಾನಾ ಕಸರತ್ತು ನಡೆಸಿದ್ದು, ಇದು ಮುಂದೆ ಏನಾಗಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.