'ಗೊತ್ತಿದ್ದರೆ ತಿಳಿಸಿ ಅಂದೆ..ಅಬ್ಬಬ್ಬಾ ಏನ್ ಕಾಮೆಂಟ್ಸ್..' ನೆಟ್ಟಿಗರ ತರಾಟೆಗೆ ಉಪೇಂದ್ರ ಪ್ರತಿಕ್ರಿಯೆ!
ಕರ್ನಾಟಕ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಆದ ಬೆನ್ನಲ್ಲಿಯೇ ಪ್ರಜಾಕೀಯ ಪಕ್ಷದ ನಾಯಕ ನಟ ಉಪೇಂದ್ರ ಸಖತ್ ಚರ್ಚೆಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿದ ಒಂದೇ ಒಂದು ಟ್ವೀಟ್
ಬೆಂಗಳೂರು (ಮಾ.29): ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಮೇ 10 ರಂದು ಏಕಹಂತದಲ್ಲಿ ಚುನಾವಣೆಯ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಇದು ಘೋಷಣೆ ಆದ ಬೆನ್ನಲ್ಲಿಯೇ ರಾಜ್ಯದ 'ಬುದ್ಧಿವಂತ' ನಟ ಉಪೇಂದ್ರ ಮಾಡಿರುವ ಟ್ವೀಟ್‌ಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಡಿಜಿಟಲ್ ಕಾಲದಲ್ಲಿ ಇವಿಎಂ ಮೂಲಕ ಚುನಾವಣೆ ನಡೆಯುತ್ತಿದೆ. ಆದರೆ, ಮತಗಳ ಎಣಿಕೆ ನಡೆಯಲು ಎರಡು ದಿನಗಳ ಅಂತರ ಯಾಕೆ, ಅದೇ ದಿನ ಪ್ರಕಟಿಸಬಹುದಲ್ಲ ಎನ್ನುವ ಅರ್ಥದಲ್ಲಿ ಅವರು ಟ್ವೀಟ್ ಮಾಡಿದ್ದರು. ಆದರೆ, ಉಪೇಂದ್ರ ಅವರ ಟ್ವೀಟ್‌ಗೆ ಭಿನ್ನಭಿನ್ನ ಕಾಮೆಂಟ್‌ಗಳು ಬಂದಿರೋದು ಮಾತ್ರವಲ್ಲ. ಹೆಚ್ಚಿನವರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 1ನೇ ಕ್ಲಾಸ್ ಪರೀಕ್ಷೆ ನಡೆಸಿದರೆ ಅದರ ಫಲಿತಾಂಶ ನೀಡೋಕೆ ಒಂದು ತಿಂಗಳು ಕಾಯಿಸ್ತಾರೆ. ಅಂಥದ್ದರಲ್ಲಿ 224 ಕ್ಷೇತ್ರಗಳ ಮಹತ್ವದ ಚುನಾವಣೆಯ ರಿಸಲ್ಟ್ ಘೋಷಣೆ ಮಾಡೋಕೆ ಎರಡು ದಿನವಾದರೂ ಬೇಡವೇ ಎಂದು ಪ್ರಶ್ನೆ ಮಾಡಿದ್ದಾರೆ. ತಾವು ಮಾಡಿದ ಟ್ವೀಟ್ ನಿರೀಕ್ಷೆಗೂ ಮೀರಿ ಕಾಮೆಂಟ್ಸ್‌ಗಳು ಬಂದಿದ್ದು ಮಾತ್ರವಲ್ಲದೆ, ಬೇರೆ ಅರ್ಥದಲ್ಲಿ ಜನಕ್ಕೆ ಹೋಗಿರುವ ಕಾರಣದಿಂದ ಕೆಲ ಸಮಯದ ಬಳಿಕ ಸ್ವತಃ ಉಪೇಂದ್ರ ಅವರೇ ಮತ್ತೊಂದು ಟ್ವೀಟ್ ಮಾಡಿ ಗೊಂದಲ ನಿವಾರಿಸಿದರು.
'ಡಿಜಿಟಲ್ ವೋಟಿಂಗ್ ಅಲ್ವಾ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ. ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?! ವಾರೆ ವಾಹ್ .. ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು' ಎಂದು ತಮ್ಮದೇ ಶೈಲಿಯಲ್ಲಿ ಉಪೇಂದ್ರ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು ಮಾಡಿದ ಟ್ವೀಟ್‌ನಲ್ಲಿ 'ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?! ಏಕೆಂದು ಬಲ್ಲವರು ತಿಳಿಸುತ್ತೀರಾ ?' ಎಂದು ಪ್ರಶ್ನೆ ಮಾಡಿದ್ದರು.
ಅವರ ಈ ಟ್ವೀಟ್‌ಗೆ ಉತ್ತರಿಸಿದ್ದ ಜನ, 'ಸಿನೆಮಾದ ಶೂಟಿಂಗ್ ಮುಗಿದ ಮಾರನೆ ದಿನವೇ ರಿಲೀಸ್ ಮಾಡಬಹುದಲ್ವಾ? ಸಿನೆಮಾ ರಿಲೀಸ್ ಮಾಡಲು ತಿಂಗಳುಗಟ್ಟಲೆ ಯಾಕೆ ಕಾಯ್ತೀರಿ ನಟ ನಿರ್ದೇಶಕರೆ?' ಎಂದು ಬಸವರಾಜ್ ಕರ್ಕಿಹಳ್ಳಿ ಎನ್ನುವವರು ಪ್ರಶ್ನೆ ಮಾಡಿದ್ದಾರೆ. 'ಉಪ್ಪಿ ಸ್ವಲ್ಪ ಅರ್ಥ ಮಾಡ್ಕೊಳಿ ಸ್ವಾಮಿ. ಮತಯಂತ್ರಗಳನ್ನು ಮತಗಟ್ಟೆಗಳಿಂದ ಎಣಿಕೆ ಕೇಂದ್ರಗಳಿಗೆ ಕೊಂಡೊಯ್ಯಬೇಕು, ಅದರ ಜೊತೆಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳು ಇತ್ಯಾದಿ ಇರುತ್ತೆ ಅಲ್ವಾ? ಇಷ್ಟೆಲ್ಲಾ ಮಾಡೋಕ್ಕೆ 2 ದಿನ ಬೇಕಲ್ವಾ ಸ್ವಾಮಿ?' ಎಂದು ಇನ್ನೊಬ್ಬರು ಬರೆದಿದ್ದಾರೆ.
'ಬುದ್ಧಿವಂತರು ನೀವು.. ಕರ್ನಾಟಕದ ಎಲ್ಲಕಡೆಯಿಂದ ಮತ ಪೆಟ್ಟಿಗೆಗಳನ್ನು ಒಂದೆಡೆ ಸುರಕ್ಷಿತವಾಗಿ ತರಿಸಿ. ಎಣಿಕೆಗೆ ವ್ಯವಸ್ಥೆ ಮಾಡಬೇಕು. ಎಲ್ಲಾದರೂ ಅಹಿತಕರ ಘಟನೆ ನಡೆದಲ್ಲಿ, ಮರು ಮತದಾನ ಮಾಡಬೇಕು, ಹಾಗಾಗಿ ಎರಡು ದಿನ ಬೇಕಾಗುತ್ತದೆ . ಹೀಗೆಲ್ಲ ಬಾಲಿಶ ಸ್ಟೇಟ್ಮೆಂಟ್ ಗಳು ನಿಮ್ಮ ಗೌರವವನ್ನು ಕಡಿಮೆ ಮಾಡುತ್ತದೆ..ಅಲ್ವಾ' ಎಂದು ಇನ್ನೊಬ್ಬರು ಉಪೇಂದ್ರ ಅವರಿಗೆ ಎಚ್ಚರಿಸಿದ್ದಾರೆ. '1ನೇ ತರಗತಿಯ ಪರೀಕ್ಷೆಗಳ ಫಲಿತಾಂಶವನ್ನೇ ಹೇಳೋದಿಕ್ಕೆ ಶಾಲೆಯವರು ಒಂದು ತಿಂಗಳು ತೆಗೆದುಕೊಳ್ಳುತ್ತಾರೆ ಅಂತದರಲ್ಲಿ ಮತ ಎಣಿಕೆಗೆ ಎರಡು ದಿನ ಆದರೂ ಬೇಡವೇ ಬುದ್ಧಿವಂತ ಉಪೇಂದ್ರ ಸರ್?' ಎಂದು ಇನ್ನೊಬ್ಬರು ಕೇಳಿದ್ದಾರೆ.
News Hour Special: ಪ್ರಜಾಕೀಯ ಪಕ್ಷ, ಸಿದ್ಧಾಂತ, ನೀತಿ-ಧೋರಣೆ, ಕೆಲಸ-ಕಾರ್ಯಕ್ರಮಗಳ ಬಗ್ಗೆ ಉಪೇಂದ್ರ ಮಾತು!
' ಮತಗಟ್ಟೆಯಲ್ಲಿ ಗಲಾಟೆ ಗದ್ದಲ ಆಗಿ ಅಥವಾ ಯಾವುದೋ ಒಂದು ಕಾರಣಕ್ಕೆ ಮತದಾನ ಸರಿಯಾಗಿ ಆಗದಿದ್ದಲ್ಲಿ ಒಂದು ದಿನ ಮರು ಮತದಾನಕ್ಕೆ ಮೀಸಲಿಟ್ಟಿರಲಾಗುತ್ತೆ. As a precautionary. ಮತ್ತು ಕೆಲವು ಚುನಾವಣಾ ಅಧಿಕಾರಿಗಳನ್ನು relieve madoke ಈ ಸಮಯವನ್ನು ಬಳಸಿಕೊಳ್ಳಲಾಗುತ್ತದೆ' ಎಂದು ವಿಕ್ರಾಂತ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.
ನ್ಯೂಸ್ ಅವರ್ ಸ್ಪೆಷಲ್: ಇಲ್ಲಿದೆ ರಿಯಲ್ ಸ್ಟಾರ್ ಅನ್‌ಎಡಿಟೆಡ್ ಟಾಕ್..
'ಮತ ಎಣಿಕೆಗೆ ಎರಡು ದಿನ ಬೇಕಿಲ್ಲ. ಮತ ಎಣಿಕೆ ನಡೆಯೋದೇ ಮೇ 13ರಂದು, ಮೇ 13ರಂದೇ ಫಲಿತಾಂಶ' ಎಂದು ಪದಗಳ ಜೊತೆ ಆಟವಾಡುವ ಉಪೇಂದ್ರ ಅವರ ಸ್ಟೈಲ್‌ನಲ್ಲೇ ಮೊಯಿನುದ್ದೀನ್ ಶರೀಫ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ. 'ಇದು ಗೊತ್ತಿಲ್ಲದ ನೀನು ಪ್ರಜಾಕೀಯ ಅಂತ ಬೇರೆ ಒಂದು ಪಕ್ಷ ಕಟ್ಟಿದ್ದೀಯ..' ಉಪೇಂದ್ರ ಅವರ ಟ್ವೀಟ್‌ಗೆ ಟೀಕೆ ಮಾಡಿದ್ದಾರೆ. ಅದೇ ದಿನ ಫಲಿತಾಂಶ ಕೊಡೋಕೆ ಇದೇನು ಪ್ರಸ್ಥವೇ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.