ಬೆಂಗಳೂರು, (ಜ.14): ಕಾಂಗ್ರೆಸ್ ನ ಕೆಲ ಅತೃಪ್ತ ಶಾಸಕರ ನಡೆಯಿಂದಾಗಿ ರಾಜ್ಯ ಮೈತ್ರಿ ಸರ್ಕಾರ ಅಡ್ಡಕತ್ತರೆಯಲ್ಲಿ ಸಿಲುಕಿದೆ.ಸಚಿವ ಸ್ಥಾನ ವಂಚಿತ ಕೆಲ ಶಾಸಕರು ಕಾಂಗ್ರೆಸ್ ವಿರುದ್ಧ ಸಿಡಿದೆದಿದ್ದು, ನಾಯಕರ ಸಂಪರ್ಕಕ್ಕೆ ಸಿಗದೇ ಅಜ್ಞಾತ ಸ್ಥಳದಲ್ಲಿದ್ದಾರೆ.

"

ಮತ್ತೊಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದ ಸಚಿವ ಸ್ಥಾನ ವಂಚಿತ ಇಬ್ಬರು ಪಕ್ಷೇತರ ಶಾಸಕರು ತಮ್ಮ ಬೆಂಬಲವನ್ನು ವಾಪಸ್ ಪಡೆಯಲು ಮುಂದಾಗಿದ್ದಾರೆ.

ಅಖಾಡಕ್ಕಿಳಿದ ಡಿ.ಕೆ.ಶಿವಕುಮಾರ್: ಮುಂಬೈನತ್ತ ಕಾಂಗ್ರೆಸ್ ಟ್ರಬಲ್ ಶೂಟರ್

ರಾಣೇಬೆನ್ನೂರು ಪಕ್ಷೇತರ ಶಾಸಕ ಆರ್. ಶಂಕರ್ ಹಾಗೂ ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಲು ನಿರ್ಧರಿಸಿದ್ದು, ಕುಮಾರಸ್ವಾಮಿ ಸರ್ಕಾರಕ್ಕೆ ನಿದ್ದೆಗೆಡಿಸಿದೆ.

ಇನ್ನು ಕೆಲ ಅತೃಪ್ತ ಕಾಂಗ್ರೆಸ್ ಶಾಸಕರು ಮುಂಬೈನಲ್ಲಿ ಕೂತು ಮೈತ್ರಿ ಸರ್ಕಾರವನ್ನು ಆಟವಾಡಿಸುತ್ತಿದ್ದಾರೆ. ಇದ್ರಿಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವಾಗಿದೆ.

ಇದೀಗ ಅತೃಪ್ತರನ್ನು ಮನವೊಲಿಸುವ ಹೊಣೆಯನ್ನು ಹೊತ್ತುಕೊಂಡಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಸಚಿವ ಡಿ.ಕೆ. ಶಿವಕುಮಾರ್ ಅಖಾಡಕ್ಕಿಳಿದಿದ್ದು, ನಾಳೆ (ಮಂಗಳವಾರ) ಮುಂಬೈಗೆ ಹೋಗಲಿದ್ದಾರೆ.

ಸೆಮಿನರ್ ನೆಪದಲ್ಲಿ ಮೂರು ದಿನ ಮುಂಬೈನಲ್ಲಿ ವಾಸ್ತವ್ಯ ಹೂಡಲಿರುವ ಡಿಕೆಶಿ, ಅತೃಪ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.