ಬೆಂಗಳೂರು, (ಡಿ.15): ವಿಧಾನ ಪರಿಷತ್‌ನಲ್ಲಿನ ಗಲಾಟೆಯ ಬಗ್ಗೆ ವಿಷಾದಿಸುತ್ತೇನೆ. ಆದ್ರೆ ಸಭಾಪತಿ ಇದ್ದಾಗ ಉಪಸಭಾಪತಿ ಹೇಗೆ ಬಂದ್ರು.? ಸಭಾಪತಿ ಬರುವ ಮೊದಲೇ ಉಪಸಭಾಪತಿ ಕೂತಿದ್ಯಾಕೆ? ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ  ವಾಗ್ದಾಳಿ ನಡೆಸಿದರು.

ಇಂದು (ಮಂಗಳವಾರ) ವಿಧಾನಪರಿಷತ್‌ನಲ್ಲಿ ನಡೆದ ಗಲಾಟೆ ಬಗ್ಗೆ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೋಷನ್ ರಿಜೆಕ್ಟ್ ಆದ ಮೇಲೆ ಸಭಾಪತಿ ಕೂರುವ ಬದಲಾಗಿ, ಉಪ ಸಭಾಪತಿಯನ್ನು ಕೂರಿಸಿದ್ದು ಬಿಜೆಪಿ. ಇದು ಕಾನೂನು ಬಾಹಿರ ಅಪರಾಧವಾಗಿದೆ. ಚೇರ್ಮನ್ ಬರಬಾರದು ಎಂದು ಬಾಗಿಲು ಕೂಡ ಹಾಕಿದ್ದು ಬಿಜೆಪಿ ಗುಂಡಾಗಿರಿ ಅಲ್ವಾ.? ಎಂದು  ಬಿಜೆಪಿಗೆ ತಿರುಗೇಟು ನೀಡಿದರು. 

ಪರಿಷತ್‌ನಲ್ಲಿ ಕೈ ಕೈ ಮಿಲಾಯಿಸಿದ ಸದಸ್ಯರು: ರಾಜ್ಯದ ಮಾನ-ಮರ್ಯಾದೆ ಹರಾಜು

ಇಂದಿನ ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯವೇ ಇರಲಿಲ್ಲ. ಅಜೆಂಡಾದಲ್ಲಿ ಎಲ್ಲಾ ಕಲಾಪಗಳು ಮುಗಿದಿವೆ. ಹೀಗಿದ್ದೂ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದು ಬಿಜೆಪಿ. ಇದು ಬಿಜೆಪಿಯ ಗುಂಡಾಗಿರಿಯಾಗಿದೆ. ಕಾಂಗ್ರೆಸ್ ಗುಂಡಾವರ್ತನೆ ತೋರಿಲ್ಲ. ಬಿಜೆಪಿಯವರೇ ನಿಯಮಾವಳಿ ಪಾಲಿಸದೇ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿ ಗೂಂಡಾಗಿರಿಯನ್ನು ಸದನದಲ್ಲಿ ಪ್ರದರ್ಶಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅವಿಶ್ವಾಸ ನಿರ್ಣದ ನೋಟಿಸ್ ಕ್ರಮಬದ್ಧವಾಗಿರಲಿಲ್ಲ. ನೋಟಿಸ್ ತಿರಸ್ಕರಿಸುವ ಅಧಿಕಾರ ಸ್ಪೀಕರ್‌ಗೆ ಇದೆ. ಕ್ರಮಬದ್ಧವಾಗಿರದಂತ ನೋಟಿಸ್ ಅನ್ನು ಸ್ಪೀಕರ್ ತಿರಸ್ಕರಿಸಿದ್ದಾರೆ. ನಿಯಮಾವಳಿ ಪ್ರಕಾರ ಕಲಾಪ ನಡೆಯಬೇಕು. ಹೀಗಿದ್ದೂ ಇದ್ಯಾವುದನ್ನು ಇಂದಿನ ಕಲಾಪದಲ್ಲಿ ಪಾಲಿಸಿಲ್ಲ ಎಂದರು.