ಒಳ ಮೀಸಲಾತಿ ಕುರಿತ ನ್ಯಾ। ನಾಗಮೋಹನ ದಾಸ್ ಅವರ ವರದಿಯಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಪಂಗಡಗಳಿಗೆ ನೀಡಿದ್ದ ಶೇ. 1ರಷ್ಟು ಮೀಸಲಾತಿಯನ್ನು ಆ ಸಮೂಹಗಳ ಜತೆಗೆ ಬಲಗೈ ಸಮುದಾಯದಲ್ಲಿ ವಿಲೀನ ಮಾಡಲಾಗಿದೆ.
ಬೆಂಗಳೂರು (ಆ.20): ಪರಿಶಿಷ್ಟ ಎಡಗೈ ಸಮುದಾಯಗಳ ದಶಕಗಳ ಬೇಡಿಕೆ ಹಾಗೂ ಹೋರಾಟ ಕಡೆಗೂ ಸಾಕಾರಗೊಂಡಿದ್ದು, ಒಳ ಮೀಸಲಾತಿ ಹಂಚಿಕೆಯ ಮಹತ್ತರ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದೆ. 101 ಜಾತಿಗಳಿಗೆ ಲಭ್ಯವಿರುವ ಶೇ.17ರಷ್ಟು ಮೀಸಲಾತಿಯನ್ನು ಮೂರು ವರ್ಗಗಳಲ್ಲಿ ನೀಡಲು ತೀರ್ಮಾನಿಸಲಾಗಿದೆ. ಅದರಂತೆ ಬಲಗೈ ಸಮುದಾಯಗಳಿಗೆ ಶೇ. 6, ಎಡಗೈ ಸಮುದಾಯಗಳಿಗೆ ಶೇ. 6 ಹಾಗೂ ಸ್ಪೃಶ್ಯ ಜಾತಿಗಳಿಗೆ (ಅತಿ ಹಿಂದುಳಿದ, ಅಲೆಮಾರಿ ಸೇರಿಸಿ) ಶೇ.5ರಷ್ಟು ಮೀಸಲು ನಿಗದಿಗೊಳಿಸುವ ನಿರ್ಧಾರ ಕೈಗೊಂಡಿದೆ.
ಒಳ ಮೀಸಲಾತಿ ಕುರಿತ ನ್ಯಾ। ನಾಗಮೋಹನ ದಾಸ್ ಅವರ ವರದಿಯಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಪಂಗಡಗಳಿಗೆ ನೀಡಿದ್ದ ಶೇ. 1ರಷ್ಟು ಮೀಸಲಾತಿಯನ್ನು ಆ ಸಮೂಹಗಳ ಜತೆಗೆ ಬಲಗೈ ಸಮುದಾಯದಲ್ಲಿ ವಿಲೀನ ಮಾಡಲಾಗಿದೆ. ಅದೇ ರೀತಿ ಅಲೆಮಾರಿ ಸಮುದಾಯ ಹಾಗೂ ಅತಿ ಸೂಕ್ಷ್ಮ ಹಿಂದುಳಿದ ಜಾತಿಗಳಿಗೆ ನೀಡಲಾಗಿದ್ದ ಶೇ. 1ರಷ್ಟು ಮೀಸಲನ್ನು ಆ ಸಮುದಾಯಗಳ ಜತೆಗೆ ಸ್ಪೃಶ್ಯ ಜಾತಿಗಳಲ್ಲಿ ವಿಲೀನಗೊಳಿಸಲಾಗಿದೆ.
ತನ್ಮೂಲಕ ನ್ಯಾ। ನಾಗಮೋಹನ ದಾಸ್ ಅವರ ವರದಿಯಲ್ಲಿ ಮಾಡಲಾಗಿದ್ದ ಐದು ಪ್ರವರ್ಗಗಳನ್ನು ಮಾರ್ಪಡಿಸಿ ಮೂರಕ್ಕೆ ಇಳಿಸಲಾಗಿದೆ. ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ನ್ಯಾ. ನಾಗಮೋಹನ್ ದಾಸ್ ಆಯೋಗ ಮಾಡಿದ್ದ ಐದು ಮೀಸಲಾತಿ ವರ್ಗೀಕರಣ ಶಿಫಾರಸಿಗೆ ಬಲಗೈ ಉಪಜಾತಿಗಳು ಹಾಗೂ ಸ್ಪೃಶ್ಯ ಜಾತಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಮಾರ್ಪಾಡು ಮಾಡಲಾಗಿದೆ.
ರಾಜ್ಯದಲ್ಲಿ ಶೇ.17ರಷ್ಟಿರುವ ಎಸ್ಸಿ ಮೀಸಲಾತಿಯನ್ನು ಐದು ವರ್ಗೀಕರಣ ಮಾಡಿ ಆ.4ರಂದು ಆಯೋಗ ಶಿಫಾರಸು ಮಾಡಿತ್ತು. ಐದು ವರ್ಗೀಕರಣ ಪೈಕಿ ಬಲಗೈ ಉಪಜಾತಿಗಳಿಗೆ ಶೇ.5 ರಷ್ಟು ಹಾಗೂ ಲಂಬಾಣಿ, ಭೋವಿಯಂತಹ ಸ್ಪೃಶ್ಯ ಜಾತಿಗಳಿಗೆ ಶೇ.4ರಷ್ಟು ಮೀಸಲಾತಿ ಮಾತ್ರ ಶಿಫಾರಸು ಮಾಡಿದ್ದ ಬಗ್ಗೆ ಎರಡೂ ವರ್ಗಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಐದು ವರ್ಗೀಕರಣವನ್ನು ಮೂರು ವರ್ಗಗಳಿಗೆ ಸೀಮಿತಗೊಳಿಸಲು ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ.
ಈ ನಡುವೆ, ಬಲಗೈ ಮುಖಂಡರು ಪರಿಷ್ಕೃತ ವರ್ಗೀಕರಣ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಇಲ್ಲ. ಆದರೂ ನಮ್ಮ ಸೋದರ ಸಮುದಾಯಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಶೇ.6ರಷ್ಟು ಮೀಸಲಿಗೆ ತೃಪ್ತಗೊಂಡಿದ್ದೇವೆ. ಎಡಗೈ ಸಮುದಾಯಗಳ ಜನಸಂಖ್ಯೆ 34.10 ಲಕ್ಷ, ಬಲಗೈ ಸಮುದಾಯಗಳ ಜನಸಂಖ್ಯೆ 37.30 ಲಕ್ಷ. ಜನಸಂಖ್ಯೆ ಹೆಚ್ಚಿದ್ದರೂ ಕೂಡ ಮೀಸಲಾತಿ ಬಗ್ಗೆ ತೃಪ್ತಿ ಇದೆ ಎಂದು ಹೇಳಿದ್ದಾರೆ.
ಮೂರು ಮೀಸಲಾತಿ ವರ್ಗೀಕರಣ ರಚನೆ: ಮಾದಿಗ ಸೇರಿದಂತೆ ಅದೇ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ ಹೊಂದಿರುವ 18 (ಎಡಗೈ) ಸಮುದಾಯಗಳಿಗೆ ಶೇ.6, ಹಿಂದುಳಿದ ಹೊಲೆಯ ಹಾಗೂ ಅದೇ ರೀತಿ ಸ್ಥಿತಿಯಿರುವ ಬಲಗೈನ 17 ಸಮುದಾಯಗಳ ಜತೆಗೆ ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಸೇರಿ ಒಟ್ಟು 20 ಸಮುದಾಯಗಳಿಗೆ ಶೇ.6 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇನ್ನು ಸ್ಪೃಶ್ಯ ಜಾತಿಗಳಾಗಿ ಪರಿಗಣಿಸಲ್ಪಡುವ ಕಡಿಮೆ ಹಿಂದುಳಿದ ಲಂಬಾಣಿ, ಬೋವಿ, ಕೊರಮ, ಕೊರಚ ಸೇರಿ 22 ಸಮುದಾಯ ಹಾಗೂ ಅತ್ಯಂತ ಹಿಂದುಳಿದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ, ಅಲೆಮಾರಿಯ 59 ಸಮುದಾಯ ಸೇರಿ 81ಕ್ಕೆ ಶೇ.5 ರಷ್ಟು ಮೀಸಲಾತಿ ನೀಡಿ ಪರಿಷ್ಕೃತ ವರ್ಗೀಕರಣಕ್ಕೆ ಒಪ್ಪಿಗೆ ನೀಡಲಾಗಿದೆ.
ಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಅಧಿವೇಶನದಲ್ಲಿ ಮಂಡಿಸಲಿದ್ದಾರೆ. ಬಳಿಕ ಗುರುವಾರ ಅಥವಾ ಶುಕ್ರವಾರ ಸರ್ಕಾರದಿಂದ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆಯಿದೆ. ಬಳಿಕ ಎಲ್ಲಾ ಸರ್ಕಾರಿ ನೇಮಕಾತಿಗಳಿಗೂ ನೂತನ ಹಾಗೂ ಪರಿಷ್ಕೃತ ಮೀಸಲಾತಿ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಆಯೋಗ ಮಾಡಿದ್ದ ವರ್ಗೀಕರಣವೇನು?: ನಾಗಮೋಹನ್‌ದಾಸ್ ಆಯೋಗವು ಪರಿಶಿಷ್ಟ ಜಾತಿಯ 101 ಸಮುದಾಯಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಿತ್ತು. ಪ್ರವರ್ಗ -ಎ: ಅತ್ಯಂತ ಹಿಂದುಳಿದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ 59 ಸಣ್ಣಪುಟ್ಟ ಸಮುದಾಯ. ಪ್ರವರ್ಗ- ಬಿ: ಹೆಚ್ಚು ಹಿಂದುಳಿದ ಮಾದಿಗ ಮತ್ತು ಅದೇ ರೀತಿಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ಥಿತಿ ಹೊಂದಿರುವ 18 ಸಮುದಾಯ. ಪ್ರವರ್ಗ- ಸಿ: ಹಿಂದುಳಿದ ಹೊಲೆಯ ಮತ್ತು ಅದೇ ರೀತಿಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿ ಇರುವ 17 ಜಾತಿ. ಪ್ರವರ್ಗ-ಡಿ: ಕಡಿಮೆ ಹಿಂದುಳಿದ ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯ. ಪ್ರವರ್ಗ-ಇ: ಆದಿ ದ್ರಾವಿಡ, ಆದಿ ಕರ್ನಾಟಕ ಹಾಗೂ ಆದಿ ಆಂಧ್ರ ಎಂದು ಹಂಚಿಕೆ ಮಾಡಲಾಗಿತ್ತು.
ಆಯೋಗದ ವರ್ಗೀಕರಣಕ್ಕೆ ತೀವ್ರ ವಿರೋಧ: ನಾಗಮೋಹನ್‌ದಾಸ್ ಆಯೋಗದ ವರದಿಯಲ್ಲಿನ ಮೀಸಲಾತಿ ವರ್ಗೀಕರಣದಲ್ಲಿ ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿಗಳನ್ನು ಪ್ರತ್ಯೇಕ ಗುಂಪಾಗಿ ಪರಿಗಣಿಸಿ ಶೇ. 1ರಷ್ಟು ಮೀಸಲಾತಿ ನೀಡಿರುವುದಕ್ಕೆ ಬಲಗೈ ಸಮುದಾಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಈ ಕುರಿತಂತೆ ಸಚಿವ ಡಾ. ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಮುದಾಯದ ಸಚಿವರು, ಶಾಸಕರು ಸಭೆ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಈ ಕಾರಣಕ್ಕಾಗಿಯೇ ಈ ಹಿಂದಿನ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಇದೀಗ ಈ ವಿವಾದಕ್ಕೆ ಪರಿಹಾರ ಎನ್ನುವಂತೆ ನ್ಯಾ. ನಾಗಮೋಹನದಾಸ್ ಆಯೋಗದಿಂದ ಶಿಫಾರಸು ಮಾಡಿದ್ದ ಎರಡು ಹೆಚ್ಚುವರಿ ಒಳ ಮೀಸಲಾತಿ ವರ್ಗೀಕರಣವನ್ನು ಮೂರಕ್ಕೆ ಇಳಿಸಲಾಗಿದೆ. ಅದರಂತೆ ಅತಿ ಹಿಂದುಳಿದವರು, ಅಲೆಮಾರಿ ಸೇರಿದಂತೆ ಇನ್ನಿತರ ಅತಿಸೂಕ್ಷ್ಮ ಉಪಜಾತಿಗಳಿದ್ದ ಎ ವರ್ಗೀಕರಣವನ್ನು ಅಸ್ಪೃಶ್ಯರಲ್ಲದ ಉಪಜಾತಿಗಳನ್ನು ಗುರುತಿಸಲಾದ ಡಿ ವರ್ಗೀಕರಣದೊಂದಿಗೆ ವಿಲೀನಗೊಳಿಸಲಾಗಿದೆ. ಆಮೂಲಕ ಅಸ್ಪೃಶ್ಯರಲ್ಲದ ಉಪಜಾತಿಗಳ ಮೀಸಲಾತಿಯನ್ನು ಶೇ. 4ರಿಂದ 5ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಬಲಗೈ ಹಾಗೂ ಎಡಗೈ, ಸ್ಪೃಶ್ಯರಿಗೆ ಸಮಾಧಾನ ಮಾಡುವ ಯತ್ನ ನಡೆಸಲಾಗಿದೆ.
ಅಂಗೀಕರಿಸಿರುವ ಆಯೋಗದ ಪ್ರಮುಖ ಶಿಫಾರಸು:
- ಪಟ್ಟಿಯಲ್ಲಿ ಗುರುತಿಸಿಕೊಳ್ಳದ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಜಾತಿ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಆದಿ, ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂದು ನಮೂದಿಸಿದವರಿಗೆ ಅದೇ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ನೀಡಬೇಕು.
- ಉದ್ಯೋಗದಲ್ಲಿ ರೋಸ್ಟರ್ ಬಿಂದುಗಳನ್ನು ‘ಗುಂಪು’ ಆಧಾರದಲ್ಲಿ ಗುರುತಿಸಬೇಕು. ಅದೇ ಆಧಾರದಲ್ಲಿ ಮೀಸಲಾತಿ ನೀಡಬೇಕು. ಆದಿ, ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂದು ನಮೂದಿಸುವ ಜೊತೆಗೆ ಮೂಲ ಜಾತಿಯನ್ನೂ ಗುರುತಿಸಿದ್ದರೆ ಅಂಥವರಿಗೆ ಅವರ ಮೂಲ ಜಾತಿಯ ಹೆಸರಿನಲ್ಲಿಯೇ ಜಾತಿ ಪ್ರಮಾಣಪತ್ರ ನೀಡಬೇಕು.
- 2024ರ ಅ.28ರಿಂದ ಪುನಃ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುವ ದಿನಾಂಕದವರೆಗೆ ವಯೋಮಿತಿ ಮೀರಿದಂತಹ ಅಭ್ಯರ್ಥಿಗಳಿಗೆ ವಯೋಮಿತಿ ರಿಯಾಯಿತಿಯನ್ನು ನೀಡಿ, ಅವಕಾಶವನ್ನು ಕಲ್ಪಿಸಬೇಕು.
- ಒಂದು ಪ್ರವರ್ಗದಲ್ಲಿ ಭರ್ತಿಯಾಗದೆ ಉಳಿದ ಹುದ್ದೆಗಳನ್ನು ಕ್ಯಾರಿ ಫಾರ್ವರ್ಡ್ ನಿಯಮದಂತೆ ಭರ್ತಿ ಮಾಡಬೇಕು. ಅಲ್ಲಿಗೂ ಸೂಕ್ತ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಾಗ ಅಂತಹ ಹುದ್ದೆಗಳನ್ನು ಪರಿಶಿಷ್ಟ ಜಾತಿಯ ಮತ್ತೊಂದು ಪ್ರವರ್ಗಕ್ಕೆ ವರ್ಗಾವಣೆ ಮಾಡಬೇಕು.
- ಕೆಲವು ಜಾತಿಗಳ ಹೆಸರು ಅಪಹಾಸ್ಯಕ್ಕೆ, ನಗೆಪಾಟಲಿಗೆ ಈಡಾಗುತ್ತಿರುವುದನ್ನು ಮನಗಂಡು ತಮ್ಮ ಜಾತಿಯ ಹೆಸರುಗಳನ್ನು ಮಾರ್ಪಾಡು ಮಾಡಿಕೊಳ್ಳಲು ಅಪೇಕ್ಷಿಸಿದರೆ ಸರ್ಕಾರ ಅವಕಾಶ ನೀಡಿ ಸೂಕ್ತ ಕಾನೂನು ಕ್ರಮವಹಿಸಬೇಕು ಎಂದು ಶಿಫಾರಸು ಮಾಡಿದೆ.
