ಮೆಟ್ರೋ ದರ ಏರಿಕೆ ವಿಚಾರದಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ದರ ಏರಿಕೆಗೆ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ, ಕೇಂದ್ರ ಸರ್ಕಾರವೇ ಕಾರಣ ಎಂದು ಅವರು ಹೇಳಿದ್ದಾರೆ. ಬಿಜೆಪಿ ಸಂಸದರು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಲು ಧೈರ್ಯ ತೋರುತ್ತಿಲ್ಲ ಎಂದು ಟೀಕಿಸಿದ್ದಾರೆ.

ಬೆಂಗಳೂರು (ಫೆ.17): ಮೆಟ್ರೋ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಬಿಜೆಪಿ ಗೂಬೆ ಕೂರಿಸುತ್ತಿದೆ. ಬಿಜೆಪಿ ಅವರು ಎಷ್ಟು ದಿನ ಈ ರೀತಿ ಬೂಟಾಟಿಕೆ ರಾಜಕೀಯ ಮಾಡುತ್ತಿದ್ದಾರೆ. ರೈಲ್ವೆ ಸಚಿವರಿಗೂ ಸುಳ್ಳಿನ ಸರದಾರ ಎಂಬ ಕುಖ್ಯಾತಿ ನೀಡಿದ ಕೀರ್ತಿ ಬಿಜೆಪಿಗೆಗೆ ಸಲ್ಲುತ್ತದೆ. ಬಿಜೆಪಿ ಅಂದರೆ ಬುರುಡೆ ಜನರ ಪಕ್ಷ. ರಾಜ್ಯ ಸರ್ಕಾರಕ್ಕೂ ಮೆಟ್ರೋ ದರ ಏರಿಕೆಗೂ ಸಂಬಂಧವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಸುಳ್ಳು ಹೇಳೋದ್ರಲ್ಲಿ ಇವರನ್ನು ಬಿಟ್ರೆ ಯಾರು ಇಲ್ಲ. ರಾಜ್ಯ, ದೇಶದಲ್ಲಿ ಏನೇ ಒಳ್ಳೆಯದಾದರೂ ಬಿಜೆಪಿ ಅವರು ಕ್ರೆಡಿಟ್ ತಗೋತಾರೆ. ಇಲ್ಲ ಅಂದರೆ ಕಾಂಗ್ರೆಸ್ ಮೇಲೆ ಹಾಕುತ್ತಾರೆ. ಕೇಂದ್ರದ ಸಚಿವರ ಕೈಯಲ್ಲಿ ಸುಳ್ಳು ಹೇಳಿಸುತ್ತಾರೆ. ಬಿಜೆಪಿ ಅವರಿಗೆ ತಿಳುವಳಿಕೆ ಇಲ್ಲದವರು. ಬಿಜೆಪಿಯವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಕರೆಸಿ ಸುದ್ದೊಗೋಷ್ಠಿ ಮಾಡಿಸಿದ್ದಾರೆ. ಈ ವೇಳೆ ಯಾವುದೇ ಅಂಜು-ಅಳಕು ಇಲ್ಲದೆ ಸುಳ್ಳು ಹೇಳಿಸುತ್ತಾರೆ. ಕೇಂದ್ರ ಸಚಿವರು ಅಜ್ಞಾನಿಗಳೇ. ಇದು ಬುರುಡೆ ಪಕ್ಷದ ತಂತ್ರಗಾರಿಕೆ. ಕೇಂದ್ರ ಸಚಿವರಿಗೆ ಸರಿಯಾದ ಮಾಹಿತಿ ಇಲ್ಲ. ಇಂತಹವರ ಕೈಯಲ್ಲಿ ರೈಲ್ವೆ ಇಲಾಖೆ ಸಿಕ್ಕಿದೆ ಎಂದು ಆಕ್ರೋಶ ಹೊರಹಾಕಿದರು.

ರೈಲ್ವೆ ಇಲಾಖೆ ಹಾಗೂ ಮೆಟ್ರೋ ವಿಷಯ ಬಂದ ಕೂಡಲೇ ಪಿ.ಸಿ. ಮೋಹನ್, ತೇಜಸ್ವಿಸೂರ್ಯ ನಾವೇ ಮೆಟ್ರೋ ತಂದಿದ್ದು ಅನ್ನೋ ರೀತಿ ಮಾತಾಡ್ತಾರೆ. ಆದರೆ, ಬೆಂಗಳೂರಿಗೆ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಮೆಟ್ರೋ ಬಂದಿದೆ. ಕೆಲವರು ಫೋಸ್ ಕೊಡೋ ಕೆಲಸ ಮಾಡ್ತಾರೆ. ಪ್ರಹ್ಲಾದ್ ಜೋಶಿ ಕೂಡಾ ಸುಳ್ಳು ಹೇಳ್ತಾರೆ. ಬೊಮ್ಮಾಯಿ, ಶೆಟ್ಟರ್ ಕೂಡಾ ಮೆಟ್ರೋ ದರ ರಾಜ್ಯ ಏರಿಕೆ ಮಾಡಿದ್ದು ಅಂತಾರೆ. ಮಾಜಿ ಮುಖ್ಯಮಂತ್ರಿ ಆದವರು ಹೀಗೆ ಹಸಿ ಸುಳ್ಳು ಹೇಳ್ತಾರೆ. ಇವರಿಗೆ ಸಿಎಂ ಆಗುವುದಕ್ಕೆ ಅರ್ಹತೆಯೇ ಇರಲಿಲ್ಲ. ಅಂತವರನ್ನ ಬಿಜೆಪಿ ಸಿಎಂ ಮಾಡಿದೆ ಎಂದರು.

ಇದನ್ನೂ ಓದಿ: ನಮ್ಮ ಮೆಟ್ರೋ ದರ ಏರಿಕೆ ಮಾಹಾನಾಟಕದಲ್ಲಿ ರಾಜ್ಯ ಸರ್ಕಾರದ ಪಾತ್ರ ಬಿಚ್ಚಿಟ್ಟ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್!

ದೇಶದಲ್ಲಿ ಎಲ್ಲಾ ಮೆಟ್ರೋಗಳು ಕೇಂದ್ರ ನಗರಾಭಿವೃದ್ಧಿ ಇಲಾಖೆ ಅಡಿಯಲ್ಲಿ ಬರುತ್ತವೆ. ಮೆಟ್ರೋಗಳಿಗೆ ಸಂಬಂಧಿಸಿದಂತೆ ಬೋರ್ಡ್ ಇರುತ್ತದೆ. ದರ ಏರಿಕೆಗೆ ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆಯುತ್ತಾರೆ. ಪತ್ರ ಬರೆದ ಮೇಲೆ ಸಮಿತಿ ರಚನೆ ಮಾಡುತ್ತಾರೆ. ಮೆಟ್ರೋ ಮಂಡಳಿ ರಚನೆ ಮಾಡುತ್ತಾರೆ. ಸಮಿತಿಯ ಅಧ್ಯಕ್ಷರು ನಿವೃತ್ತಿ ಜಡ್ಜ್ ತಾರಿಣಿ, ಕೇಂದ್ರದ ಪ್ರತಿನಿಧಿ ಸತೀಂದ್ರ ಪಾಲ್ ಸಿಂಗ್, ರಾಜ್ಯದ ಪ್ರತಿನಿಧಿ ರಮಣರೆಡ್ಡಿ ಇದ್ದರು. ಈ ಸಮಿತಿ ಸಭೆ ಮಾಡಿ ಎಷ್ಟು ಏರಿಕೆ ಆಗಬೇಕು ಅಂತ ತೀರ್ಮಾನ ಮಾಡುತ್ತದೆ. ಹೀಗಾಗಿ, ರಾಜ್ಯ ಸರ್ಕಾರಕ್ಕೂ ಮೆಟ್ರೋ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ಸಮಿತಿಯವರೇ ಕೇಂದ್ರಕ್ಕೆ ವರದಿ ಕೊಡುತ್ತಾರೆ. ಇದಾದ ನಂತರ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ ದರ ಏರಿಕೆ ಆದೇಶ ಮಾಡಿತ್ತಾರೆ. ದರ ಏರಿಕೆ ಬಗ್ಗೆ ಮಂಡಳಿ ಒಪ್ಪಿಗೆ ಪಡೆದು ದರ ಏರಿಕೆ ಆಗಿರೋದು ಎಂದು ಹೇಳಿದರು.

ಬೆಂಗಳೂರಿನ ನಮ್ಮ ಮೆಟ್ರೋ ದರವನ್ನು ರಾಜ್ಯ ಸರ್ಕಾರ ಏರಿಕೆ ಮಾಡಿಲ್ಲ. ರಾಜ್ಯ ಸರ್ಕಾರಕ್ಕೂ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ನಿಯಮದ ಪ್ರಕಾರ ಮಂಡಳಿಯ ಶಿಫಾರಸಿನ ಮೇಲೆ ದರ ಏರಿಕೆ ಆಗಿರೋದು. ಸಿಎಂ ಅವರು ಜನರ ಹಿತದೃಷ್ಟಿಯಿಂದ ಕಡಿಮೆ ‌ಮಾಡಿ ಅಂತ ಹೇಳಿದ್ದಾರೆ. ಹೀಗಾಗಿ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ದರ ಇಳಿಕೆ ಬಗ್ಗೆ ಮಾತಾಡಿದ್ದಾರೆ. ಮೂರು ಬಿಟ್ಟವರು ಊರಿಗೆ ದೊಡ್ಡವರು. ಬಿಜೆಪಿ ಅವರು ವಸ್ತುಸ್ಥಿತಿ ಬಿಟ್ಟು ಕಾಂಗ್ರೆಸ್ ಬಗ್ಗೆ ಆರೋಪ ಮಾಡ್ತಾರೆ. ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಏನ್ ಸಂಬಂಧ.? ಮಂಡಳಿ ಎಷ್ಟು ಏರಿಕೆ ಮಾಡಲು ಶಿಫಾರಸು ಮಾಡಿದೆ? ಅಂತ ನಮ್ಮ ಬಳಿ ಮಾಹಿತಿ ಇಲ್ಲ. ಮೆಟ್ರೋ ಮಂಡಳಿ ಕೇಂದ್ರಕ್ಕೆ ಎಷ್ಟು ದರ ಏರಿಕೆಗೆ ಪ್ರಸ್ತಾಪ ಮಾಡಿದೆ ಅಂತ ನಮಗೆ ಗೊತ್ತಿಲ್ಲ. ಅದು ಸಿಕ್ರೆಟ್ ಆಗಿರುತ್ತದೆ. ಅದರ ಬಗ್ಗೆ ಯಾರಿಗೂ ಗೊತ್ತಾಗಲ್ಲ ಎಂದ ರಾಮಲಿಂಗಾರೆಡ್ಡಿ ಹೇಳಿದರು.

ಇದನ್ನೂ ಓದಿ: ನಮ್ಮ ಮೆಟ್ರೋ ದರ ಏರಿಕೆಗೆ ಜನಾಕ್ರೋಶ ಬೆನ್ನಲ್ಲೇ ಬೇಕಾಬಿಟ್ಟಿ ಬೆಲೆ ತಗ್ಗಿಸಲು ನಿರ್ಧಾರ; ನಾಳೆಯಿಂದ ಹೊಸದರ ಜಾರಿ!

ಮೆಟ್ರೋದ ದರ ಇಷ್ಟ ಏರಿಕೆ ಮಾಡಿದ್ದು ತಪ್ಪು. ಇದು ಆಗಬಾರದಿತ್ತು. ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಡ್ತೀವಿ. ಕೇಂದ್ರ ನಮಗೆ ಸಬ್ಸಿಡಿ ಕೊಡಲಿ. ನಮ್ಮ ಬಳಿ ಜಾಸ್ತಿ ಹಣ ಪಡೆದು ನಮಗೆ ಕಡಿಮೆ ಹಣ ಕೊಟ್ಟರೆ ಹೇಗೆ.? ದರ ಏರಿಕೆ ಜನಕ್ಕೆ ಹೊರೆ ಆಗುತ್ತದೆ. ನಾನು ಏರಿಕೆ ಮಾಡಬಾರದು ಅಂತ ಹೇಳ್ತೀನಿ. ಅದಕ್ಕೆ ನಾನು ಕೇಂದ್ರ ಸರ್ಕಾರ ಸಬ್ಸಿಡಿ ಕೊಡಲಿ ಅಂತ ಹೇಳ್ತೀನಿ. ಬಿಜೆಪಿ ಅವರು ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಲಿ. ಮೆಟ್ರೋ ದರ ಏರಿಕೆ ಆಗಿರೋದಕ್ಕೆ ಕೇಂದ್ರ ಕಾರಣ. ಪ್ರಧಾನಿ ಮೋದಿಯನ್ನು ಕೇಳುವುದಕಕೆ ರಾಜ್ಯದ ಬಿಜೆಪಿ ಸಂಸದರಿಗೆ ಧಮ್ ಇಲ್ಲ ಎಂದು ಹೇಳಿದರು.