ನಾನು ಭೂತನೂ ಅಲ್ಲ ಪಿಶಾಚಿಯೂ ಅಲ್ಲ, ವರುಣಾದಲ್ಲಿ ಸಿದ್ದರಾಮಯ್ಯ ನಿರಂತರ ಪ್ರಚಾರಕ್ಕೆ ಸೋಮಣ್ಣ ಟಾಂಗ್!
ನಾನು ಭೂತನೂ ಅಲ್ಲ ಪಿಶಾಚಿಯೂ ಅಲ್ಲ. ನಾನೊಬ್ಬ ಮನುಷ್ಯ. ಅವರು ಪ್ರಚಾರಕ್ಕೆ ಎಷ್ಟು ಬಾರಿ ಬೇಕಾದ್ರೂ ಬರ್ತಾರೆ. ನಾನ್ಯಾಕೆ ಪ್ರಶ್ನೆ ಮಾಡಲಿ ಎಂದು ಸಿದ್ದರಾಮಯ್ಯ ವರುಣಾ ಪ್ರಚಾರದ ಬಗ್ಗೆ ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಚಾಮರಾಜನಗರ (ಏ.22): ವರುಣಾದಲ್ಲಿ ಸೋಲಿನ ಭೀತಿಗೆ ಹೆದರಿ ಸಿದ್ದರಾಮಯ್ಯ ಪ್ರಚಾರಕ್ಕೆ ಹೆಚ್ಚು ದಿನ ಬರುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಸಚಿವ ವಿ ಸೋಮಣ್ಣ ಅದು ಅವರ ಕರ್ತವ್ಯ, ಅದನ್ನು ಅವರು ಮಾಡುತ್ತಿದ್ದಾರೆ. ನಾನು ಭೂತನೂ ಅಲ್ಲ ಪಿಶಾಚಿಯೂ ಅಲ್ಲ. ನಾನೊಬ್ಬ ಮನುಷ್ಯ. ಸಿದ್ದರಾಮಯ್ಯ ಅವರ ಜೊತೆಯಲ್ಲಿ ನಾನು ಕೆಲಸ ಮಾಡಿದವನು. ಅವರು ನನಗಿಂತ ದೊಡ್ಡ ನಾಯಕರು. ಅವರು ಪ್ರಚಾರಕ್ಕೆ ಎಷ್ಟು ಬಾರಿ ಬೇಕಾದ್ರೂ ಬರ್ತಾರೆ. ನಾನ್ಯಾಕೆ ಪ್ರಶ್ನೆ ಮಾಡಲಿ. ಅವರು ಬರುವುದರಿಂದ ಮತದಾರ ಎಚ್ಚೆತ್ತುಕೊಳ್ಳುತ್ತಾರೆ ಎಂದು ಚಾಮರಾಜನಗರದಲ್ಲಿ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.
ಇನ್ನು ಬಿಜೆಪಿಯ ಲಿಂಗಾಯತ ಡ್ಯಾಂ ಒಡೆದಿದೆ ಎಂಬ ಡಿಕೆಶಿವಕುಮಾರ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸೋಮಣ್ಣ, ಡಿಕೆಶಿ ಹಗಲು ಕನಸು ಕಾಣುತ್ತಿದ್ದಾರೆ. ಬಿಜೆಪಿ ವೀರಶೈವ, ಲಿಂಗಾಯತರನ್ನು, ಅನ್ಯ ಪಕ್ಷದವರನ್ನು ಒಂದೇ ರೀತಿ ಕಾಣುತ್ತಿದೆ. ಎಲ್ಲಿಗ್ ಹೋಗ್ತಾರೆ, ಏನ್ರೀ ಕಥೆ. ಇತಿಹಾಸ ಏನು ಎಂದು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು. ಒಳಮೀಸಲಾತಿ ಆಯ್ತು. ಲಿಂಗಾಯತರನ್ನು ಡಿವೈಡ್ ಮಾಡಿದ್ರಿ, ಅದು ಹೋಯ್ತು. ನೀವು ಯಾವುದರಲ್ಲಿ ಸಕ್ಸಸ್ ಆಗಿದ್ದೀರಿ. 125 ವರ್ಷ ಇತಿಹಾಸವಿರುವ ರಾಷ್ಟ್ರೀಯ ಪಕ್ಷ ಯಾಕೆ ಈ ರೀತಿ ಮಾತನಾಡುತ್ತಿದ್ದೀರಿ. ಲಿಂಗಾಯತರು ಅಲ್ಲೂ ಇಲ್ವಾ? ಆದ್ರೆ ಹೆಚ್ಚಿನ ಸಂಖ್ಯೆ ಬಿಜೆಪಿಯಲ್ಲಿದ್ದಾರೆ. ನಿಜಲಿಂಗಪ್ಪ, ವಿರೇಂದ್ರ ಪಾಟೀಲ್ ಅವರಿಗೆ ಏನಾಯ್ತು ಅಂತಾ ಎಲ್ಲರಿಗೂ ಗೊತ್ತಿದೆ
ತನ್ನ ಪರವಾಗಿ ಪ್ರತಾಪಸಿಂಹ ವರುಣಾದಲ್ಲಿ ಹೆಚ್ಚು ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿ ಸೋಮಣ್ಣ, ಪ್ರತಾಪ ಅವನು ಪ್ರತಾಪ ಸಿಂಹ. ಎಲ್ಲಿಗೆ ಆದ್ಯತೆ ನೀಡಬೇಕು ಎಂಬುದು ಅವನಿಗೆ ಗೊತ್ತಿದೆ. ನಾನು ಚಾಮರಾಜನಗರದಲ್ಲಿದ್ದೇನೆ.
ಆತ ವರುಣಾದಲ್ಲಿದ್ದಾನೆ. ಪ್ರತಾಪಸಿಂಹ ಒಬ್ಬ ಶಿಸ್ತಿನ ಸಿಪಾಯಿ, ಭವಿಷ್ಯದ ನಾಯಕ. ಪ್ರತಾಪ ಸಿಂಹನ ದೂರದೃಷ್ಟಿ ಬೇರೆಯವರಿಗೂ ಬಂದ್ರೆ ಹೈಕ್ಲಾಸ್ ಎಂದು ಸಂಸದ ಪ್ರತಾಪ ಸಿಂಹ ಪರ ಸೋಮಣ್ಣ ಬ್ಯಾಟಿಂಗ್ ಮಾಡಿದ್ದಾರೆ.
ದೇವರು ಮೆಚ್ಚುವ ಹಾಗೆ ಸೋಮಣ್ಣ ಗೆಲುವಿಗೆ ಶ್ರಮಿಸುವೆ: ಬಿ.ವೈ.ವಿಜಯೇಂದ್ರ
ಬಿಜೆಪಿಯಿಂದ ಲಿಂಗಾಯತ ಸಿಎಂ ಅಸ್ತ್ರ ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸೋಮಣ್ಣ ಒಂದು ವರ್ಷದ ಹಿಂದೆಯೇ ಅಮಿತ್ ಷಾ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ಎಂದು ಹೇಳಿದ್ದರು. ಇದನ್ನು ನೀವೆ ಅರ್ಥ ಮಾಡಿಕೊಳ್ಳಬೇಕು. ಮುಂದಿನ ಸಿಎಂ ಆಗುವ ಬಗ್ಗೆ ನಾನು ಭ್ರಮೆ ಇಟ್ಟುಕೊಂಡಿಲ್ಲ. ಇನ್ನು ಇಪ್ಪತ್ತು ದಿನ ಕಾಯಿರಿ, ಎಲ್ಲಾ ಸರಿಹೋಗುತ್ತೆ. ತಾಯಿ ಚಾಮುಂಡಿ ಏನು ಹೇಳ್ತಾಳೆ ಅದನ್ನು ಕೇಳ್ತೀನಿ ಎಂದಿದ್ದಾರೆ.
ವರುಣಾ ಚಕ್ರವ್ಯೂಹದಲ್ಲಿ ಸಿಲುಕಿದ್ರಾ ಸಿದ್ದರಾಮಯ್ಯ.. ಅಬ್ಬರಿಸಿ ಬೊಬ್ಬಿರಿದ ಸಿದ್ದು
ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.