ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬೆಂಗಳೂರು (ನ.06): ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆಯಂತೆ ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್ ಕಬ್ಬಿಗೆ ₹3,300 ಹಾಗೂ ರಾಜ್ಯ ಸರ್ಕಾರ ₹200 ನೀಡಿ ರೈತರ ಬೇಡಿಕೆ ಈಡೇರಿಸಬೇಕು. ರಾಜ್ಯದ ಕಬ್ಬು ಬೆಳೆಗಾರರು ನ್ಯಾಯ ಸಮ್ಮತ ಬೆಲೆ ನಿಗದಿ ಆಗಬೇಕೆಂದು ಏಳನೇ ದಿನದ ಹೋರಾಟ ಮಾಡುತ್ತಿದ್ದಾರೆ.
ರೈತರ ಬಗ್ಗೆ ಅಸಡ್ಡೆ ಭಾವನೆ ಹೊಂದಿರುವ ಸಿದ್ದರಾಮಯ್ಯ ಅವರಿಗೆ ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಮಯ ಸಿಗುತ್ತಿಲ್ಲ. ಹೀಗಾಗಿ ರೈತರ ಸಮಸ್ಯೆ ಪರಿಹರಿಸಲು ಅವರಿಗೆ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸರ್ಕಾರ ಎರಡು ರೀತಿಯಲ್ಲಿ ಪರಿಹಾರ ಕೊಡಬಹುದು. ಸುಮಾರು 27 ಸಾವಿರ ಕೊಟಿ ರು. ಸರ್ಕಾರಕ್ಕೆ ಸಕ್ಕರೆ ಹಾಗೂ ಇತರ ಉಪ ಉತ್ಪನ್ನಗಳ ಮೂಲಕ ಆದಾಯ ಬರುತ್ತದೆ. ಇದರಲ್ಲಿ ಸರ್ಕಾರ ಪ್ರತಿ ಟನ್ ಗೆ 200 ರು. ಕೊಡಬೇಕು. ಸಕ್ಕರೆ ಕಾರ್ಖಾನೆ ಮಾಲಿಕರು ಪ್ರತಿ ಟನ್ ಕಬ್ಬಿಗೆ 3,300 ರು. ಕೊಡಲು ಮುಂದೆ ಬರಬೇಕು. ಇದರಿಂದ ರೈತರಿಗೆ ಪ್ರತಿ ಟನ್ ಕಬ್ಬಿಗೆ 3,500 ರು. ದರ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಸಕ್ಕರೆಯ ಜತೆಗೆ ವಿದ್ಯುತ್ ಉತ್ಪಾದನೆಯಾಗುತ್ತದೆ. ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆ ಮಾಲಿಕರೊಂದಿಗೆ ಪಿಪಿಎ ಅಗ್ರಿಮೆಂಟ್ ಆಗಿದೆ. ಅಲ್ಲಿ ಕಾರ್ಖಾನೆ ಮಾಲೀಕರಿಗೆ ಪ್ರತಿ ಯುನಿಟ್ ಗೆ 5.5 ರು. ಸಿಗುತ್ತದೆ. ಅದೇ ರೀತಿ ರಾಜ್ಯದಲ್ಲಿ ಒಪ್ಪಂದ ಮಾಡಿಕೊಂಡರೆ ಈಗ ನೀಡುತ್ತಿರುವ ಪ್ರತಿ ಯುನಿಟ್ ಗೆ 3 ರು. ಬದಲು 5.5 ರು. ದೊರೆಯುತ್ತದೆ. ಇದರಿಂದ ಕಬ್ಬಿಗೆ ಹೆಚ್ಚಿಗೆ ದರ ಕೊಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನಗಿರುವ ಅಧಿಕಾರ ಚಲಾವಣೆ ಮಾಡಿ, ಕಬ್ಬಿನ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ರೈತರ ನ್ಯಾಯ ಸಮ್ಮತ ಬೇಡಿಕೆಯಂತೆ ದರ ಪಟ್ಟಿ ನಿಗದಿ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ಸಿಎಂ ಕುರ್ಚಿ ಚರ್ಚೆಯಲ್ಲೆ ದಿನ ನೂಕುತ್ತಿರುವ ಕಾಂಗ್ರೆಸ್ ಸರ್ಕಾರ
ರಾಜ್ಯ ಸರ್ಕಾರದ ನವೆಂಬರ್ ರಾಜಕೀಯ ಕ್ರಾಂತಿ ಖಾಸಗಿ ವ್ಯವಹಾರವಾಗಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಾವಿಬ್ಬರೇ ಮಾತನಾಡಿಕೊಳ್ಳುತ್ತೇವೆ ಎಂದು ವ್ಯವಹಾರ ಮಾಡಿಕೊಂಡಿದ್ದಾರೆ. ಉಳಿದ ಮಂತ್ರಿ, ಶಾಸಕರಿಗೆ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಈ ಸರ್ಕಾರ ಬಂದಾಗಿನಿಂದ ಸಿಎಂ ಬದಲಾವಣೆ ಚರ್ಚೆಯಲ್ಲಿಯೇ ದಿನ ನೂಕುತ್ತ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಹೇಳಿದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬ ವಿಷಯ ಖಾಸಗೀಕರಣಗೊಂಡಿರುವುದು ಇದೇ ಮೊದಲು ಎಂದರು.
ಕರ್ನಾಟಕದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಸರ್ಕಾರ ರೈತರನ್ನು ಮರೆತೇ ಬಿಟ್ಟಿದೆ. ಕಿತ್ತು ಹೋದ ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ ಎಂಬುದನ್ನು ಇಡೀ ರಾಜ್ಯದ ಜನತೆ ಗಮನಿಸಿದ್ದಾರೆ. ನೀರಾವರಿ ಯೋಜನೆಗಳಿಗೆ ದುಡ್ಡಿಲ್ಲ. ಇಂತಹ ಶೋಚನೀಯ ಸ್ಥಿತಿ ರಾಜ್ಯ ಸರ್ಕಾರದ್ದಾಗಿದೆ. ರೈತರಿಗೆ ಬೆಳೆ ಪರಿಹಾರವಿಲ್ಲ. ಸರ್ಕಾರ ಇದ್ದು ಇಲ್ಲದಾಗಿದೆ. ಕೇವಲ ಅಧಿಕಾರದ ಚರ್ಚೆಯಲ್ಲಿಯೇ ಎರಡೂವರೆ ವರ್ಷ ಕಳೆದಿದ್ದಾರೆ. ಈಗಲೂ ಅದನ್ನೇ ಮಾಡುತ್ತಿದ್ದಾರೆ ಎಂದರು.
