ವಿವಿಧ ವಸತಿ ಯೋಜನೆಗಳಿಗೆ ನೀಡುವ ಸಹಾಯಧನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಕ್ಕೆ ನಾಲ್ಕು ಲಕ್ಷ ರು, ಸಾಮಾನ್ಯ ವರ್ಗದವರಿಗೆ 3.50 ಲಕ್ಷ ರು. ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ತಿಳಿಸಿದರು.

ವಿಧಾನ ಪರಿಷತ್‌ (ಡಿ.11): ವಿವಿಧ ವಸತಿ ಯೋಜನೆಗಳಿಗೆ ನೀಡುವ ಸಹಾಯಧನವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಕ್ಕೆ ನಾಲ್ಕು ಲಕ್ಷ ರು, ಸಾಮಾನ್ಯ ವರ್ಗದವರಿಗೆ 3.50 ಲಕ್ಷ ರು. ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ತಿಳಿಸಿದರು. ಬಿಜೆಪಿಯ ಪ್ರದೀಪ್‌ ಶೆಟ್ಟರ್, ಕಾಂಗ್ರೆಸ್‌ನ ಶಿವಕುಮಾರ್‌ ಕೆ. ಅವರ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಡವರ ವಸತಿ ಯೋಜನೆಗಳಿಗೆ ಸದ್ಯ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುತ್ತಿರುವ ಸಹಾಯಧನ ಕಡಿಮೆಯಾಗಿದ್ದು, ಈ ಮೊತ್ತದಲ್ಲಿ ಮನೆ ಕಟ್ಟಿಕೊಳ್ಳಲು ಆಗುವುದಿಲ್ಲ.

ಹೀಗಾಗಿ ಈ ಮೊತ್ತ ಹೆಚ್ಚಿಸಬೇಕೆಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದು, ಅವರಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸಹಾಯಧನದ ಮೊತ್ತ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಸ್ತುತ ಕೇಂದ್ರ ಸರ್ಕಾರದ ವಸತಿ ಯೋಜನೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ವಸತಿ ಯೋಜನೆಗಳಡಿ ಅನುದಾನ ಬಿಡುಗಡೆ ಬಾಕಿ ಇರುವುದಿಲ್ಲ. 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಅಕ್ಟೋಬರ್‌ 2025ರ ಅಂತ್ಯಕ್ಕೆ 1324.26 ಕೋಟಿ ರು. ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದರು.

37,48,766 ವಸತಿ ರಹಿತರು: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2018ರಲ್ಲಿ ನಡೆದ ಸಮೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 24,18,922 ವಸತಿ ರಹಿತರು, ನಗರ ಪ್ರದೇಶದಲ್ಲಿ 13,29,844 ವಸತಿ ರಹಿತರು ಇದ್ದಾರೆ ಎಂದ ಸಚಿವರು, ಕಳೆದ ಮೂರು ವರ್ಷಗಳಿಂದ ಸರ್ಕಾರಕ್ಕೆ ಹೊಸದಾಗಿ ಮನೆ ಕೊಡಲು ಆಗಲಿಲ್ಲ, ಬದಲಾಗಿ ಈಗಾಗಲೇ ನಡೆಯುತ್ತಿದ್ದ ಮನೆ ನಿರ್ಮಾಣ ಯೋಜನೆಗಳಿಗೆ ಹಣ ನೀಡಿ ಪೂರ್ಣಗೊಳಿಸಿ ಮನೆ ವಿತರಿಸಲಾಗಿದೆ ಎಂದರು.

ಸೂರ್ಯನಗರ 1ನೇ ಹಂತ ನಿವೇಶನಗಳಿಗೆ ತಿಂಗಳ ನಂತರ ಇ-ಖಾತಾ

ಬೆಂಗಳೂರು ನಗರದ ಕೆಎಚ್‌ಬಿ ವ್ಯಾಪ್ತಿಯ ಸೂರ್ಯ ನಗರದ ಒಂದನೇ ಹಂತದಲ್ಲಿ ಹಂಚಿಕೆಯಾದ ನಿವೇಶನಗಳಿಗೆ ಒಂದು ತಿಂಗಳ ನಂತರ ಇ-ಖಾತಾ ನೋಂದಣಿ ನೀಡಲಾಗುವುದು ಎಂದು ತಿಳಿಸಿದರು. ಬಿಜೆಪಿಯ ಸುನೀಲ್‌ ವಲ್ಯಾಪುರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಫ್ಟ್‌ವೇರ್‌ ಅಭಿವೃದ್ಧಿ ಮಾಡಬೇಕಾಗಿರುವ ಕಾರಣ ಇ-ಖಾತಾ ಮಾಡುತ್ತಿಲ್ಲ, ಇನ್ನೊಂದು ತಿಂಗಳಲ್ಲಿ ಸಾಫ್ಟ್‌ವೇರ್ ಸಿದ್ಧಗೊಳ್ಳಲಿದೆ, ನಂತರ ಇ-ಖಾತಾ ನೋಂದಣಿ ಮಾಡಲಾಗುವುದು ಎಂದರು. ಸೂರ್ಯನಗರ 1ನೇ ಹಂತದ ವಸತಿ ಬಡಾವಣೆಯನ್ನು ಚಂದಾಪುರ ಮತ್ತು ಬೊಮ್ಮಸಂದ್ರ ಪುರಸಭೆಗಳು ಹಸ್ತಾಂತರ ಮಾಡಿಕೊಂಡು ಬಡಾವಣೆಯ ಸ್ವತ್ತುಗಳಿಗೆ ಇ-ಖಾತಾ ಮಾಡಿಕೊಡಲು ಪುರಸಭೆ ಕ್ರಮ ವಹಿಸಬೇಕಾಗಿದೆ ಎಂದರು. ಈ ಬಡಾವಣೆಯಲ್ಲಿ ಡಾಂಬರೀಕೃತ ರಸ್ತೆಗಳು, ಮಳೆ ನೀರಿನ ಚರಂಡಿ, ಒಳಚರಂಡಿ ವ್ಯವಸ್ಥೆ, ಕಾವೇರಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.