ಬೆಂಗಳೂರು[ಫೆ.19]: ‘ದುಡ್ಡಿಲ್ಲ, ಕಾಸಿಲ್ಲ. ಹೆಸರು ಮಾತ್ರ ಸಂಪತ್ತಯ್ಯಂಗಾರ್‌’ ಎಂಬಂತೆ ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿಯಾಗಿದೆ. ರಾಜ್ಯಪಾಲರ ಭಾಷಣ ಖುಷಿ ಕೊಡುತ್ತದೆ. ಆದರೆ ವಾಸ್ತವದಿಂದ ಕೂಡಿಲ್ಲ ಎಂದು ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಪ್ರವಾಹದಿಂದ ಮೂರು ಲಕ್ಷ ಮನೆ ಬಿದ್ದಿದೆ ಎಂದು ಹೇಳುತ್ತೀರಿ, ಈ ಪೈಕಿ ಎಷ್ಟುಮನೆ ಕಟ್ಟಿದ್ದೀರಿ? ಸಂತ್ರಸ್ತರು ಈಗಲೂ ಕಣ್ಣೀರಿಡುತ್ತಿದ್ದಾರೆ. ನಿಮ್ಮ ಹತ್ತಿರ ದುಡ್ಡಿಲ್ಲ, ಬಿದ್ದ ಮನೆಗಳ ಸಮೀಕ್ಷೆಯನ್ನೇ ಮಾಡಿಲ್ಲ. ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಎಷ್ಟುತೆರಿಗೆ ಸಂಗ್ರಹವಾಗಿದೆ, ಎಷ್ಟುವೆಚ್ಚವಾಗಿದೆ? ಕೇಂದ್ರದಿಂದ ಜಿಎಸ್‌ಟಿ ಅಡಿ ಬರಬೇಕಾದ ಪರಿಹಾರದ ಮೊತ್ತ ಎಷ್ಟು? ನರೇಗಾ ಯೋಜನೆಯಡಿ ಎಷ್ಟುಹಣ ಬಿಡುಗಡೆಯಾಗಿದೆ ಎಂಬ ವಿವರಗಳ ಶ್ವೇತಪತ್ರವನ್ನು ಸರ್ಕಾರ ರಾಜ್ಯಪಾಲರ ಭಾಷಣದ ಮೇಲೆ ಉತ್ತರ ನೀಡುವ ಸಂದರ್ಭದಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿದರು.

'ಸರ್ಕಾರ ಬೀಳಿಸಿದ 17 ಶಾಸಕರ ಫೋಟೋಕ್ಕೆ ಪೂಜೆ ಮಾಡಬೇಕು!'

ಸಿಎಎ, ಎನ್‌ಆರ್‌ಸಿ ಕಾಯ್ದೆ ಹಿನ್ನೆಲೆಯಲ್ಲಿ ತಮ್ಮ ಹಾಸ್ಯ ಮಿಶ್ರಿತ ಮೊನಚು ಮಾತಿನಿಂದಲೇ ಮಾತನಾಡಿದ ಇಬ್ರಾಹಿಂ, ಬೇರೆ ಕಡೆ ಹಿಂದು-ಮುಸ್ಲಿಂ ಹೆಸರಿನಲ್ಲಿ ಚುನಾವಣೆ ನಡೆಯಬಹುದು. ಆದರೆ ಕರ್ನಾಟಕ ಸೂಫಿ, ಸಂತರ ನಾಡು. ಇಲ್ಲಿ ಎಂದೂ ಕೂಡ ಹಿಂದು, ಮುಸ್ಲಿಂ ಹೆಸರಿನಲ್ಲಿ ಚುನಾವಣೆ ನಡೆಯುವುದಿಲ್ಲ. ಇಲ್ಲಿ ಲಿಂಗಾಯತ, ಒಕ್ಕಲಿಗ, ಕುರುಬ, ಹಿಂದುಳಿದ ವರ್ಗ ಮುಂತಾದ ಜಾತಿಗಳ ಹೆಸರಿನಲ್ಲಿ ಚುನಾವಣೆ ನಡೆಯುತ್ತದೆ. ರಾಜ್ಯದಲ್ಲಿ ಲಿಂಗಾಯತ ಮಠಗಳು ಸಾಕ್ಷರತೆ ಹೆಚ್ಚಿಸುವಲ್ಲಿ ದೊಡ್ಡ ಕೊಡುಗೆ ನೀಡಿವೆ. ಇಲ್ಲಿಯ ವಿವಿಧ ಮಠಗಳು ಸೇರಿದಂತೆ ಧರ್ಮಸ್ಥಳ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ದಾಸೋಹ ದೇಶದ ಬೇರೆ ಎಲ್ಲಿಯೂ ಇಲ್ಲ ಎಂಬುದನ್ನು ಮರೆಯಬಾರದು ಎಂದರು.

ಪ್ರಸ್ತ ಮಾಡಲು ಬಿಡುತ್ತಿಲ್ಲ:

ಯಡಿಯೂರಪ್ಪ ಹೋರಾಟದಿಂದ ಮೇಲೆ ಬಂದ ನಾಯಕ. ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿ. ಹಾಗಾಗಿ ಅವರು ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಗಟ್ಟಿಯಾಗಿ ನಿಲ್ಲಬೇಕು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲು ನೀಡುವಂತೆ ಕೇಳಬೇಕು. ಆದರೆ ಹೈಕಮಾಂಡ್‌ ಅವರನ್ನು ಮುಕ್ತವಾಗಿ ಆಡಳಿತ ಮಾಡಲು ಬಿಡುತ್ತಿಲ್ಲ. ಯಡಿಯೂರಪ್ಪ ಅವರಿಗೆ ಮದುವೆ ಮಾಡಲಾಗಿದೆ, ಆದರೆ ಪ್ರಸ್ತ ಮಾಡಲು ಬಿಡುತ್ತಿಲ್ಲ ಎಂಬಂತಾಗಿದೆ ಎಂದಾಗ ಸಭೆಯಲ್ಲಿ ನಗು ಕಾಣಿಸಿಕೊಂಡಿತು.

'ಟ್ರಂಪ್‌ಗೆ ಆರ್ಥಿಕ ಕುಸಿತ ಕಾಣದಂತೆ ಯಾವ ಗೋಡೆ ಕಟ್ತೀರಿ?'

ಗೌರ್ನರ್‌ ಭಾಷಣ ರಾಜನ ಖಾಲಿ ಭರವಸೆ

ಆಸ್ಥಾನದಲ್ಲಿ ಹಾಡು ಹೇಳಿದ ಗಾಯಕನಿಗೆ ಮಹಾರಾಜ ಖುಷಿಯಿಂದ 50 ಎಕರೆ ಕೊಡುವುದಾಗಿ ಹೇಳುತ್ತಾನೆ. ಇದರಿಂದ ಖುಷಿಯಾದ ಗಾಯಕ ಇನ್ನೂ ಚೆನ್ನಾಗಿ ಹಾಡಿದಾಗ ಮಹಾರಾಜ 100 ಎಕರೆ ಕೊಡುವುದಾಗಿ ಹೇಳುತ್ತಾನೆ. ಆದರೆ ಬಹಳ ದಿನ ಕಾದರೂ ಜಮೀನು ಕೊಡದೇ ಇದ್ದಾಗ ಗಾಯಕ ರಾಜನ ಬಳಿ ಹೋಗಿ ಜಮೀನು ಕೊಡಲಿಲ್ಲ ಎಂದು ಹೇಳುತ್ತಾನೆ. ಆಗ ರಾಜ ನಿನ್ನ ಹಾಡಿನಿಂದ ನಾನು ಖುಷಿಯಾದೆ, ಅದಕ್ಕೆ ನಾನು ನಿನ್ನ ಖುಷಿ ಜಾಸ್ತಿ ಮಾಡಲು ಭೂಮಿ ಕೊಡುವುದಾಗಿ ಹೇಳಿದೆ. ನನ್ನ ಖುಷಿಗೆ ನೀನು ಹಾಡಿದೆ, ನಿನ್ನ ಖುಷಿಗೆ ನಾನು ಜಮೀನು ಕೊಡುವುದಾಗಿ ಹೇಳಿದೆ. ಹಾಗಾಗಿ ನೀನು ನನಗೆ ಏನೂ ಕೊಡಲಿಲ್ಲ. ನಾನೂ ನಿನಗೆ ಏನೂ ಕೊಡಲಿಲ್ಲ ಎಂದು ಹೇಳಿದ. ರಾಜ್ಯಪಾಲರ ಭಾಷಣವೂ ಇದೇ ರೀತಿ ಇದೆ ಎಂದು ಸಿ.ಎಂ. ಇಬ್ರಾಹಿಂ ವರ್ಣಿಸಿದಾಗ ಸದನದಲ್ಲಿ ನಗು ತುಂಬಿಕೊಂಡಿತು.