Asianet Suvarna News Asianet Suvarna News

ಕರ್ನಾಟಕದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿ.ಕೆ.ಶಿವಕುಮಾರ್‌

ಕರ್ನಾಟಕದ ಗ್ಯಾರಂಟಿ ಯೋಜನೆಗಳು ಈ ದೇಶದ ರಾಜಕೀಯದಲ್ಲೇ ಒಂದು ಚಾರಿತ್ರಿಕ ನಿರ್ಧಾರ. ನಿರುದ್ಯೋಗ, ಗ್ಯಾಸ್‌ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಜನರ ಲೂಟಿಯಾಗಿತ್ತು. ಎಲ್ಲ ಕ್ಷೇತ್ರ, ಎಲ್ಲ ರಂಗದ ಜನರು ದರ ಏರಿಕೆಯಿಂದ ನರಳಿದ್ದರು. ಶ್ರೀಸಾಮಾನ್ಯನ ಪಿಕ್ ಪಾಕೆಟ್ ಆಗಿತ್ತು. ಇದರಿಂದ ನಲುಗಿದ್ದ ಜನರಿಗೆ ಸಹಾಯ ಮಾಡಬೇಕು ಎಂದು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. 

Karnataka Guarantee Schemes are Model for the Entire Country Says DK Shivakumar grg
Author
First Published Nov 21, 2023, 4:08 AM IST

ಎಸ್‌.ಗಿರೀಶ್‌ ಬಾಬು

ಬೆಂಗಳೂರು(ನ.21):  ಗ್ಯಾರಂಟಿ ಭರವಸೆಗಳ ಅಲೆಯೇರಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದ ಆಡಳಿತಕ್ಕೆ ಈಗ ಆರು ತಿಂಗಳು. ಈ ಆರು ತಿಂಗಳಲ್ಲಿ ಪಂಚ ಗ್ಯಾರಂಟಿಗಳ ಪೈಕಿ ನಾಲ್ಕು ಜಾರಿಗೆ ಬಂದಿವೆ. ಉಳಿದೊಂದನ್ನು ಜನವರಿ ವೇಳೆಗೆ ಜಾರಿಗೊಳಿಸುವ ಭರವಸೆಯನ್ನು ಆಡಳಿತ ಪಕ್ಷ ನೀಡಿದೆ. ಇದೇ ಅವಧಿಯಲ್ಲಿ 40 ಪರ್ಸೆಂಟ್ ಸರ್ಕಾರ ಎಂದು ಬಿಜೆಪಿ ಮೇಲೆ ಆರೋಪ ಮಾಡಿದ್ದ ಕಾಂಗ್ರೆಸ್‌ ಸರ್ಕಾರದ ಮೇಲೂ ಪರ್ಸೆಂಟೇಜ್ ಆಡಳಿತದ ಆರೋಪ ಬಂದಿದೆ. ಗ್ಯಾರಂಟಿ ಹೊರೆಯಿಂದ ಅಭಿವೃದ್ಧಿಗೆ ಹಣ ದೊರೆಯುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ದೂರಿದ್ದಾರೆ. ಇದೆಲ್ಲದರ ನಡುವೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಆರು ತಿಂಗಳ ಅವಧಿ ಹೇಗಿತ್ತು? ಗ್ಯಾರಂಟಿ ನಿಜಕ್ಕೂ ಯಶಸ್ವಿಯಾಗಿದೆಯೇ? ಸಿದ್ದರಾಮಯ್ಯ ಅವರೊಂದಿಗೆ ತಮ್ಮ ಸಂಬಂಧ ಹೇಗಿದೆ? ಪವರ್ ಶೇರಿಂಗ್‌ ಮಾತುಕತೆ ನಡೆದಿದ್ದು ನಿಜವೇ ಎಂಬಿತ್ಯಾದಿ ಪ್ರಶ್ನೆಗಳಿಗೆ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನದಲ್ಲಿ ಉತ್ತರಿಸಿದ್ದಾರೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌.

ಗ್ಯಾರಂಟಿ ಭರವಸೆಗಳ ಅಲೆಯೇರಿ ಅಧಿಕಾರಕ್ಕೆ ಬಂದಿರುವಿರಿ. ಮುಂದೆ ಲೋಕಸಭಾ ಚುನಾವಣೆಯಿದೆ. ಅದಕ್ಕೇನು ಕಾರ್ಯತಂತ್ರ?

ಕರ್ನಾಟಕದ ಗ್ಯಾರಂಟಿ ಯೋಜನೆಗಳು ಈ ದೇಶದ ರಾಜಕೀಯದಲ್ಲೇ ಒಂದು ಚಾರಿತ್ರಿಕ ನಿರ್ಧಾರ. ನಿರುದ್ಯೋಗ, ಗ್ಯಾಸ್‌ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಜನರ ಲೂಟಿಯಾಗಿತ್ತು. ಎಲ್ಲ ಕ್ಷೇತ್ರ, ಎಲ್ಲ ರಂಗದ ಜನರು ದರ ಏರಿಕೆಯಿಂದ ನರಳಿದ್ದರು. ಶ್ರೀಸಾಮಾನ್ಯನ ಪಿಕ್ ಪಾಕೆಟ್ ಆಗಿತ್ತು. ಇದರಿಂದ ನಲುಗಿದ್ದ ಜನರಿಗೆ ಸಹಾಯ ಮಾಡಬೇಕು ಎಂದು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತಂದೆವು. ಈ ಯೋಜನೆಯನ್ನು ಜಾರಿಗೆ ತಂದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜ್ಯಗಳ ನಾಯಕರು ಇದರಿಂದ ದೇಶ ದಿವಾಳಿಯಾಗುತ್ತದೆ ಎಂದು ಟೀಕೆ ಮಾಡಿದ್ದರು. ಆದರೆ, ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಮಧ್ಯಪ್ರದೇಶದಲ್ಲಿ ನಮ್ಮ ಗ್ಯಾರಂಟಿ ಯೋಜನೆಯ ನಕಲು ಮಾಡುತ್ತಿದ್ದಾರೆ. ನಾವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಮಂತ್ರಿ ಗ್ಯಾರಂಟಿ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ.

ಬಿಜೆಪಿಗೆ ಮತ ಹಾಕಿದರೆ ಗ್ಯಾರೆಂಟಿ ಯೋಜನೆ ಬಂದ್, ಡಿಕೆ ಶಿವಕುಮಾರ್ ಎಚ್ಚರಿಕೆ!

ಹಾಗಿದ್ದರೆ ಲೋಕಸಭಾ ಚುನಾವಣೆಗೆ ಈ ಉಚಿತ ಘೋಷಣೆಗಳ ಗ್ಯಾರಂಟಿಯೇ ನಿಮ್ಮ ಅಸ್ತ್ರವೇ?

ಇವು ಉಚಿತ ಯೋಜನೆಗಳಲ್ಲ. ದಿವಾಳಿಯಾಗುತ್ತಿರುವ, ಪಿಕ್ ಪಾಕೆಟ್‌ಗೊಳಗಾಗಿರುವ ದೇಶದ ಜನರ ಬದುಕು ಸರಿಪಡಿಸಲು ನೀಡಿರುವ ನೆರವಿನ ಯೋಜನೆಗಳು. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ತಾನು ಅಧಿಕಾರಕ್ಕೆ ಬಂದ ಕೂಡಲೇ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನೊಂದು ಯೋಜನೆಯನ್ನು ಜನವರಿ ವೇಳೆಗೆ ಕಾರ್ಯರೂಪಕ್ಕೆ ತರಲಾಗುವುದು. ಕಾಂಗ್ರೆಸ್‌ ಸರ್ಕಾರ ತಾನು ನೀಡಿದ ಭರವಸೆಯನ್ನು ಆರು ತಿಂಗಳಲ್ಲೇ ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನೀಡಿದ ಭರವಸೆಗಳೇನು? ಅವುಗಳನ್ನು ಜಾರಿಗೆ ತಂದಿದೆಯೇ? ಲೋಕಸಭಾ ಚುನಾವಣೆ ವೇಳೆ ಕೇಂದ್ರದ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ ಹಾಗೂ ರಾಜ್ಯದ ಕಾಂಗ್ರೆಸ್‌ ಪಕ್ಷ ನಡೆದುಕೊಂಡ ರೀತಿಯನ್ನು ಜನರು ಹೋಲಿಕೆ ಮಾಡಲಿದ್ದಾರೆ. ಹೀಗಾಗಿ, ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಲಿವೆ.

ಗ್ಯಾರಂಟಿ ಯೋಜನೆಗಳು ಜಾರಿಯಾದ ರೀತಿ ನಿಮಗೆ ಸಮಾಧಾನ ತಂದಿದೆಯೇ?

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಚಾಚೂ ತಪ್ಪದೇ ಜಾರಿಗೆ ತಂದಿದ್ದೇವೆ. ಈ ಯೋಜನೆ ಹೇಗೆ ಯಶಸ್ವಿಯಾಗಿದೆ ಎಂಬುದಕ್ಕೆ ಶಕ್ತಿ ಯೋಜನೆ ಅತ್ಯುತ್ತಮ ಉದಾಹರಣೆ. ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ಮಹಿಳೆಯರು ಮುಕ್ತ ಸಂಚಾರ ನಡೆಸಿದ್ದಾರೆ. ತಾವೊಬ್ಬರೇ ಹೋಗುತ್ತಿಲ್ಲ. ಜತೆಗೆ, ಗಂಡ-ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚಿದೆ. ಹೋಟೆಲ್ ಹಾಗೂ ಟೂರಿಸಂಗೆ ಬಲ ಬಂದಿದೆ. ನೋಡಿ, ಹಾಸನಾಂಬ ದೇವಸ್ಥಾನಕ್ಕೆ ಕಳೆದ ವರ್ಷ ಆರು ಲಕ್ಷ ಜನ ಬಂದಿದ್ದರು. 3.5 ಕೋಟಿ ರು. ಹುಂಡಿ ಹಣ ಬಂದಿತ್ತು. ಆದರೆ, ಈ ಬಾರಿ 14.5 ಲಕ್ಷ ಜನ ದೇವರ ದರ್ಶನ ಪಡೆದಿದ್ದಾರೆ. ಹುಂಡಿಗೆ 8.75 ಕೋಟಿ ರು. ಬಂದಿದೆ. ಇದು ಯೋಜನೆ ಯಾವ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂಬುದಕ್ಕೆ ನಿದರ್ಶನ.

ಆದರೆ, ಗ್ಯಾರಂಟಿ ಯೋಜನೆ ಹೊರೆ ರಾಜ್ಯದ ಅಭಿವೃದ್ಧಿಗೆ ತೊಡಕಾಗಿದೆಯಲ್ಲ?

ಹಾಗೇನಿಲ್ಲ. ಗ್ಯಾರಂಟಿ ಯೋಜನೆ ಜಾರಿಗೆ ತಂದರೂ ಬೊಮ್ಮಾಯಿ ಮಂಡಿಸಿದ್ದ ಬಜೆಟ್ ಗಾತ್ರವನ್ನು ನಾವು ಕಡಿತ ಮಾಡಲಿಲ್ಲ. ಕೆಲ ಅನುಪಯುಕ್ತ ಯೋಜನೆ ಕೈಬಿಟ್ಟಿದ್ದೇವೆ ಮತ್ತು ಮುಂದಿನ ಬಜೆಟ್‌ನಲ್ಲಿ ಪರಿಸ್ಥಿತಿ ನೋಡಿ ಕೆಲ ಹೊಸ ಯೋಜನೆ ತೆಗೆದುಕೊಳ್ಳೋಣ ಎಂದುಕೊಂಡಿದ್ದೇವೆ. ಅಷ್ಟು ಬಿಟ್ಟರೆ ಬಜೆಟ್‌ ಯಥಾವತ್‌ ಜಾರಿಯಾಗಿದೆಯಲ್ಲ.

ನಿಮ್ಮದೇ ಶಾಸಕರು ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರಲ್ಲ?

ಚುನಾವಣೆ ವೇಳೆ ಭರವಸೆ ನೀಡಿದಂತೆ ಮೊದಲು ಗ್ಯಾರಂಟಿ ಯೋಜನೆ ಜಾರಿ ಮಾಡಿ ಮಾತು ಉಳಿಸಿಕೊಳ್ಳೋಣ ಎಂದು ನಮ್ಮ ಶಾಸಕರಿಗೆ ನಾವು ಮನವರಿಕೆ ಮಾಡಿಕೊಟ್ಟಿದ್ದೇವೆ. ಉಳಿದಂತೆ ರಸ್ತೆ, ನೀರು ಹಾಗೂ ಗ್ರಾಮೀಣಾಭಿವೃದ್ಧಿಯೇ ಅಭಿವೃದ್ಧಿ ವಿಚಾರ ಅಲ್ಲವೇ. ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಿಲ್ಲ. ರಸ್ತೆಗಳ ಅಭಿವೃದ್ಧಿ ಎಂದಿನಂತೆ ನಡೆದಿದೆ. ರಾಜ್ಯ ತೀವ್ರ ಬರಗಾಲದಿಂದ ನರಳಿ 216 ತಾಲೂಕುಗಳು ಬರ ಪೀಡಿತವಾಗಿದ್ದರೂ ಕೇಂದ್ರ ರಾಜ್ಯದ ನೆರವಿಗೆ ಬಂದಿಲ್ಲ. ಅಷ್ಟೇ ಏಕೆ ನಿಯಮಾವಳಿ ಪ್ರಕಾರ ಇಂತಹ ಬರಸ್ಥಿತಿಯಲ್ಲಿ ನರೇಗಾ ಯೋಜನೆಯ ಕೂಲಿ ದಿನಗಳನ್ನು 100ರಿಂದ 150ಕ್ಕೆ ವಿಸ್ತರಿಸಬೇಕು ಎಂದಿದೆ. ಆದರೆ, ಕೇಂದ್ರ ಮಾಡುತ್ತಿಲ್ಲ. ಆದರೂ ನಮ್ಮ ಜನರನ್ನು ನಾವು ರಕ್ಷಿಸಬೇಕು ಎಂದು ರಾಜ್ಯ ಸರ್ಕಾರವೇ ಬರ ನಿರ್ವಹಣೆಗೆ ಬೇಕಾದ ಹಣವನ್ನು ಬಿಡುಗಡೆ ಮಾಡಿದೆ.

ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿ ಅಧಿಕಾರಕ್ಕೆ ಬಂದಿರಿ. ಈಗ ನಿಮ್ಮದು 60 ಪರ್ಸೆಂಟ್ ಸರ್ಕಾರ ಅಂತ ಬಿಜೆಪಿ ಆರೋಪಿಸುತ್ತಿದೆ?

ಜನ ನಮ್ಮನ್ನು ಸೋಲಿಸಿದ್ದಾರೆ, ಜನರ ಅಭಿಪ್ರಾಯ ಸ್ವೀಕಾರ ಮಾಡಬೇಕು ಎಂಬ ಮನಸ್ಥಿತಿ ಬಿಜೆಪಿಯವರಿಗೆ ಇಲ್ಲ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮನಸ್ಥಿತಿ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ಅವರಿಗೆ ತಡೆಯಲು ಆಗುತ್ತಿಲ್ಲ. ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆರು ತಿಂಗಳು ತೆಗೆದುಕೊಂಡರು. ತಡವಾಗಿಯಾದರೂ ಪ್ರತಿಪಕ್ಷ ನಾಯಕರಾದವರು ಸರ್ಕಾರಕ್ಕೆ ಉತ್ತಮ ಸಲಹೆ ನೀಡುತ್ತಾರೆ ಎಂದು ಭಾವಿಸಿದ್ದೆ. ನಮ್ಮ ತಪ್ಪು ಇದ್ದರೆ ಅದನ್ನು ತಿದ್ದುತ್ತಾರೆ, ಆಡಳಿತ ಸರಿಯಿಲ್ಲ, ಸಿದ್ಧಾಂತ ಸರಿಯಿಲ್ಲ ಎಂದು ಟೀಕೆ ಮಾಡುತ್ತಾರೆ ಎಂದು ಭಾವಿಸಿದ್ದೆ. ಆದರೆ, ಪ್ರತಿಪಕ್ಷ ನಾಯಕನಾಗಿ ಘೋಷಣೆಯಾದ ಕೂಡಲೇ ಆ ನಾಯಕರು ಸರ್ಕಾರವನ್ನು ಕಿತ್ತು ಹಾಕುತ್ತೇನೆ ಅಂತಾರೆ. ಕಿತ್ತು ಹಾಕಲು ಇದೇನಾ ಭತ್ತದ ಪೈರಾ...

ಜೆಡಿಎಸ್‌ ನಾಯಕ ಕುಮಾರಸ್ವಾಮಿ ಮತ್ತು ನೀವು ಜೋಡೆತ್ತು ಎಂದೇ ಖ್ಯಾತರಾಗಿದ್ರಿ. ಈಗ್ಯಾಕೆ ಈ ಪರಿ ಜಗಳ?

ಅದನ್ನು ಬೇರೆ ಸಂದರ್ಭದಲ್ಲಿ ಮಾತನಾಡೋಣ. ಈಗ ಸರ್ಕಾರ ಬಂದು ಆರು ತಿಂಗಳಾಗಿದೆ. ಗ್ಯಾರಂಟಿ ಬಗ್ಗೆ ಚರ್ಚಿಸೋಣ.

ಬಿಜೆಪಿಯು ಒಕ್ಕಲಿಗರಿಗೆ ಪ್ರತಿಪಕ್ಷ ನಾಯಕ ಹಾಗೂ ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ನೀಡಿದೆ?

ಹಿಂದುಳಿದವರಿಗೆ, ದಲಿತರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಬಿಜೆಪಿ ಎಂದಾದರೂ ಪ್ರಮುಖ ಹುದ್ದೆ ನೀಡಿದೆಯೇ? ಸದಾನಂದ ಗೌಡ, ಜಗದೀಶ್ ಶೆಟ್ಟರ್, ಯಡಿಯೂರಪ್ಪ ಹೀಗೆ ಅವರು ಅಧಿಕಾರ ನೀಡಿದ್ದೆಲ್ಲ ಯಾರಿಗೆ ಅಂತ ಗೊತ್ತಲ್ಲ. ಬಿಜೆಪಿಗೆ ಉಳಿದ ಜಾತಿಗಳ ನಾಯಕರು ಹಾಗೂ ಸಮಾಜ ಉಪ್ಪಿನಕಾಯಿ ಇದ್ದಂತೆ. ಸುಮ್ಮನೆ ಪಕ್ಕಕ್ಕೆ ಇಟ್ಟುಕೊಳ್ಳುತ್ತಾರೆ. ಅವಕಾಶ ಸಿಕ್ಕರೆ ಈ ದುರ್ಬಲ ವರ್ಗಗಳನ್ನು ವಿಭಜಿಸಲು ನೋಡುತ್ತಾರೆ.

ಕಾಂಗ್ರೆಸ್‌ 136 ಸಂಖ್ಯೆ ಮುಟ್ಟಲು ಒಕ್ಕಲಿಗ, ಲಿಂಗಾಯತರ ಬೆಂಬಲವೂ ಕಾರಣವಾಗಿತ್ತು. ಅದನ್ನು ಬಿಜೆಪಿ ಟಾರ್ಗೆಟ್ ಮಾಡಿದಂತಿದೆ?

ಒಬ್ಬ ಲೀಡರ್ ಅನ್ನು ಜತೆಗಿಟ್ಟುಕೊಂಡರೆ ಇಡೀ ಸಮಾಜ ಜತೆಯಾಗುತ್ತದೆ ಎಂದೇನಲ್ಲ. ಇಲ್ಲಿ ಜಾತಿಗಿಂತ ನೀತಿ ಮುಖ್ಯ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಅಥವಾ ರಾಜಕಾರಣಿಯೊಬ್ಬ ನಾಯಕ ಅನಿಸಿಕೊಳ್ಳಲು ಜನರು ಆತನ ನಾಯಕತ್ವ ಒಪ್ಪಬೇಕು. ದೇವೇಗೌಡರನ್ನು ಸಮಾಜ ನಾಯಕ ಎಂದು ಒಪ್ಪಿಕೊಂಡಿತು. ಅದೇ ರೀತಿ ರಾಮಕೃಷ್ಣ ಹೆಗಡೆ, ಎಸ್‌.ಎಂ.ಕೃಷ್ಣ ಹಾಗೂ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಒಪ್ಪಿ ಜನರು ಮತ ಚಲಾಯಿಸಿದರು. ಹೀಗಾಗಿ ಅವರು ನಾಯಕರಾದರು. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ನನ್ನ ಜಂಟಿ ನಾಯಕತ್ವವನ್ನು ನಮ್ಮ ಪಕ್ಷ ಜನರ ಮುಂದೆ ಇಟ್ಟಿತ್ತು. ಜನ ಅಧಿಕಾರ ನೀಡಿದ್ದಾರೆ. ಹೀಗೆ ಸಾಕಷ್ಟು ನೀರು ಕುಡಿದು, ಏಟು ತಿಂದು ಅನಂತರ ನಾಯಕ ಹುಟ್ಟುತ್ತಾನೆ. ಹುಟ್ಟಿದ ಗಂಡು ಕರುಗಳೆಲ್ಲ ಬಸವ ಆಗುವುದಿಲ್ಲ.

136 ಸಂಖ್ಯಾಬಲವಿದ್ದರೂ ಅನ್ಯಪಕ್ಷದವರ ಮೇಲೆ ನಿಮಗ್ಯಾಕೆ ಮೋಹ?

ನಾವು ಯಾರಿಗೂ ಕೈ ಹಾಕಿಲ್ಲವಲ್ಲ. ಕೆಲವರು ನೀತಿ ನಂಬಿದ್ದಾರೆ, ಬರುತ್ತಿದ್ದಾರೆ ಅಷ್ಟೆ..

ಸದ್ಯಕ್ಕೆ ಮಾಜಿ, ಮುಂದೆ ಹಾಲಿ ಶಾಸಕರು ಬರುತ್ತಾರೆ ಎಂದಿದ್ದೀರಲ್ಲ?

ಇಲ್ಲ, ನನ್ನ ಬಾಯಲ್ಲಿ ಆ ಮಾತು ಇನ್ನೂ ಬಂದಿಲ್ಲ. ನೋಡಿ, ನಮಗೆ ಶಕ್ತಿ ಇಲ್ಲದ ಕ್ಷೇತ್ರಗಳಲ್ಲಿ ಅನ್ಯ ಪಕ್ಷಗಳಿಂದ ನಾಯಕರು ಬರುತ್ತಾರೆ ಎಂದರೆ ಅವರನ್ನು ಕರೆದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ನಾನು ಬೆಂಗಳೂರು ಸಚಿವನಾಗಿದ್ದೇನೆ. ಜತೆಗೆ ಕೆಪಿಸಿಸಿ ಅಧ್ಯಕ್ಷ ಕೂಡ. ಹೀಗಾಗಿ ಬೆಂಗಳೂರಿನಲ್ಲಿ ಶೇ.5ರಷ್ಟು ವೋಟ್ ಶೇರ್ ಹೆಚ್ಚು ಮಾಡಲಿಲ್ಲ ಅಂದ್ರೆ ಹೇಗೆ? ಹೀಗಾಗಿ ಬೇರೆ ಪಕ್ಷದ ನಾಯಕರು ಬಂದಾಗ ಸೇರಿಸಿಕೊಳ್ಳುತ್ತಿದ್ದೇವೆ.

ಟೆಂಟಲ್ಲಿ ನೀಲಿ ಚಿತ್ರ ತೋರಿಸಿ ಜೀವನ ಮಾಡಿದವನು ಡಿಕೆಶಿ: ಎಚ್‌ಡಿಕೆ ವಾಗ್ದಾಳಿ

ಬಿಜೆಪಿಯಲ್ಲಿ ಅಸಮಾಧಾನಿತರು ನಿಮ್ಮ ಟಚ್‌ನಲ್ಲಿ ಇದ್ದಾರಂತಲ್ಲ?

ಅದನ್ನು ನಾನು ಮಾತನಾಡಲು ಹೋಗುವುದಿಲ್ಲ. ಈಗ ಅಭಿವೃದ್ಧಿ ವಿಷಯ, ಗ್ಯಾರಂಟಿ ವಿಷಯ ಮಾತ್ರ ಮಾತನಾಡುತ್ತೇನೆ. ಜನರಿಗೆ ಕೊಟ್ಟ ಮಾತನ್ನು ಮೊದಲು ಉಳಿಸಿಕೊಳ್ಳೋಣ. ಅನಂತರ ರಾಜಕಾರಣ ಮಾತನಾಡೋಣ.

ನಿಮ್ಮ ಹಾಗೂ ಸಿದ್ದರಾಮಯ್ಯನವರ ಒಗ್ಗಟ್ಟು ಚುನಾವಣಾ ಗೆಲುವಿಗೆ ಕಾರಣವಾಗಿತ್ತು. ಈಗ ಅದು ಇದ್ದಂತಿಲ್ಲ?

ನೀವು ಮಾಧ್ಯಮಗಳು ಏನು ಬೇಕಾದರೂ ಕ್ರಿಯೇಟ್ ಮಾಡಿ. ಪ್ರತಿಪಕ್ಷಗಳು ಬೇಕಾದ್ದು ಬಿಂಬಿಸಿಕೊಳ್ಳಲಿ. ನಾವು ತಲೆಕೆಡಿಸಿಕೊಳ್ಳುವುದಿಲ್ಲ. ರಾಜ್ಯದ ಜನತೆಯ ಅಭ್ಯುದಯಕ್ಕೆ ನಾನು ಮತ್ತು ಸಿದ್ದರಾಮಯ್ಯ ಬದ್ಧತೆ ಹೊಂದಿದ್ದೇವೆ. ಚುನಾವಣೆ ವೇಳೆ ಉತ್ತಮ ಆಡಳಿತ ನೀಡುತ್ತೇವೆ ಎಂದು ಮಾತು ಕೊಟ್ಟಿದ್ದೆವು. ಆ ಬಗ್ಗೆ ಮಾತ್ರ ನಮ್ಮ ಗಮನವಿದೆ.

Follow Us:
Download App:
  • android
  • ios