ಸಾರಿಗೆ ಇಲಾಖೆಯಲ್ಲಿ ಸಿ ವೃಂದ ಸಿಬ್ಬಂದಿ ಹೆಚ್ಚಿನ ವ್ಯಾಸಂಗ ಮಾಡಲು ನಕಲು ಪ್ರಮಾಣ ಪತ್ರ ಪಡೆದು ಸಂಜೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರವೇಶ ಪಡೆದ ಸಂಬಂಧ ದಾಖಲೆ ನೀಡಿದರೆ ತನಿಖೆ ಮಾಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಧಾನ ಪರಿಷತ್ (ಡಿ.11): ಸಾರಿಗೆ ಇಲಾಖೆಯಲ್ಲಿ ಸಿ ವೃಂದ ಸಿಬ್ಬಂದಿ ಹೆಚ್ಚಿನ ವ್ಯಾಸಂಗ ಮಾಡಲು ನಕಲು ಸೇವಾನುಭವ ಪ್ರಮಾಣ ಪತ್ರ ಪಡೆದು ಸಂಜೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರವೇಶ ಪಡೆದ ಸಂಬಂಧ ದಾಖಲೆ ನೀಡಿದರೆ ತನಿಖೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನು ಬಾಹಿರವಾಗಿ ನಕಲು ಸೇವಾನುಭವ ಪ್ರಮಾಣ ಪತ್ರ ನೀಡಿ ಪ್ರವೇಶ ಪಡೆದ ಲಿಪಿಕ ಸಿಬ್ಬಂದಿ ವಿವರ ಸೇರಿದಂತೆ ಎಲ್ಲ ದಾಖಲೆಗಳನ್ನು ಸಲ್ಲಿಸಿದರೆ ಲೋಕಾಯುಕ್ತ ಸೇರಿದಂತೆ ಯಾವುದೇ ರೀತಿಯ ತನಿಖೆ ಮಾಡಲು ಸಿದ್ಧ ಎಂದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಟಿ.ಎ.ಶರವಣ ಅವರು, ಸಾರಿಗೆ ಇಲಾಖೆಯಲ್ಲಿ ಡಿಪ್ಲೊಮಾ ಆಟೋಮೊಬೈಲ್ ಪದವಿಯನ್ನು ಸಂಜೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಸಿ ಗ್ರೂಪ್ ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಲಬುರಗಿ, ನಾಗಮಂಗಲ, ತುಮಕೂರು ಸೇರಿದಂತೆ ದೂರದ ನಗರದಲ್ಲಿ ಇರುವ ಸಿಬ್ಬಂದಿ ಸಂಜೆ ತನಕ ಕಚೇರಿ ಕೆಲಸ ಮುಗಿಸಿ ಬೆಂಗಳೂರಿನ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅದೂ ಒಂದೇ ಕಾಲೇಜಿನಿಂದ 42 ಸಿಬ್ಬಂದಿ ಪ್ರಮಾಣ ಪತ್ರ ಪಡೆದಿದ್ದಾರೆ. ಇದನ್ನು ನೋಡಿದರೆ ಪ್ರಮಾಣ ಪತ್ರಗಳು ಮಾರಾಟ ಆಗಿರುವ ಸಂಶಯ ಕಂಡು ಬರುತ್ತಿದೆ. ಹೀಗಾಗಿ ಈ ಬಗ್ಗೆ ಎಸ್‌ಐಟಿಯಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಗ್ರೂಪ್ ಸಿ ವೃಂದದಿಂದ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಶೇ.5ರಷ್ಟು ಬಡ್ತಿ ನೀಡಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಹೆಚ್ಚಿನ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿದೆ. ನಕಲಿ ಸೇವಾನುಭವ ಪ್ರಮಾಣ ಪತ್ರ ನೀಡಿ ಸಂಜೆ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರೆ ಅಂತಹ ಪ್ರಮಾಣ ಪತ್ರ ಪರಿಶೀಲಿಸುವ ಜವಾಬ್ದಾರಿ ಸಾರಿಗೆ ಇಲಾಖೆಗೆ ಸಂಬಂಧ ಪಟ್ಟಿಲ್ಲ. ಆದರೂ ಇದರಲ್ಲಿ ಅಕ್ರಮ ನಡೆದಿರುವ ದಾಖಲೆ ನೀಡಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಿಗ್ಗಾಂವಿ ಬಸ್ ಮೆಕ್ಯಾನಿಕ್ ತರಬೇತಿ ಕೇಂದ್ರ ಉದ್ಘಾಟನೆ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವತಿಯಿಂದ ಶಿಗ್ಗಾಂವಿ ನೂತನ ಬಸ್ ಘಟಕ ಮತ್ತು ಚಾಲನಾ ಹಾಗೂ ಮೆಕ್ಯಾನಿಕ್ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ಡಿ. 12ರಂದು ಮಧ್ಯಾಹ್ನ 3 ಗಂಟೆಗೆ ಶಿಗ್ಗಾಂವಿ ಘಟಕದಲ್ಲಿ ಜರುಗಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟನೆ ನೆರವೇರಿಸಲಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಜ್ಯೋತಿ ಬೆಳಗಿಸುವಿಕೆ ಹಾಗೂ ಶಾಸಕರು ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಭರಮಗೌಡ (ರಾಜು) ಕಲಗೌಡ ಕಾಗಡೆ ಅವರು ತರಬೇತಿ ಕೇಂದ್ರದ ಚಾಲನೆ ನೀಡಲಿದ್ದಾರೆ. ಶಾಸಕರಾದ ಯಾಸೀರ ಅಹ್ಮದ್‌ಖಾನ ಪಠಾಣ ಅಧ್ಯಕ್ಷತೆ ವಹಿಸಲಿದ್ದು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

