ವಿಧೇಯಕದಿಂದ ಯಾವ ರೀತಿ, ಯಾರಿಗೆ ಅನುಕೂಲವಾಗುತ್ತದೆ ಎಂಬ ಮಾಹಿತಿಗಳ ಅವಶ್ಯಕತೆ ಇದೆ. ಹಾಗಾಗಿ ವಿಧೇಯಕವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕೆಂಬ ಬಿಜೆಪಿ ಸದಸ್ಯರ ಆಗ್ರಹಕ್ಕೆ ಸರ್ಕಾರ ಸ್ಪಂದಿಸಲಿಲ್ಲ.
ವಿಧಾನ ಪರಿಷತ್ (ಆ.21): ರಾಜ್ಯದಲ್ಲಿನ ಕೆರೆ ವಿಸ್ತೀರ್ಣ ಆಧರಿಸಿ ಬಫರ್ ಜೋನ್ ನಿಗದಿಗೊಳಿಸುವ ಜತೆಗೆ ಅಂಥ ಜಾಗ ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಕುರಿತು ವಿಧಾನಸಭೆಯಲ್ಲಿ ಅಂಗೀಕಾರವಾದ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ)ವಿಧೇಯಕ 2025’ ಅನ್ನು ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆಯೇ ಸರ್ಕಾರ ವಿಧಾನ ಪರಿಷತ್‌ನಲ್ಲೂ ಅಂಗೀಕರಿಸಿತು. ವಿಧೇಯಕವನ್ನು ಸರ್ಕಾರ ತರಾತುರಿಯಲ್ಲಿ ರಿಯಲ್ ಎಸ್ಟೇಟ್ ಒತ್ತಡಕ್ಕೆ ಮಣಿದು ಜಾರಿಗೆ ತರಲು ಹೊರಟಿದೆ. ವಿಶೇಷವಾಗಿ ಬೆಂಗಳೂರಿನ ಕೆರೆಗಳ ಒತ್ತುವರಿ ಸಂಬಂಧ ಲಕ್ಷ್ಮಣರಾವ್ ವರದಿ, ಎ.ಟಿ.ರಾಮಸ್ವಾಮಿ ವರದಿ, ಕೆ.ಬಿ.ಕೋಳಿವಾಡ ವರದಿ ಬಗ್ಗೆ ಅಧ್ಯಯನ ಆಗಬೇಕಿದೆ.
ವಿಧೇಯಕದಿಂದ ಯಾವ ರೀತಿ, ಯಾರಿಗೆ ಅನುಕೂಲವಾಗುತ್ತದೆ ಎಂಬ ಮಾಹಿತಿಗಳ ಅವಶ್ಯಕತೆ ಇದೆ. ಹಾಗಾಗಿ ವಿಧೇಯಕವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕೆಂಬ ಬಿಜೆಪಿ ಸದಸ್ಯರ ಆಗ್ರಹಕ್ಕೆ ಸರ್ಕಾರ ಸ್ಪಂದಿಸಲಿಲ್ಲ. ಇದರಿಂದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ವಿಧೇಯಕ ಮಂಡಿಸಿ ವಿವರಣೆ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಈವರೆಗೆ ಕೆರೆಗಳ ವಿಸ್ತೀರ್ಣ ಎಷ್ಟೇ ಇರಲಿ ಬಫರ್ ವಲಯ 30 ಮೀಟರ್ ಇರಬೇಕೆಂದು ನಿಗದಿಯಾಗಿತ್ತು. ಇದರಿಂದ ವಿಶೇಷವಾಗಿ ಮಂಗಳೂರು, ಉಡುಪಿ ಜಿಲ್ಲೆಗಳ ಜನರಿಗೆ ತೊಂದರೆಯಾಗುತ್ತಿತ್ತು. ಸಾರ್ವಜನಿಕ ಉದ್ದೇಶಕ್ಕೆ ಜಾಗ ಬಳಸಲು ಆಗುತ್ತಿರಲಿಲ್ಲ. ಆದ್ದರಿಂದ ಕೆರೆಯ ವಿಸ್ತೀರ್ಣ ಆಧರಿಸಿ ಕೆರೆಯ ಕಂದಾಯ ಗಡಿಯಿಂದ ಬಫರ್ ವಲಯಗಳನ್ನು ನಿಗದಿ ಮಾಡಲು ತಿದ್ದುಪಡಿ ವಿಧೇಯಕ ತರಲಾಗಿದೆ ಎಂದರು.
ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ಕೆರೆಗಳಿಗೆ ನೀರಿನ ಒಳ ಅಥವಾ ಹೊರ ಹರಿವಿಗೆ ಅಡ್ಡಿಯಾಗದಂತೆ ಉದ್ಯಾನವನ ಸೇರಿ ರಸ್ತೆ, ಸೇತುವೆ, ವಿದ್ಯುತ್ ಮಾರ್ಗ, ನೀಉ ಸರಬರಾಜು ಮಾರ್ಗ, ಒಳಚರಂಡಿ ಮಾರ್ಗ ಜಾಕ್‌ವೆಲ್ ಅಥವಾ ಪಂಪ್‌ಹೌಸ್, ಎಸ್‌ಟಿಪಿ, ಕೊಚ್ಚೆ ಗುಂಡಿ, ಕಿರು ಜಲನಾಲೆಗಳ ನಿರ್ಮಾಣ ಹೊರತು ಬಫರ್ ವಲಯದಲ್ಲಿ ಯಾವುದೇ ಕಾಮಗಾರಿ ಅಥವಾ ವಾಣಿಜ್ಯ, ಮನರಂಜನೆ, ಕೈಗಾರಿಕಾ ಚಟುವಟಿಕೆಗೆ ಅವಕಾಶವಿರುವುದಿಲ್ಲ. ಕೆರೆಗಳ ರಕ್ಷಣೆಗೆ ಸ್ಥಳೀಯ ಜನರನ್ನೊಳಗೊಂಡ ಸಮಿತಿ ರಚಿಸಲು ವಿಧೇಯಕದಲ್ಲಿ ಅವಕಾಶ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂರಕ್ಷಣೆ ಹೆಸರಿನಲ್ಲಿ ಕರೆ ಹಾಳು ಮಾಡುವುದು ಸರಿಯಲ್ಲ. ಬಫರ್ ವಲಯ ಕಡಿಮೆ ಮಾಡುವ ಬದಲು ಹೆಚ್ಚಿಸಿ, ಕೆರೆಗಳ ಹೂಳು ತೆಗೆಸಿ, ರಾಜಕಾಲುವೆ ಒತ್ತುವರಿ ತೆರವು ಮಾಡಿಸಿ, ಬಫರ್ ವಲಯ ಕಡಿಮೆ ಮಾಡುವುದರಿಂದ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಮಾಡುವವರಿಗೆ ಅನುಕೂಲವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಿಜೆಪಿಯ ಪಿ.ಎಚ್.ಪೂಜಾರ್, ಕೆರೆಗಳಿಗೆ ಹರಿದು ಬರುವ ಅಚ್ಚುಕಟ್ಟು ಪ್ರದೇಶ ಸಂರಕ್ಷಣೆ ಮೂಲಕ ಸುಗಮವಾಗಿ ನೀರು ಹರಿದು ಬರಲು ಕ್ರಮ ಕೈಗೊಳ್ಳಬೇಕು. ಹರಿದು ಬರುವ ನೀರು ತಡೆದಿದ್ದರೆ ಅದನ್ನು ತೆರವುಗೊಳಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿಯ ಸಿ.ಟಿ.ರವಿ ಮಾತನಾಡಿ ಇದೊಂದು ಅವೈಜ್ಞಾನಿಕ ವಿಧೇಯಕ. ವಿಶೇಷವಾಗಿ ಬೆಂಗಳೂರಿಗೆ ಸಂಬಂಧಪಟ್ಟಂತೆ ಲಕ್ಷ್ಮಣರಾವ್ ವರದಿ, ಎ.ಟಿ.ರಾಮಸ್ವಾಮಿ ವರದಿ ಹಾಗೂ ಕೆ.ಬಿ.ಕೋಳಿವಾಡ ವರದಿಯಲ್ಲಿ ಬಫರ್ ವಲಯ ಕಡಿಮೆ ಮಾಡಲು ಶಿಫಾರಸು ಮಾಡಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ಹಿಂದೆ ನಮ್ಮ ಸರ್ಕಾರವಿದ್ದಾಗ ಸೂಟ್ ಕೇಸ್ ಇಟ್ಟುಕೊಂಡು ಕೆಲವರು ಓಡಾಡಿದ್ದರೂ ಇಂಥ ಕೆಲಸ ಮಾಡಲಿಲ್ಲ. ಈಗ ಈ ವಿಧೇಯಕ ತಂದಿರುವುದನ್ನು ನೋಡಿದರೆ ಸೂಟ್ ಕೇಸ್ ಕೆಲಸ ಮಾಡುತ್ತಿದೆಯೇ ಎಂಬ ಸಂಶಯ ಬರುತ್ತಿದೆ ಎಂದರು.
ಜೆಡಿಎಸ್‌ನ ಟಿ.ಎ.ಶರವಣ ಮಾತನಾಡಿ, ಬೆಂಗಳೂರಿನಲ್ಲಿದ್ದ ನೂರಾರು ಕೆರೆಗಳ ಸಂಖ್ಯೆ ಈಗ ಎರಡಂಕಿಗೆ ಬಂದಿದೆ. ಕೆರೆ ಸ್ವರೂಪ ಕಳೆದುಕೊಂಡು ಮನೆ, ಕಟ್ಟಡಗಳು ನಿರ್ಮಾಣವಾಗಿವೆ. ಆದರೆ ಈಗಲೂ ದಾಖಲೆಗಳಲ್ಲಿ ಕೆರೆ ಎಂದೇ ಉಲ್ಲೇಖಿತವಾಗಿವೆ, ಆದ್ದರಿಂದ ದಾಖಲೆಯಿಂದ ತೆಗೆದು ಹಾಕಬೇಕು. ಕೆರೆ ಒತ್ತುವರಿ ತೆರವು ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ವಿಧೇಯಕದ ಪರವಾಗಿ ಐವಾನ್ ಡಿಸೋಜಾ, ರಾಮೋಜಿಗೌಡ, ಎಂ. ನಾಗರಾಜು, ಡಿ.ಟಿ.ಶ್ರೀನಿವಾಸ್ ಮಾತನಾಡಿದರು.
