ವಿದೇಶದಲ್ಲಿರುವವರೂ ಗ್ಯಾರಂಟಿ ಯೋಜನೆ ಅನುಕೂಲ ಪಡೆಯುತ್ತಿದ್ದಾರೆ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವರು ಪ್ರಸ್ತಾಪಿಸಿದರು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಸುವರ್ಣ ವಿಧಾನಸೌಧ (ಡಿ.11): ವಿದೇಶದಲ್ಲಿರುವವರೂ ಗ್ಯಾರಂಟಿ ಯೋಜನೆ ಅನುಕೂಲ ಪಡೆಯುತ್ತಿದ್ದಾರೆ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವರು ಪ್ರಸ್ತಾಪಿಸಿದರು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ವಿದೇಶದಲ್ಲಿರುವವರೂ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಿದ್ದಾರೆ ಎಂದು ಹೇಳಿದರು. ಯಾರು ಹೇಳಿದರು ಎಂದು ನಾನು ಗಮನ ಕೊಡಲಿಲ್ಲ. ಒಂದು ವೇಳೆ ವಿದೇಶದಲ್ಲಿರುವವರು ಅನುಕೂಲ ಪಡೆದರೆ, ಅದು ತಪ್ಪು ಎಂದರು.

ಸಿಎಲ್ಪಿ ಸಭೆಯಲ್ಲಿ ಗ್ಯಾರಂಟಿ ಪ್ರಸ್ತಾಪಕ್ಕೆ ಬಂತು: ಮುಂದುವರೆದು, ಅನುದಾನ ಬಿಡುಗಡೆ ವಿಳಂಬದ ಬಗ್ಗೆ ಕೆಲವರು ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದರು. ಸಮಯಕ್ಕೆ ಸರಿಯಾಗಿ ಬಿಡುಗಡೆಯಾದರೆ, ಕೆಲಸ ಮಾಡಲು ಸುಲಭವಾಗುತ್ತದೆ ಎಂದರು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು. ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ಮಾಡಿ ತಕ್ಷಣ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು ಎಂದು ತಿಳಿಸಿದರು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕೆಲವರು ಹೇಳಿದರು. ಮುಖ್ಯಮಂತ್ರಿಗಳು ರಿವ್ಯೂ ಮೀಟಂಗ್ ಮಾಡಿದಾಗ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಿದ್ದಾರೆ. ಇನ್ನು ಕೆಲ ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಮಾತನಾಡಿದರು ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಖಾಸಗಿ ಶಾಲೆ ಮಾನ್ಯತೆ ಬಗ್ಗೆ ವಿಶೇಷ ಸದನ ಸಮಿತಿ

ರಾಜ್ಯದ ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ವಿಶೇಷ ಸದನ ಸಮಿತಿ ರಚಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಿಯಮ 330ರ ಮೇರೆಗೆ ಕಾಂಗ್ರೆಸ್‌ ಸದಸ್ಯ ಪುಟ್ಟಣ್ಣ ಈ ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಈ ಮಾನ್ಯತೆ ನವೀಕರಣ ಸಂಬಂಧ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಗಳೊಂದಿಗೆ ಚರ್ಚಿಸಲಾಗಿದೆ. ಈ ಹಿಂದೆ ಅನುದಾನ/ಅನುದಾನರಹಿತ ಶಾಲೆಗಳಲ್ಲಿ ರಾಜ್ಯದ ಸಾಕಷ್ಟು ಮಂದಿ ವಿದ್ಯಾಭ್ಯಾಸ ಮಾಡಿದ್ದಾರೆ. ಹೀಗಾಗಿ ಈ ಶಾಲೆಗಳ ಸೇವೆಯನ್ನು ಪರಿಗಣಿಸಲಾಗಿದೆ ಎಂದರು.

ಮಾನ್ಯತೆ ನವೀಕರಣಕ್ಕೆ ಈ ಹಿಂದೆ 62 ನಿಯಮ ರೂಪಿಸಲಾಗಿತ್ತು. ನಾನು ಸಚಿವನಾದ ಬಳಿಕ 48ಕ್ಕೆ ಇಳಿಕೆ ಮಾಡಿದ್ದೇನೆ. ಮಾನ್ಯತೆ ನವೀಕರಣದಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದು ಗಮನಕ್ಕೆ ಬಂದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಸದನದ ಸದಸ್ಯರ ಒತ್ತಾಯದಂತೆ ಖಾಸಗಿ ಅನುದಾನಿತ/ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ಸದನ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಬಹಳ ಮುಖ್ಯ. ವಿಶೇಷ ಸದನ ಸಮಿತಿ ವರದಿ ಬರುವವರೆಗೂ ಮಾನ್ಯತೆ ನವೀಕರಣ ಸಂಬಂಧ ಹೊರಡಿಸಿರುವ ಆದೇಶವನ್ನು ಅನುಷ್ಠಾನಕ್ಕೆ ತರುವುದಿಲ್ಲ. ಮಕ್ಕಳು ಹಾಗೂ ಶಾಲೆಗಳಿಗೆ ತೊಂದರೆಯಾಗದಂತೆ ನಮ್ಮ ಇಲಾಖೆ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ, ಕಾಂಗ್ರೆಸ್‌ ಸದಸ್ಯ ಪುಟ್ಟಣ್ಣ, ಖಾಸಗಿ ಅನುದಾನಿತ/ ಅನುದಾನರಹಿತ ಶಾಲೆಗಳ ಮಾನ್ಯತೆ ನವೀಕರಣ ಸಂಬಂಧ ರೂಪಿಸಿರುವ ನಿಯಮಗಳು ಕಠಿಣವಾಗಿವೆ. ನವೀಕರಣ ಮಾಡುವ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸ್ಯಾಡಿಸ್ಟ್‌ಗಳು ಮತ್ತು ಭ್ರಷ್ಟಾಚಾರಿಗಳು ಸೇರಿ ನಿಯಮ ಮಾಡಿದಂತಿದೆ. ಮಾನ್ಯತೆ ನಿಯಮ ಸರಳೀಕರಣ ಮಾಡದಿದ್ದಲ್ಲಿ ಹಲವು ಖಾಸಗಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಇದರಿಂದ ಮಕ್ಕಳು ಬೀದಿಗೆ ಬೀಳಬೇಕಾಗುತ್ತದೆ. ಹೀಗಾಗಿ ಈ ಮಾನ್ಯತೆ ನವೀಕರಣ ಸಂಬಂಧ ಸದನ ಸಮಿತಿ ರಚಿಸಬೇಕು. ಸಮಿತಿ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.